Site icon Vistara News

Lakshmi Hebbalkar : ನಿಮ್ಮ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಸಕ್ಸಸ್‌; ಸಿದ್ದು ಸವದಿಗೆ ಸಚಿವೆ ಹೆಬ್ಬಾಳ್ಕರ್‌ ತಿರುಗೇಟು

Lakshmi Hebbalkar Siddu savadi budet session

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅರ್ಹರಿಗೆ ತಲುಪುತ್ತಿಲ್ಲ ಎಂಬ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ (MLA Siddu Savadi) ಅವರ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿರುಗೇಟು ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸ್ಥಿತಿ (Economic position) ಸುಧಾರಿಸಿದ್ದು, ಸುಮಾರು 1.18 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ (Budget session 2024) ವೇಳೆ ಗುರುವಾರ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯೋಜನೆಗೆ 1.28 ಕೋಟಿ ಮಹಿಳೆಯರು ಅರ್ಹರಿದ್ದು, ಈ ಪೈಕಿ ಯೋಜನೆಗೆ ನೋಂದಣಿಯಾಗಿರುವ 1.18 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ವಾರ್ಷಿಕ 34 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದರು.

ಇದೊಂದು ದೊಡ್ಡ ಯೋಜನೆ. ಗೃಹಲಕ್ಷ್ಮಿ ಬಂದ ಬಳಿಕ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದರು. ಎಲ್ಲಾ ಫಲಾನುಭವಿಗಳು ಸರ್ಕಾರಕ್ಕೆ ಆಶೀರ್ವಾದ ಮಾಡುತ್ತಿದ್ದಾರೆ. ನೀವಷ್ಟೇ (ವಿರೋಧ ಪಕ್ಷ) ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

ಇದನ್ನೂ ಓದಿ: Karnataka Budget Session 2024: ದೇವಸ್ಥಾನಗಳ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂ. ಸಿಗುವಂತೆ ವಿಧೇಯಕ!

ನಿಮ್ಮ ಕ್ಷೇತ್ರದ ಅಂಕಿ ಅಂಶ ಬೇಕಾದ್ರೂ ಕೊಡ್ತೀನಿ ಎಂದ ಹೆಬ್ಬಾಳ್ಕರ್‌

ಗೃಹಲಕ್ಷ್ಮಿ ಯೋಜನೆ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಮಂದಿಗೆ ತಲುಪಿದೆ. ಇದರಿಂದ ಆಗಿರುವ ಅನುಕೂಲವೇನು ಎನ್ನುವುದನ್ನು ಅಂಕಿ ಅಂಶ ಸಮೇತ ಬೇಕಿದ್ದರೆ ನೀಡುವೆ. ಅನಾವಶ್ಯಕವಾಗಿ ಯೋಜನೆ ಬಗ್ಗೆ ಟೀಕೆ ಮಾಡಬೇಡಿ ಎಂದು ಹೇಳಿದರು.

ಸರಾಸರಿ ನೂರು ಜನರಲ್ಲಿ 97 ಮಂದಿಗೆ ಯೋಜನೆ ತಲುಪಿದ್ದು, ಉಳಿದ ಮೂರು ಮಂದಿಗೆ ಕೆಲವೊಂದು ಕಾರಣದಿಂದ ತಲುಪಿಲ್ಲ. ಈ ಸಮಸ್ಯೆಗೆ ನಮ್ಮ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ವಿಧವಾ ವೇತನ ಪಡೆಯಲು ಲಂಚ ನೀಡುವ ಸ್ಥಿತಿ ಇತ್ತು. ಆದರೆ ಗೃಹಲಕ್ಷ್ಮಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಹಿರಿಯ ಶಾಸಕರು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿಕೊಂಡರು.

ನೇಕಾರರಿಗೆ ಯಾವುದೇ ಹಣ ಇಟ್ಟಿಲ್ಲ ಎಂದ ಸಿದ್ದು ಸವದಿ

ಇದೇ ವೇಳೆ ಸಿದ್ದು ಸವದಿ ಅವರು, ʻʻನೇಕಾರರ ಮೇಲೆ ಈ ಸರ್ಕಾರಕ್ಕೆ ಯಾಕಿಷ್ಟು ದ್ವೇಷವೋ ಗೊತ್ತಿಲ್ಲ. ಸಿಎಂ ಘೋಷಿಸಿದ ಬಜೆಟ್ ನಲ್ಲಿ ನೇಕಾರರಿಗೆ ಒಂದು ರೂಪಾಯಿ ಇಟ್ಟಿಲ್ಲ. ಹಿಂದಿನ ಸರ್ಕಾರದ ಯೋಜನೆಗಳ ಮೇಲೂ ಚಪ್ಪಡಿ ಎಳೆದಿದೆ. ಹಲವು ಸಮುದಾಯಗಳಿಗೆ ಸರ್ಕಾರ ದ್ರೋಹ ಮಾಡಿದೆ ಎಂದು ಹೇಳಿದರು.

ʻʻʻನೇಕಾರರಿಗೆ ತಿಂಗಳಿಗೆ ಪಿಂಚಣಿ ರೂಪಿಸಿ ತಲಾ ಹತ್ತು ಹತ್ತು ಸಾವಿರ ಕೊಡಿ. ನಿಮಗೆ ಮತ ಹಾಕಿಲ್ಲ ಎಂದು ಅವರಿಗೆ ಅನ್ಯಾಯ ಮಾಡಬೇಡಿʼʼ ಎಂದು ಹೇಳಿದ ಸಿದ್ದು ಸವದಿ, ಸರ್ಕಾರದ ಐದು ಗ್ಯಾರಂಟಿಗಳು ಕೂಡ ವಿಫಲವಾಗಿವೆ ಎಂದರು.

ʻʻಶಕ್ತಿ ಯೋಜನೆ ಘೋಷಿಸಿ ಬಸ್ಸುಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ. ಬಸ್ಸುಗಳನ್ನು ಹತ್ತಲು ಬಾಗಿಲುಗಳೇ ಕಿತ್ತು ಹೋಗಿವೆ. ಹಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಜೆಸಿಬಿ, ಟ್ರಾಕ್ಟರ್ ಮೂಲಕ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ. ನಿಮಗೆ ಮಹಿಳೆಯರ ಮೇಲೆ ಪ್ರೀತಿ ಇದ್ದರೆ ಹೊಸ ಬಸ್ಸುಗಳನ್ನು ಖರೀದಿಸಿ ಕೊಡಿ. ಕಿಟಕಿಯಿಂದ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಹತ್ತುವ ಸ್ಥಿತಿ ಇದೆ. ಬಹುಶ ಹೆಣ್ಣು ಮಕ್ಕಳು ಮತ ಹಾಕಿಲ್ಲ ಅಂತಾ ಈ ರೀತಿ ಸೇಡು ತೀರಿಸಿಕೊಳ್ತಿದ್ದೀರಿʼʼ ಎಂದೆಲ್ಲ ಆರೋಪ ಮಾಡಿದರು.

Exit mobile version