ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಈ ಬಾರಿಯ ಚುನಾವಣೆಯನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಇದೇ ಹೊತ್ತಲ್ಲಿ, ಮಲೇಷ್ಯಾದಿಂದ ತನ್ನ ನೆಚ್ಚಿನ ನಟನಿಗಾಗಿ ಮತ ಚಲಾಯಿಸಲು ಬಂದ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೆಲಸದ ನಿಮಿತ್ತ ಮಲೇಷ್ಯಾದಲ್ಲಿದ್ದ ಈ ಯುವತಿ, ಮತದಾನದ ದಿನದಂದೇ ತಾಯ್ನಾಡಿಗೆ ಬರುವ ವಿಮಾನವನ್ನು (Flight) ತಪ್ಪಿಸಿಕೊಂಡ ಕಾರಣ, ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ನಡುರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತು ವಿಜಯ್ ಬಳಿ ಕ್ಷಮೆಯಾಚಿಸಿದ್ದರು.
“ನನ್ನ ತಪ್ಪಿನಿಂದ ಫ್ಲೈಟ್ ಮಿಸ್ ಆಯ್ತು, ವಿಜಯ್ ಅಣ್ಣನ ಮೊದಲ ಹೆಜ್ಜೆಗೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ನನ್ನ ಒಂದು ವೋಟ್‌ನಿಂದ ಏನಾಗುತ್ತೆ ಎಂದು ಕೆಲವರು ಕೇಳಬಹುದು, ಆದರೆ ‘ನಾವು ನಿಮ್ಮ ಜೊತೆ ಇದ್ದೀವಿ’ ಎಂದು ಅವರಿಗೆ ಭರವಸೆ ನೀಡುವ ದಾರಿ ಇದಾಗಿತ್ತು” ಎಂದು ಆ ಯುವತಿ ಕಣ್ಣೀರಿಡುತ್ತಾ ಹೇಳಿಕೊಂಡಿದ್ದರು. ಈ ಹೃದಯವಿದ್ರಾವಕ ವಿಡಿಯೋ ನೋಡಿ ದಳಪತಿ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈ ಕಥೆಗೆ ಒಂದು ಸುಖಾಂತ್ಯವಿದ್ದು, ಆ ಯುವತಿ ಕೇವಲ ಅತ್ತು ಸುಮ್ಮನಾಗದೆ, ಎಲ್ಲಾ ಅಡೆತಡೆಗಳನ್ನು ದಾಟಿ ಮತ್ತೊಂದು ವಿಮಾನದ ಮೂಲಕ ಹೇಗಾದರೂ ಮಾಡಿ ತಮಿಳುನಾಡಿಗೆ ತಲುಪಿದ್ದಾರೆ.
ಏಪ್ರಿಲ್ 22, 2026 ರಂದು ಹರಿದಾಡುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ಕಣ್ಣೀರಿಟ್ಟಿದ್ದ ಅದೇ ಯುವತಿ ಕೊನೆಗೂ ಸಮಯಕ್ಕೆ ಸರಿಯಾಗಿ ತನ್ನ ಮತಗಟ್ಟೆಗೆ ಬಂದು ಮತ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಧೈರ್ಯ ಬಿಡದೆ ಮನೆಗೆ ಬಂದು ಮತ ಚಲಾಯಿಸಿದ್ದಾರೆ” ಎಂಬ ಟ್ವೀಟ್‌ಗಳು ಈಗ ಅಭಿಮಾನಿಗಳ ವಲಯದಲ್ಲಿ ಸಂಚಲನ ಮೂಡಿಸಿವೆ. ಇನ್ನುಳಿದಂತೆ ತಮಿಳುನಾಡು ಚುನಾವಣೆಯಲ್ಲಿ ನಟ ಅಜಿತ್ ಕುಮಾರ್ ಮೊದಲನೆಯವರಾಗಿ ಮತ ಚಲಾಯಿಸಿದರೆ, ನಂತರ ರಜನಿಕಾಂತ್, ತ್ರಿಷಾ, ವಿಕ್ರಮ್ ಮತ್ತು ಸೂರ್ಯ ಸೇರಿದಂತೆ ದಿಗ್ಗಜ ನಟರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು.

