ಫೋನ್ನಲ್ಲಿ ಮಾತನಾಡುತ್ತಿದ್ದ ಮಹಿಳೆಯೊಬ್ಬಳಿಗೆ, ಯುವಕನೊಬ್ಬ ಬಲವಂತವಾಗಿ ಮುತ್ತಿಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಹಾರದ ಸಾದರ್ ಆಸ್ಪತ್ರೆಯ ಆವರಣದಲ್ಲಿ ಮಾರ್ಚ್ 10ರಂದು ಈ ಘಟನೆ ನಡೆದಿದೆ. ಅದೇ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಮಹಿಳೆ, ಅಲ್ಲೇ ಆವರಣದಲ್ಲಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದರು. ಅಲ್ಲೊಬ್ಬ ಯುವಕ ಹಿಂದಿನಿಂದ ಬಂದು, ಮಹಿಳೆಯನ್ನು ಬಿಗಿದಪ್ಪಿ ಹಿಡಿದು ಆಕೆಯ ಬಾಯಿಗೇ ಮುತ್ತಿಟ್ಟಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಅಂದಹಾಗೇ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ. ಡಿಎಸ್ಪಿ ಅಭಿಷೇಕ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿ, ‘ಇವರಿಬ್ಬರ ನಡುವೆ ಸಂಬಂಧ ಇತ್ತು ಎಂಬುದು ಪ್ರಾಥಮಿಕ ಹಂತದ ವಿಚಾರಣೆಯಲ್ಲೇ ಗೊತ್ತಾಗುತ್ತಿದೆ’ ಎಂದಿದ್ದಾರೆ.
ಆದರೆ ಮಹಿಳೆ ತನಗೆ ಆತ ಗೊತ್ತಿಲ್ಲ ಎಂದೇ ಹೇಳಿದ್ದಾರೆ. 2015ರಿಂದಲೂ ಸಾದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆ ಆಗಿರುವ ಅವರು ‘ಆತ ನನಗೆ ಅಪರಿಚಿತ. ಒಮ್ಮೆಲೇ ಹಿಂದಿನಿಂದ ಬಂದು ನನ್ನನ್ನು ಅಪ್ಪಿದ ಮತ್ತು ಬಾಯಿಗೆ ಮುತ್ತುಕೊಟ್ಟ. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ, ಆದರೆ ಆಗಲಿಲ್ಲ. ಮುತ್ತು ಕೊಟ್ಟು ಅವನು ಓಡಿಯೇ ಹೋದ. ಅವನ್ಯಾಕೆ ಬಂದ? ಯಾಕೆ ಚುಂಬಿಸಿದ? ನನಗೇನೂ ಗೊತ್ತಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ನಾನು ಜೋರಾಗಿ ಕೂಗಿಕೊಂಡೆ. ಸಹಾಯಕ್ಕಾಗಿ ಆಸ್ಪತ್ರೆ ಸಿಬ್ಬಂದಿಯನ್ನು ಕರೆದೆ. ಆದರೆ ಕಾಂಪೌಂಡ್ ಸಣ್ಣ ಇರುವುದರಿಂದ ಅವನಿಗೆ ತಪ್ಪಿಸಿಕೊಳ್ಳಲು ಸುಲಭವಾಯಿತು’ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಜಿರಾಫೆ ಮರಿಯನ್ನು ಹಿಡಿದು ಕುತ್ತಿಗೆಗೆ ಬಾಯಿ ಹಾಕಿದ್ದ ಸಿಂಹಿಣಿ ಏಕಾಏಕಿ ಬಿಟ್ಟು ಓಡಿತು; ಯಾಕೆ?
ಈತ ಸರಣಿ ಕಿಸ್ಸರ್!
ಈ ವ್ಯಕ್ತಿ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಮುತ್ತು ಕೊಡುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ 10ಕ್ಕೂ ಮೊದಲು ಹಲವು ಬಾರಿ ಹೀಗೆ ಹಲವು ಯುವತಿಯರು/ ಮಹಿಳೆಯರಿಗೆ ಮುತ್ತು ಕೊಟ್ಟು ಓಡಿಹೋಗಿದ್ದಾನೆ ಎಂದು ಐಎಎನ್ಎಸ್ ವರದಿ ಮಾಡಿದೆ. ಸದ್ಯ ಆ ವ್ಯಕ್ತಿಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅವನ ಪತ್ತೆ ಕಾರ್ಯ ನಡೆಯುತ್ತಿದೆ.