ಪುಟಾಣಿ ಮಕ್ಕಳ ವಿಡಿಯೋಗಳು ಆಗಾಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಮಕ್ಕಳ ಮುಗ್ಧ ನಡೆಗೆ ಮರುಳಾಗುವುದವರೇ ಇಲ್ಲ. ಇಲ್ಲೂ ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ಇಲ್ಲಿ ಮಗುವೊಂದು ತನ್ನಮ್ಮ ತನ್ನ ಚಾಕೋಲೇಟ್ ಕದ್ದಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಎಲ್ಲರ ಮನ ಕದ್ದಿದೆ!
ಹೌದು. ಮಧ್ಯಪ್ರದೇಶದ ಬುರ್ಹನ್‌ಪುರದಲ್ಲಿ ನಡೆದ ಘಟನೆಯೆನ್ನಲಾದ ಕ್ಯೂಟ್ ವಿಡಿಯೋ ಒಂದು ಇಂಟರ್ನೆಟ್‌ನಲ್ಲೀಗ ಭಾರೀ ಸದ್ದು ಮಾಡುತ್ತಿದೆ. ಮೂರರ ಹರೆಯ ಪುಟಾಣಿಯೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಅಮ್ಮ ತನ್ನ ಚಾಕೋಲೇಟ್ ಲಪಟಾಯಿಸಿರುವುದನ್ನು ದೂರು ಕೊಟ್ಟಿದೆ!
ಹಂಝ ಎಂಬ ಮೂರರ ಮಯಸ್ಸಿನ ಪುಟಾಣಿಯೊಂದು ಪೊಲೀಸ್ ಠಾಣೆಯಲ್ಲಿ ಪೊಲೀಸರ ಬಳಿ ತನ್ನ ಅಮ್ಮ ತನ್ನಿಂದ ಚಾಕೋಲೇಟ್ ಹಾಗೂ ಕ್ಯಾಂಡಿಗಳನ್ನು ಕದ್ದಿದ್ದಾಳೆ ಎಂದು ಹೇಳಿದೆ. ಆ ಮುಗುವನ್ನು ವಿಚಾರಿಸಿ ದೂರು ದಾಖಲಿಸುವಂತೆ ನಟಿಸುತ್ತಿರುವ ಮಹಿಳಾ ಪೊಲೀಸ್ ಮಗುವಿನ ಬಳಿ ಎಲ್ಲ ವಿವರಗಳನ್ನೂ ಒಂದೊಂದಾಗಿ ಕೇಳಿ, ಮಗುವಿನ ಎದುರು ದೂರು ಬರೆದುಕೊಳ್ಳುತ್ತಿರುವಂತೆ ನಟಿಸಿದ್ದಾರೆ. ಮಗು, ವಿವರವಾಗಿ ತನಗೆ ಗೊತ್ತಿದ್ದಂತೆ ಉತ್ತರಿಸುವ ಮುಗ್ಧತೆಯೇ ಎಲ್ಲರ ಮನಗೆದ್ದಿದೆ. ನಿನ್ನ ಅಮ್ಮನ ಹೆಸರೇನು ಎಂದು ಕೇಳಲಾಗುವ ಪ್ರಶ್ನೆಗೆ ಮಗು ಮಮ್ಮಿ ಎಂದು ಉತ್ತರಿಸುತ್ತದೆ. ತಮಾಷೆಯಾಗಿರುವ ಈ ವಿಡಿಯೋ ಈಗ ವೈರಲ್ ಆಗಿದ್ದು ಜನರು ಈ ಮಗುವಿನ ಮುಗ್ಧತೆಗೆ ಫಿದಾ ಆಗಿದ್ದಾರೆ.
ಈ ಹಂಝ ಎಂಬ ಪುಟ್ಟ ಮಗು ಒಬ್ಬ ಮಹಿಳಾ ಪೊಲೀಸ್ ಜೊತೆಯಲ್ಲಿ ಅಮ್ಮನ ಬಗ್ಗೆ ದೂರಿಕೊಂಡಿರುವುದನ್ನು ವಿಡಿಯೋ ವೀಕ್ಷಿಸಿರುವ ಸಾವಿರಾರು ಮಂದಿ ಈ ಹಂಝನಿಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲಿನಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ. ಪುಟಾಣಿಯ ದೂರಿನಂತೆ ಚಾಕೋಲೇಟ್ ಲಪಟಾಯಿಸಿದ್ದಕ್ಕೆ ಅಮ್ಮನನ್ನು ಬಂಧಿಸಿ ಜೈಲಿಗೆ ತಳ್ಳಬೇಕು ಎಂದು ತಮಾಷೆಯಾಗಿಯೇ ಕಾಮೆಂಟಿಸುತ್ತಿದ್ದಾರೆ.
ಇದನ್ನೂ ಓದಿ | Viral video | ಕಳಶಕ್ಕಿಟ್ಟ ತೆಂಗಿನಕಾಯಿಯಂತಿರುವ ಇದು ಸಿಹಿತಿಂಡಿಯೋ, ಕಲಾಕೃತಿಯೋ?
ಇಲ್ಲಿ ಮಗು ದೂರು ಬರೆಸಿಕೊಂಡಾದ ಮೇಲೆ ಆ ಪತ್ರಕ್ಕೆ ತಾನೇ ಸಹಿಯನ್ನೂ ಮಾಡಿದ್ದು, ತಮಾಷೆಯಾಗಿದೆ. ದೂರು ಬರೆದುಕೊಂಡ ಪೊಲೀಸ್ ಶೀಘ್ರದಲ್ಲೇ ಮಗುವಿನ ಅಮ್ಮನನ್ನು ಬಂಧಿಸುವುದಾಗಿ ಮಗುವಿಗೆ ಮಾತು ಕೊಟ್ಟಿದ್ದಾರೆ. ಜೊತೆಯಲ್ಲೇ ಇದ್ದ ಮಗುವಿನ ಅಪ್ಪ ಹೇಳಿರುವ ಪ್ರಕಾರ, ಮಗು ಕ್ಯಾಂಡಿ ಕೇಳಿದಾಗ ಮಗುವಿನ ಅಮ್ಮ ಕೆನ್ನೆಗೊಂದು ಮುತ್ತು ಕೊಟ್ಟು ಕಳಿಸಿದ್ದಾಳೆ. ಅದಕ್ಕೇ ಈ ದೂರು ಎಂದು ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಮೇಲೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶರಾ ಕೂಡಾ ಇದನ್ನು ವೀಕ್ಷಿಸದ್ದು, ಮಗುವಿಗೊಂದು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಜೊತೆಗೆ ದೀಪಾವಳಿಗೆಂದು ಚಾಕೋಲೇಟ್ ಹಾಗೂ ಸೈಕಲನ್ನು ಉಡುಗೊರೆಯಾಗಿ ಕಳಿಸಿದ್ದಾರೆ ಎನ್ನಲಾಗಿದೆ!
ಇತ್ತೀಚೆಗಷ್ಟೇ, ಇಂಥದ್ದೇ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಒಬ್ಬ ಮಗುವಿನ ಬಳಿ ಎಷ್ಟು ಹೇಳಿದರೂ ನೀ ತಂಟೆ ಮಾಡುವುದು ಬಿಡುವುದಿಲ್ಲ ಎಂದು ಕೋಪ ಮಾಡಿಕೊಂಡ ಶಿಕ್ಷಕಿಗೆ, ನನ್ನ ನಂಬಿ ಪ್ಲೀಸ್, ನಾನು ತಂಟೆ ಮಾಡುವುದಿಲ್ಲ ಎಂದು ಮುತ್ತು ಕೊಟ್ಟ ಪುಟಾಣಿಯ ವಿಡಿಯೋ ಭಾರೀ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಇಂತಹ ಮುಗ್ಧ ಮನಸ್ಸಿನ ಪುಟ್ಟ ಮಕ್ಕಳ ವಿಡಿಯೋಗಳನ್ನು ನೋಡಿ ಮನಸೋ ಇಚ್ಛೆ ನಕ್ಕು ಹಗುರಾಗಬಹುದು.
ಇದನ್ನೂ ಓದಿ | Viral Video | ಅಟ್ಟಿಸಿಕೊಂಡು ಬಂದ ಕರಡಿಯಿಂದ ಪಾರಾಗಲು ಮರವೇರಿ ಕುಳಿತ; ಮುಂದೇನಾಯ್ತು?