Site icon Vistara News

Residential Schools : ಇದು ಮಣಿವಣ್ಣನ್‌ ಹುಚ್ಚು ಆದೇಶ. ಅಧಿಕಾರಿಗಳು ಸರ್ಕಾರದ ಮಾತು ಕೇಳ್ತಿಲ್ಲ: ಆರ್‌. ಅಶೋಕ್‌

Residential Schools A AShok Manivannan

ಬೆಂಗಳೂರು: ರಾಜ್ಯದ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಹಾಕಿರುವ ರಾಷ್ಟ್ರಕವಿ ಕುವೆಂಪು (Rashtrakavi Kuvempu) ಅವರ ಕಾವ್ಯ ಸಾಲು ʻಜ್ಞಾನ ದೇಗುಲ ಕೈಮುಗಿದು ಒಳಗೆ ಬನ್ನಿʼಯನ್ನು ಬದಲಾಯಿಸಿದ್ದು ಸಮಾಜ‌ ಕಲ್ಯಾಣ ಇಲಾಖೆಯ (Social Welfare department) ಮುಖ್ಯ ಕಾರ್ಯದರ್ಶಿಯಾಗಿರುವ ಕೆ. ಮಣಿವಣ್ಣನ್‌ (K Manivannan). ಅವರ ಹುಚ್ಚು ಆದೇಶಕ್ಕೆ ತಕ್ಕಂತೆ ರಾಜ್ಯ ಸರ್ಕಾರವೇ ಕುಣಿಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ (R Ashok) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಈ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರಸ್ತಾಪ ಮಾಡಿದ್ದಕ್ಕೆ ಪೂರಕವಾಗಿ ಮಾತನಾಡಿದ ಆರ್‌ . ಅಶೋಕ್‌ ಅವರು, ಕೆ ಮಣಿವಣ್ಣನ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಬದಲಾವಣೆಯಾಗಿದ್ದಾರೆ ಅಂತ ಪ್ರಪಂಚವೇ ಬದಲಾಗಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಅದನ್ನು ಈ ಸರ್ಕಾರವೂ ಸಮರ್ಥಿಸುತ್ತಿದೆ. ಇಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.

ʻʻಕುವೆಂಪು ಅವರ ʻಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿʼʼ ಎನ್ನುವುದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯುವಂಥದ್ದು. ನೀವು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಎಲ್ಲಿ ಹೋದರೂ ಎಲ್ಲಾ ಕಡೆ ಜ್ಞಾನ ದೇಗುಲ ಎಂದು ಹೇಳುತ್ತೇವೆ. ಶಾಲೆ ಒಂದು ದೇವಸ್ಥಾನವಿದ್ದಂತೆʼʼ ಎಂದು ಹೇಳಿದ ಆರ್‌. ಅಶೋಕ್‌ ಅವರು, ಇವರು ಧೈರ್ಯದಿಂದ ಪ್ರಶ್ನಿಸಿ ಅಂದ್ರೆ ಪ್ರಶ್ನೆ ಮಾಡೋದು ಎಲ್ಲಿ..? ಪ್ರಶ್ನೆಯನ್ನು ಶಿಕ್ಷಕರ ಬಳಿ ಮಾಡಬೇಕು. ಯಾವ ಪಾಠ ಅರ್ಥವಾಗಲ್ವೋ ಅಲ್ಲಿ ಪ್ರಶ್ನೆ ಮಾಡಬೇಕು. ಅದನ್ನು ಬಿಟ್ಟು ಕುವೆಂಪು ಅವರ ಈ ಕವಿ ಸಾಲನ್ನು ತೆಗೆದುಹಾಕುವುದು ಕೆಟ್ಟ ಸಂಸ್ಕೃತಿʼʼ ಎಂದು ಹೇಳಿದರು.

ಇದನ್ನೂ ಓದಿ : Residential Schools: ವಸತಿ ಶಾಲೆಯ ಘೋಷವಾಕ್ಯ ಬದಲು; ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲವೆಂದ ಡಿಕೆಶಿ

ಮೊನ್ನೆ ಗಣೇಶನ ಪೂಜೆಗೆ ವಿರೋಧ, ಈಗ ಕುವೆಂಪುಗೆ ವಿರೋಧ

ಈ ರೀತಿ ಅಸಂಬದ್ಧ ಆದೇಶ ಹೊರಡಿಸುವುದರ ಹಿಂದೆ ಇಡೀ ಸರ್ಕಾರವೇ ಇದೆ ಎಂದು ನನಗೆ ಅನಿಸುತ್ತದೆ. ಮೊನ್ನೆ ಗಣೇಶನ ಪೂಜೆ ಮಾಡೋ ಹಾಗಿಲ್ಲ ಸರಸ್ವತಿ ಪೂಜೆ ಮಾಡೋ ಹಾಗಿಲ್ಲ ಅಂತ ಆದೇಶ ಮಾಡಿದರು. ವಿರೋಧ ವ್ಯಕ್ತವಾದಾಗ ವಾಪಸ್‌ ಪಡೆದರು. ಈಗ ಮತ್ತೊಂದು ಕಥೆ. ಕುವೆಂಪು ಅವರ ಕವಿ ಸಾಲನ್ನು ತೆಗೆದು ಮಣಿವಣ್ಣನ್ ಅವರ ವಾಕ್ಯವನ್ನು ಹಾಕಿದ್ದಾರೆ ಎಂದು ಗೇಲಿ ಮಾಡಿದರು ಆರ್.‌ ಅಶೋಕ್‌.

ಈ ರೀತಿ ಬದಲಾವಣೆ ಮಾಡಲು ಸರ್ಕಾರದ ಆದೇಶ ಎಲ್ಲಿದೆ? ಮಂತ್ರಿಗಳ ಆದೇಶ ಎಲ್ಲಿದೆ? ಇದುವರೆಗೂ ಮಂತ್ರಿಗಳ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ. ಒಬ್ಬ ಪ್ರಧಾನ ಕಾರ್ಯದರ್ಶಿ ಹುಚ್ಚುಚ್ಚಾಗಿ ಅವನಿಗೆ ಮನಸ್ಸಿಗೆ ಬಂದ ಹಾಗೆ ಚೇಂಜ್ ಮಾಡಿದ್ದಾನೆ ಎಂದು ಆಕ್ರೋಶದಿಂದ ಹೇಳಿದ ಆರ್‌. ಅಶೋಕ್‌, ʻʻಈಗ ವಿಧಾನಸೌಧದ ಮುಂದೆ ಸರ್ಕಾರದ ಕೆಲಸ ದೇವರ ಕೆಲಸ ಅಂತ ಇದೆ. ಯಾರೋ ಕಾರ್ಯದರ್ಶಿ ಬಂದು ಅದನ್ನ ಅಳಿಸಿ ಹಾಕಿ ಅಂದರೆ ಏನರ್ಥ?ʼʼ ಎಂದು ಆರ್‌. ಅಶೋಕ್‌ ಪ್ರಶ್ನಿಸಿದರು.

ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ಪದಪುಂಜವನ್ನು ಕೆಂಗಲ್ ಹನುಮಂತಯ್ಯನವರು ಆ ಕಾಲದಲ್ಲಿ ಯಾವ ಉದ್ದೇಶಕ್ಕೆ ಬಳಸಿದ್ದರು? ಅದರ ಹಿಂದಿನ ಅರ್ಥ ಏನು..? ಇದು ದೇವರ ಕೆಲಸ ಇಲ್ಲಿಗೆ ಬರುವರೆಲ್ಲ ಭ್ರಷ್ಟಾಚಾರ ಆಗಬಾರದು ಎಂಬ ತಿಳುವಳಿಕೆ ಹೇಳಲು ಮಾಡಿದ್ದರು. ಈಗ ಮಕ್ಕಳು ಕೈಮುಗಿದು ಒಳಗೆ ಬನ್ನಿ ಅಂತ ಅಂದ್ರೆ ತಪ್ಪೇನು? ಬೇರೆ ದೇಶದ ಪ್ರಧಾನಿಗಳು ನಮ್ಮ ದೇಶಕ್ಕೆ ಬಂದಾಗ ಅವರು ಕೈ ಮುಗಿಯುತ್ತಾರೆ. ಇಷ್ಟೆಲ್ಲ ಇರುವಾಗ ಕೇಡುಗಾಲ ಬಂದಿರುವ ಈ ಸರ್ಕಾರ ಆದೇಶ ಇಲ್ಲದೆ ನಾಮಫಲಕ ಬದಲಾಯಿಸಿದೆ ಎಂದರು ಅಶೋಕ್‌.

ʻʻಈಗ ಯಾವ ಅಧಿಕಾರಿಗಳು ಸರ್ಕಾರದ ಮಾತು ಕೇಳುತ್ತಿಲ್ಲ. ಸರ್ಕಾರ ಇದೆಯೋ ಸತ್ತಿದೆಯೋ ಗೊತ್ತಿಲ್ಲ.ʼʼ ಎಂದು ಹೇಳಿದ ಅವರು, ಕಳೆದ ಬಾರಿಯ ಸಿದ್ದರಾಮಯ್ಯನವರೇ ಬೇರೆ, ಈಗಿರುವ ಸಿದ್ದರಾಮಯ್ಯನವರೇ ಬೇರೆ. ಸಿದ್ದರಾಮಯ್ಯನವರಿಗೆ ಆಡಳಿತದಲ್ಲಿ ಹಿಡಿತ ಇಲ್ಲ. ಮೊನ್ನೆ ಬಜೆಟ್ ಮಾಡಿದಾಗಲೂ ನೋಡಿದ್ದೇವೆ. ಅದು ಅವರ ಬಜೆಟ್ ಅಲ್ಲ ಡೂಪ್ಲಿಕೇಟ್ ಬಜೆಟ್. ಅಧಿಕಾರಿಗಳು ಬೇಕಾಬಿಟ್ಟಿ ಆದೇಶವನ್ನು ಚೇಂಜ್ ಮಾಡ್ತಿದ್ದಾರೆ. ಅವರು ಮಂತ್ರಿಗಳನ್ನು ಕೇಳಲ್ಲ ಮುಖ್ಯಮಂತ್ರಿಗಳ ಮಾತೂ ಕೇಳಲ್ಲ. ಸರ್ಕಾರಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲʼʼ ಎಂದು ಅಶೋಕ್‌ ಹೇಳಿದರು.

ಮಣಿವಣ್ಣನ್‌ ವಿರುದ್ಧ ಕ್ರಮಕ್ಕೆ ಆರ್‌. ಅಶೋಕ್‌ ಆಗ್ರಹ

ʻʻಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ. ದಿಕ್ಕು ದೆಸೆ ಇಲ್ಲದೆ ಓಡುತ್ತಿದೆ. ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟು ಸಚಿವರು ಮೋಜು-ಮಸ್ತಿಯಲ್ಲಿದ್ದಾರೆ. ಹೇಳೋರು ಕೇಳೋರು ಇಲ್ಲದಂತ ಸರ್ಕಾರವಾಗಿದೆ. ಯಾವ ಪ್ರಧಾನ ಕಾರ್ಯದರ್ಶಿ ಇಂಥ ಆದೇಶ ಕೊಟ್ಟಿದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಕೆಲಸ ಮಾಡಬೇಕುʼʼ ಎಂದು ಹೇಳಿದ ಆರ್‌. ಅಶೋಕ್‌, ಈ ನಡೆಯನ್ನು ಶಿಕ್ಷಣ ಸಚಿವರು ಖಂಡಿಸಿದ್ದಾರೆ. ಆದರೆ ಬೇರೆ ಮಂತ್ರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ಮಂತ್ರಿ ಮಂಡಲದಲ್ಲೇ ಗೊಂದಲವಿದೆʼʼ ಎಂದು ಹೇಳಿದರು.

Exit mobile version