ಪುಣೆ: ಒಬ್ಬ ಅಜ್ಜಿಯ ಬಾಯಲ್ಲಿರುವ ಹಲ್ಲುಗಳೆಲ್ಲ ಉದುರಿಹೋಗಿವೆ. ಮತ್ತೊಬ್ಬ ಅಜ್ಜನ ತಲೆಯಲ್ಲಿ ಹುಡುಕಿದರೂ ಒಂದು ಕೂದಲು ಸಿಗುವುದಿಲ್ಲ. ಮತ್ತೊಬ್ಬರಿಗೆ ಬಿಪಿ, ಇನ್ನೊಬ್ಬರಿಗೆ ಶುಗರ್, ಪಕ್ಕದಲ್ಲೇ ಕುಳಿತ ಅಜ್ಜಿಗೆ ಮಂಡಿನೋವು… ಹಾಗಂತ ಇದು ವೃದ್ಧಾಶ್ರಮವೋ, ಆಸ್ಪತ್ರೆಯದ್ದೋ ಚಿತ್ರಣವಲ್ಲ. 1954ರಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿದಾಗ ಬಿಪಿ, ಶುಗರ್ ಲೆಕ್ಕಕ್ಕೇ ಇರಲಿಲ್ಲ. ಹಾಡು, ಕುಣಿತ, ಮೋಜು, ಮಸ್ತಿಯೇ ಕಾಣಿಸಿತು.
ಹೌದು, ಪುಣೆಯಲ್ಲಿ ಎಲ್ಲ ಹಳೆಯ ವಿದ್ಯಾರ್ಥಿಗಳು ಒಂದುಗೂಡಿದ್ದು, ಹಾಡು ಹಾಡಿ, ಕುಣಿದು, ಒಬ್ಬರ ಕಾಲು ಮತ್ತೊಬ್ಬರು ಎಳೆದು ಖುಷಿಪಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. 10ನೇ ತರಗತಿ ಓದುತ್ತಿದ್ದ ಬ್ಯಾಚ್‌ನ ಬಹುತೇಕರು ಒಂದೆಡೆ ಸೇರಿ ಹಳೆಯ ಎಲ್ಲ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಶಾಲೆಯಲ್ಲಿ ಮಾಡಿದ ಚೇಷ್ಟೆ, ಅವುಡುಗಚ್ಚಿ ಓದಿದ ರೀತಿ, ದಶಕಗಳ ಹಿಂದೆ ಇದ್ದ ಗೆಳೆತನ, ಈಗಿರುವ ಜೀವನ, ಮಕ್ಕಳು, ಮೊಮ್ಮಕ್ಕಳು… ಹೀಗೆ ನೂರಾರು ವಿಚಾರಗಳ ಕುರಿತು ಎಲ್ಲರೂ ಉಭಯ ಕುಶಲೋಪರಿ ನಡೆಸಿದ್ದಾರೆ.
ಇಲ್ಲಿದೆ ಮೋಜು-ಮಸ್ತಿಯ ವಿಡಿಯೊ
ಜೀವನದ ನೋವು-ನಲಿವುಗಳನ್ನು ಮರೆತು, 1954ರ ಬ್ಯಾಚ್‌ನ ವಿದ್ಯಾರ್ಥಿಗಳು ಒಂದೆಡೆ ಸೇರಿರುವ ಅಮೋಘ ಕ್ಷಣಗಳನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಎಂಜಾಯ್ ಮಾಡಿದ್ದಾರೆ. ಅವರೂ ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಒತ್ತಡದ ಜೀವನದ ಮಧ್ಯೆ ನಮ್ಮ ಗೆಳೆಯರನ್ನು ಸೇರುವುದೇ ನಿಜವಾದ ರಿಲೀಫ್ ಎಂದೆಲ್ಲ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Video: ಮನೆಗೇ ಬರಲಿದೆ ಹಿಟ್ಟಿನ ಗಿರಣಿ; ಇದು 3 ಈಡಿಯಟ್ಸ್ ಸಿನಿಮಾದ ಫುನ್ಸುಕ್ ವಾಂಗ್ಡು ರಿಯಲ್ ಕತೆ
1954ರಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದವರಿಗೆ ಈಗ 80 ವರ್ಷ ದಾಟಿದೆ. ಆದರೆ, ಅವರೆಲ್ಲರೂ ಮತ್ತೆ ಸೇರಿದಾಗ ಮನಸ್ಸು 16ನೇ ವಯಸ್ಸಿಗೆ ಮರಳಿತ್ತು. ದಶಕಗಳ ನಂತರ ಸ್ನೇಹ ಸಮ್ಮಿಲನವಾದ ಕಾರಣ ಪ್ರತಿಯೊಬ್ಬರ ಮುಖದಲ್ಲೂ ಸಂತೋಷ ಮನೆ ಮಾಡಿತ್ತು. ಹಳೆಯ ನೆನಪುಗಳೆಲ್ಲ ಒತ್ತರಿಸಿ ಬರುತ್ತಿದ್ದವು. ಹಾಡು, ಕುಣಿತ, ಅಪ್ಪುಗೆಯ ಮೂಲಕ ಎಲ್ಲವೂ ವ್ಯಕ್ತವಾಗುತ್ತಿದ್ದವು. ಹಾಗಾಗಿ, ಈ ವಿಡಿಯೊ ಸಾಮಾಜಿಕ ಜಾಲತಾಣಿಗರ ಮನಸ್ಸನ್ನೂ ಕದ್ದಿದೆ. ಒಟ್ಟಿನಲ್ಲಿ ದಶಕಗಳ ಸ್ನೇಹ ಗೆದ್ದಿದೆ.