ಬೀಜಿಂಗ್: ವಿಶ್ವಾದ್ಯಂತ ಪಾರ್ಶ್ವವಾಯುವಿನಿಂದ ಸಾಯುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, 2030ಕ್ಕೆ ಅದರ ಸಂಖ್ಯೆ 50 ಲಕ್ಷಕ್ಕೆ (Viral News) ಏರಲಿದೆ. ಚೀನಾದ ತಾಂಗ್ಜಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದ ವರದಿಯಿಂದಾಗಿ ಈ ಅಂಶ ಹೊರಬಿದ್ದಿದೆ.
1990ರಲ್ಲಿ ವಿಶ್ವಾದ್ಯಂತ ಮೆದುಳಿನ ಪಾರ್ಶ್ವವಾಯುವಿನಿಂದಾಗಿ ಒಟ್ಟು 20 ಲಕ್ಷ ಜನರು ಸಾವನ್ನಪ್ಪಿದ್ದರು. 2019ಕ್ಕೆ ಆ ಲೆಕ್ಕವು 30 ಲಕ್ಷಕ್ಕೂ ಅಧಿಕವಾಗಿ ಸಾಗಿದೆ. ಮೆದುಳಿನ ಪಾರ್ಶ್ವವಾಯುವಿನಲ್ಲಿ ಮೆದುಳಿಗೆ ರಕ್ತದ ಸರಬರಾಜು ಆಗದೆಯೇ ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವವಿದ್ಯಾಲಯದ ಲೈಜ್ ಕ್ಸಿಯಾಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂ., ಗಿನ್ನಿಸ್ ದಾಖಲೆ ಬರೆದ ಐಸ್‌ಕ್ರೀಂನಲ್ಲಿ ಅಂಥಾದ್ದೇನಿದೆ?
ಧೂಮಪಾನ, ಸೋಡಿಯಂ ಹೆಚ್ಚಿರುವ ಆಹಾರ ಸೇವನೆ, ಅಧಿಕ ರಕ್ತದೊತ್ತಡ, ಅಧಿಕವಾದ ಕೊಬ್ಬು, ಕಿಡ್ನಿ ಸರಿಯಾಗಿ ಕೆಲಸ ಮಾಡದಿರುವುದು, ಅಧಿಕ ಸಕ್ಕರೆ ಪ್ರಮಾಣ ಮತ್ತು ಅಧಿಕ ಬಿಎಂಐ ಇಂದಾಗಿ ಮೆದುಳಿನ ಪಾರ್ಶ್ವವಾಯು ಉಂಟಾಗುತ್ತದೆ. ಕಳೆದ 29 ವರ್ಷಗಳಲ್ಲಿ ಜನಸಂಖ್ಯೆ ಏರಿದಂತೆ ಈ ಕಾಯಿಲೆಯಿಂದ ಸಾಯುತ್ತಿರುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ ಕಾಯಿಲೆಯಿಂದ ಸಾಯುತ್ತಿರುವವರ ಪ್ರಮಾಣ ಕಡಿಮೆಯಾಗಿದೆ. 1990ರಲ್ಲಿ ಒಂದು ಲಕ್ಷ ಜನರಲ್ಲಿ 66 ಜನರು ಪಾರ್ಶ್ವವಾಯುವಿನಿಂದ ಸಾಯುತ್ತಿದ್ದರು ಆದರೆ ಅದು 2019ರ ವೇಳೆಗೆ 44ಕ್ಕೆ ಇಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈಗ ಏರಿಕೆಯಾಗುತ್ತಿರುವ ಸಾವಿನ ಸಂಖ್ಯೆಯನ್ನು ಗಮನಿಸಿದರೆ, 2030ರ ವೇಳೆಗೆ ಒಟ್ಟಾರೆಯಾಗಿ 50 ಲಕ್ಷಕ್ಕೂ ಅಧಿಕ ಮಂದಿ ವಿಶ್ವಾದ್ಯಂತ ಪಾರ್ಶ್ವವಾಯುವಿನಿಂದ ಸಾವನ್ನಪ್ಪುವ ಸಾಧ್ಯತೆಯಿದೆ. ಒಂದು ವೇಳೆ ಈ ಪಾರ್ಶ್ವವಾಯುಗೆ ಕಾರಣವಾಗುವ ಅಂಶಗಳನ್ನು ಕಡಿಮೆ ಮಾಡಿಕೊಳ್ಳದೇ ಹೋದಲ್ಲಿ 64 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎಂದು ವರದಿ ಎಚ್ಚರಿಸಿದೆ.