ಜನಸಂದಣಿ ಪ್ರದೇಶದಲ್ಲಿ, ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್ಗಳಲ್ಲೆಲ್ಲ ಕಳ್ಳರು ತಮ್ಮ ಕೈಚಳ ತೋರಿಸುತ್ತಿರುತ್ತಾರೆ. ನಮಗೆ ಗೊತ್ತೇ ಆಗದಂತೆ ನಮ್ಮ ಮೊಬೈಲನ್ನೋ, ಹಣ ತುಂಬಿದ ಪರ್ಸನ್ನೋ ಎತ್ತಿಕೊಂಡು ಹೋಗುತ್ತಿರುತ್ತಾರೆ. ಕಳೆದುಕೊಂಡ ನೋವು ನಮಗಾದರೆ, ಆ ಕ್ಷಣಕ್ಕೆ ದಕ್ಕಿಸಿಕೊಂಡ ಖುಷಿ ಅವರಿಗೆ. ಪೊಲೀಸರ ಕೈಲಿ ಸಿಕ್ಕಿಬೀಳೋದು, ಬಿಡುಗಡೆಯಾಗೋದೆಲ್ಲ ಆಮೇಲಿನ ಮಾತು ಬಿಡಿ..
ಆದರೆ ಎಲ್ಲ ಸಲನೂ ಕಳ್ಳರ ಕೈ ಬಲ ಆಗುವುದಿಲ್ಲ ಎಂಬುದಕ್ಕೆ ಇದೀಗ ವೈರಲ್ ಆದ ವಿಡಿಯೋ ಸಾಕ್ಷಿ. ಇಲ್ಲೊಬ್ಬ ಕಳ್ಳ ರೈಲ್ವೆ ಸ್ಟೇಶನ್ನಲ್ಲಿ ಪ್ರಯಾಣಿಕನೊಬ್ಬನ ಮೊಬೈಲ್ ಕದಿಯಲು ಹೋಗಿ ಪಡಬಾರದ ಸಂಕಷ್ಟ ಪಟ್ಟಿದ್ದಾನೆ. ರೈಲು ಬಿಹಾರದ ಬೇಗುಸಾರೈನಿಂದ ಖಗರಿಯಾಕ್ಕೆ ಹೋಗುತ್ತಿತ್ತು. ಮಾರ್ಗ ಮಧ್ಯೆ ಸಾಹೇಬ್ಪುರ್ ಕಮಾಲ್ ಸ್ಟೇಶನ್ನಲ್ಲಿ ನಿಂತಿತ್ತು. ಆ ಸ್ಟೇಶನ್ನಿಂದ ರೈಲು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕಳ್ಳನೊಬ್ಬ ರೈಲಿನ ಕಿಟಕಿಯಿಂದ ಕೈ ಹಾಕಿ ಪ್ರಯಾಣಿಕನೊಬ್ಬನ ಜೇಬಿನಿಂದ ಮೊಬೈಲ್ ತೆಗೆಯಲು ಪ್ರಯತ್ನ ಪಟ್ಟಿದ್ದಾನೆ. ಫುಲ್ ಅಲರ್ಟ್ ಆದ ಪ್ರಯಾಣಿಕ ಕಳ್ಳನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಅಷ್ಟರಲ್ಲಿ ರೈಲಿನ ವೇಗವೂ ಹೆಚ್ಚಾಗಿದೆ. ಆಗ ಅಲ್ಲಿಯೇ ಇದ್ದ ಇನ್ನೊಬ್ಬ ಪ್ರಯಾಣಿಕ ಕಳ್ಳನ ಇನ್ನೊಂದು ಕೈ ಹಿಡಿದುಕೊಂಡಿದ್ದಾನೆ. ಒಟ್ಟಿನಲ್ಲಿ ಕಳ್ಳ ರೈಲು ಕಿಟಕಿಗೇ ಜೋತಾಡಿಕೊಂಡು ತುಂಬ ಕಷ್ಟಪಡುತ್ತ ಕ್ರಮಿಸಿದ್ದಾನೆ.
ಆ ಮೊಬೈಲ್ ಕಳ್ಳ ಹೀಗೆ ಖಗರಿಯಾವರೆಗೆ ಸುಮಾರು 15 ಕಿಲೋಮೀಟರ್ ದೂರ ಇದೇ ರೀತಿ ಕಿಟಕಿಗೆ ನೇತಾಡಿಕೊಂಡೇ ಹೋಗಿದ್ದಾನೆ. ನನ್ನನ್ನು ಬಿಟ್ಬಿಡಿ, ನನ್ನತ್ರ ನೋವು ಸಹಿಸೋಕೆ ಆಗ್ತಿಲ್ಲ ಎಂದು ಹೇಳುತ್ತಲೇ ಇದ್ದರೂ, ಅವರು ಬಿಡಲಿಲ್ಲ. ಇದನ್ನೆಲ್ಲ ಇನ್ನೊಬ್ಬ ಪ್ರಯಾಣಿಕ ವಿಡಿಯೋ ಮಾಡಿಕೊಂಡಿದ್ದಾನೆ. ಹಾಗೊಮ್ಮೆ ರೈಲು ಚಲಿಸುತ್ತಿದ್ದಾಗ ಇವರು ಕಳ್ಳನ ಕೈಬಿಟ್ಟಿದ್ದರೆ ಆತ ಬಿದ್ದು ತುಂಬ ಏಟಾಗುವ ಸಾಧ್ಯತೆಯೂ ಇತ್ತು. ಖಗರಿಯಾ ರೈಲ್ವೆ ಸ್ಟೇಶನ್ನಲ್ಲಿ ಈ ಕಳ್ಳನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ. ಕಳ್ಳನನ್ನು ಪಂಕಜ್ ಕುಮಾರ್ ಎಂದು ಗುರುತಿಸಲಾಗಿದ್ದು ಸಾಹೇಬ್ಪುರ ಕಮಾಲ್ ನಿವಾಸಿಯೇ ಆಗಿದ್ದಾನೆ. ಈತನನ್ನು ಸದ್ಯ ಜೈಲಿಗೆ ಕಳಿಸಲಾಗಿದೆ.