ತೆರೆದ ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳು (Child Falls In to Borewell) ಜೀವಂತವಾಗಿ ಹೊರಬರುವುದು ತೀರಾತೀರ ಅಪರೂಪ. ನಿರ್ಮಾಣ ಹಂತದಲ್ಲಿರುವುದನ್ನೋ, ಹಾಳಾದ ಕೊಳವೆಬಾವಿಯನ್ನೋ ಹಾಗೇ ಬಿಟ್ಟಾಗ, ಮಕ್ಕಳು ಗೊತ್ತಿಲ್ಲದೆ ಕಾಲು ಹಾಕಿ ಸೀದಾ ನೂರಾರು ಅಡಿ ಆಳಕ್ಕೆ ಹೋಗಿ ಸಿಲುಕಿಬಿಡುತ್ತವೆ. ನಮ್ಮ ದೇಶದಲ್ಲಿ ನಾವಿಂಥ ಪ್ರಕರಣಗಳನ್ನು ಹಲವು ನೋಡಿದ್ದೇವೆ. ಕೊಳವೆ ಬಾವಿಗೆ ಮಕ್ಕಳು ಬಿದ್ದಾಗ ಅವರನ್ನು ಎತ್ತಲು ಏನೇನೆಲ್ಲ ಕಸರತ್ತು ಮಾಡುತ್ತಾರೆ..! ಜೆಸಿಬಿಗಳು, ಇನ್ನಿತರ ಯಂತ್ರಗಳು, ಮಾನವರು ಎಲ್ಲ ಸೇರಿ ಇನ್ನಿಲ್ಲದ ಪ್ರಯತ್ನ ಮಾಡಬೇಕಾಗುತ್ತದೆ. ಕೊಳವೆ ಬಾವಿ ಪಕ್ಕದಲ್ಲೇ ಭೂಮಿ ಕೊರೆಯುತ್ತಾರೆ. ಅಷ್ಟೆಲ್ಲ ಮಾಡಿಯೂ ಮಕ್ಕಳು ಜೀವಂತವಾಗಿ ಇರುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಹಾಗಿದ್ದಾಗ್ಯೂ ಕೆಲವು ಪ್ರಕರಣಗಳಲ್ಲಿ ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಜೀವಂತವಾಗಿ ಹೊರತಂದ ಉದಾಹರಣೆಗೂ ಇವೆ.
ಈ ತೆರೆದ ಕೊಳವೆ ಬಾವಿ ಸಮಸ್ಯೆ ಬರೀ ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಇತರ ದೇಶಗಳಲ್ಲೂ ಇದೆ. ಇದೀಗ ರಷ್ಯಾದ್ದು ಎನ್ನಲಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಗ್ಲೋಬಲ್ ವ್ಯಾಪಾರ ಸಂಸ್ಥೆಯಾದ ಪಿರಮಲ್ ಗ್ರೂಪ್ನ ಸ್ಟ್ರ್ಯಾಟೆಜಿಕ್ ಬಿಸಿನೆಸ್ ಗ್ರೂಫ್ ಡೈರೆಕ್ಟರ್ ಆಗಿರುವ ಹರಿಂದರ್ ಎಸ್. ಸಿಕ್ಕಾ ಅವರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ರಷ್ಯಾದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಹುಡುಗಿಯನ್ನು ರಕ್ಷಿಸಿದ ದೃಶ್ಯವಿದು. ವಿಡಿಯೊ ನೋಡಿದರೆ ಒಂದು ಸಲ ರೋಮಾಂಚನವಾಗುತ್ತದೆ. ಕೊಳವೆಬಾವಿಯಲ್ಲಿ ಬಿದ್ದವರನ್ನು ಹೀಗೂ ರಕ್ಷಣೆ ಮಾಡಬಹುದಾ? ಎಂಬ ಪ್ರಶ್ನೆಯೂ ಉದ್ಭವ ಆಗುತ್ತದೆ.
ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿಯನ್ನು ಮೇಲೆತ್ತಲು ಅಲ್ಲಿನ ರಕ್ಷಣಾ ಸಿಬ್ಬಂದಿ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಾರೆ. ಏನೆಲ್ಲ ಕೌಶಲ ಪ್ರಯೋಗ ಮಾಡಬಹುದೋ ಅದೆಲ್ಲವನ್ನೂ ಮಾಡುತ್ತಾರೆ. ಆದರೆ ಪ್ರಯತ್ನ ವ್ಯರ್ಥವಾಗುತ್ತದೆ. ಆಮೇಲೆ ಅದ್ಯಾರಿಗೆ ಉಪಾಯ ಬಂತೋ ಗೊತ್ತಿಲ್ಲ, 17ವರ್ಷದ ಹುಡುಗಿಯೊಬ್ಬಳನ್ನು ತಲೆಕೆಳಗಾಗಿ ಆ ಕೊಳವೆ ಬಾವಿಯಲ್ಲಿ ಬಿಡುತ್ತಾರೆ. ಅವಳ ಎರಡೂ ಕಾಲಿಗೆ ಹಗ್ಗ ಕಟ್ಟಿ ಮೇಲಿಂದ, ರಕ್ಷಣಾ ಸಿಬ್ಬಂದಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಕೊಳವೆ ಬಾವಿಯೊಳಗೆ ಅವಳು ಹೋಗಿ, ಮಗುವನ್ನು ಎತ್ತಿಕೊಂಡ ತಕ್ಷಣವೇ ಹೊರಗೆ ಎಳೆಯುತ್ತಾರೆ. 2ವರ್ಷದ ಬಾಲಕಿ, 17ವರ್ಷದ ಯುವತಿ ಇಬ್ಬರೂ ಸುರಕ್ಷಿತವಾಗಿ ಕೊಳವೆಬಾವಿಯಿಂದ ಈಚೆಗೆ ಬಂದಿದ್ದಾರೆ. ಆ ಪುಟಾಣಿ ಹೊರಗೆ ಬರುತ್ತಿದ್ದಂತೆ ಅವಳ ಪಾಲಕರು ಕಣ್ಣೀರಾಗಿದ್ದಾರೆ. ಅಲ್ಲಿದ್ದವರೆಲ್ಲ ಯುವತಿಯನ್ನು, ಆಕೆಯ ಧೈರ್ಯವನ್ನು ಮೆಚ್ಚಿ ಹೊಗಳಿದ್ದಾರೆ.
ಎಷ್ಟೇ ಪ್ರಯತ್ನ ಮಾಡಿದರೂ ಮಗುವನ್ನು ಹೊರಗೆ ತೆಗೆಯಲು ಸಾಧ್ಯವಾಗದೆ ಇದ್ದಾಗ, ಯಾರನ್ನಾದರೂ ಒಳಗೆ ಕಳಿಸಿದರೆ ಮಗು ತೆಗೆಯಬಹುದು ಎಂಬ ಪ್ಲ್ಯಾನ್ ಏನೋ ಮಾಡಲಾಯಿತು. ಆದರೆ ಅಷ್ಟು ಬೇಗ ಯಾರೂ ಮುಂದೆ ಬರಲಿಲ್ಲ. ಇನ್ನು ಆ ಕೊಳವೆ ಬಾವಿ ತೀರ ಸಣ್ಣದಾಗಿ ಇರುವ ಕಾರಣ, ದಪ್ಪಗಿರುವವರು ಅದರಲ್ಲಿ ಹೋಗಲು ಸಾಧ್ಯವಾಗುತ್ತಿರಲೂ ಇಲ್ಲ. ಆಗ ಈ 17ವರ್ಷದ ಯುವತಿ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತುಂಬ ಹಳೇ ವಿಡಿಯೊ!
ಈ ವಿಡಿಯೊ ವೈರಲ್ ಆಗುತ್ತಿರುವ ಬೆನ್ನಲ್ಲೇ ನೆಟ್ಟಿಗರು ಕೆಲವರು ಇದು ರಷ್ಯಾದ್ದು ಅಲ್ಲ, ರೊಮಾನಿಯಾ ದೇಶದ್ದು ಎನ್ನುತ್ತಿದ್ದಾರೆ. ಅದೂ ಕೂಡ ಸುಮಾರು ದಶಕಗಳಷ್ಟು ಹಳೇ ವಿಡಿಯೊ ಎನ್ನುತ್ತಿದ್ದಾರೆ. ರಷ್ಯಾದ್ದೇ ಆಗಿರಲಿ, ರೊಮೇನಿಯಾದ್ದೇ ಆಗಿರಲಿ, ಇದೊಂದು ನೈಜ ಘಟನೆಯೇ ಆಗಿದ್ದು, ವಿಡಿಯೊ ನೋಡಿದರೆ ಮೈ ಜುಂ ಎನ್ನುತ್ತದೆ.
ಈ ರೋಮಾಂಚನಕಾರಿ ವಿಡಿಯೊವನ್ನು ನೀವೂ ನೋಡಿ:
In Russia,a 2 year old girl fell in a tube well.Rescue team tried its best to get her out,but failed.
— Harinder S Sikka (@sikka_harinder) June 11, 2023
Finally a 17 yr old girl volunteered to go into the tube well.Look what happened. pic.twitter.com/Dz1f8IiGKw