ಮಲೇಷ್ಯಾದಿಂದ ಚೆನ್ನೈ ಏರ್ಪೋರ್ಟ್ಗೆ (Chennai Airport) ಬಂದಿಳಿದ ಮಹಿಳೆಯ ಬ್ಯಾಗ್ನಲ್ಲಿ 22 ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಚೆನ್ನೈ ಏರ್ಪೋರ್ಟ್ನಲ್ಲಿ ಭದ್ರತಾ ಸಿಬ್ಬಂದಿ ಕೈಯಲ್ಲಿ ಆಕೆ ಸಿಕ್ಕಿಬಿದ್ದಿದ್ದಾಳೆ. ಹಾವುಗಳು ನೆಲದ ಮೇಲೆ ಹರಿದಾಡುತ್ತಿರುವ, ಭದ್ರತಾ ಸಿಬ್ಬಂದಿ ಹಾವುಗಳನ್ನು ಕೈಯಲ್ಲಿ ಹಿಡಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲೇಷ್ಯಾದ ಕೌಲಾಲಂಪುರ್ದಿಂದ ಆಕೆ ಚೆನ್ನೈಗೆ ಫ್ಲೈಟ್ ನಂಬರ್ ಎಕೆ13ನಲ್ಲಿ ಬಂದಿಳಿದಿದ್ದಳು. ಚೆನ್ನೈನಲ್ಲಿ ಆಕೆಯ ಬ್ಯಾಗ್ನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. 22 ವಿವಿಧ ಪ್ರಬೇಧಗಳ ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಆ ಮಹಿಳೆಯನ್ನು ಸದ್ಯ ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಅವಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಈ ಹಿಂದೆ ಜನವರಿಯಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಚೆನ್ನೈ ಏರ್ಪೋರ್ಟ್ಗೆ ಬ್ಯಾಂಕಾಕ್ನಿಂದ ಬಂದವರೊಬ್ಬರ ಎರಡು ಬ್ಯಾಗ್ನಲ್ಲಿ 45 ರಾಯಲ್ ಹೆಬ್ಬಾವುಗಳು, ಮೂರು ನಕ್ಷತ್ರ ಆಮೆಗಳು, ಎಂಟು ಕಾರ್ನ್ ಹಾವುಗಳು ಮತ್ತು ಮೂರು ಮಾರ್ಮೋಸೆಟ್ಸ್ ಇದ್ದವು. ಹೀಗೆ ವಿದೇಶಗಳಿಂದ ಹಾವುಗಳು, ಇತರ ಜೀವಿಗಳನ್ನು ಚೆನ್ನೈಗೆ ತರುವ ಪ್ರಕರಣಗಳು ಹೆಚ್ಚಿವೆ. ಈಗಾಗಲೇ ಹಲವು ಜನರು ಇದೇ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಸರ್ಕಾರ ಯು ಟರ್ನ್; ಮದುವೆಗಳಲ್ಲಿ ಮದ್ಯ ಸೇವನೆಗೆ ಇಲ್ಲ ಅವಕಾಶ!
ವಿದೇಶಗಳಿಂದ ಹಾವು ಮತ್ತಿತರ ವನ್ಯಜೀವಿಗಳನ್ನು ತಮಿಳುನಾಡಿಗೆ ಕಳ್ಳಸಾಗಣೆ ಮಾಡಿ, ಇಲ್ಲಿಂದ ಬೇರೆ ರಾಜ್ಯಗಳು ಮತ್ತು ಇತರ ದೇಶಗಳಿಗೆ ಕಳಿಸುವ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮಿಳುನಾಡು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆಗೆ ತಿದ್ದುಪಡಿಯನ್ನು ಮಾಡಿದ್ದು, ಅದು 2023ರ ಏಪ್ರಿಲ್ 1ರಿಂದ ಜಾರಿಗ ಬಂದಿದೆ. ಇದರಡಿಯಲ್ಲಿ ಯಾರೇ ಆಗಲಿ, ಪಕ್ಷಿ, ಪ್ರಾಣಿ, ದಂಶಕಗಳು ಸೇರಿ ಯಾವುದೇ ಜೀವಿಗಳ ವಿಶೇಷ ಪ್ರಭೇದಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.