Site icon Vistara News

Viral Video: ಇದೆಂಥ ಕ್ರೂರ ಮನಸ್ಥಿತಿ; ಪಕ್ಕದ ಮನೆಯವರ ನಾಯಿ ಮೇಲೆ ಆ್ಯಸಿಡ್‌ ಎರಚಿದ ಮಹಿಳೆ!

acid attack on dog

ಮುಂಬೈ: ಸಾಕು ನಾಯಿಗಳೆಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಆದರೆ ಎಲ್ಲರೂ ನಾವು ಸಾಕಿರುವ ನಾಯಿಯನ್ನು ಇಷ್ಟಪಡುತ್ತಾರೆ ಎನ್ನುವುದು ಮೂರ್ಖತನವಾಗುತ್ತದೆ. ಕೆಲವೊಮ್ಮೆ ನಾಯಿಗಳನ್ನು ಕಂಡರೆ ಆಗದ ಜನರು ಅದಕ್ಕೆ ಏನಾದರೂ ಕೇಡು ಮಾಡಿಬಿಡುವ ಸಾಧ್ಯತೆಗಳೂ ಇರುತ್ತದೆ. ಅದೇ ರೀತಿ ಮುಂಬೈನಲ್ಲಿ ಮಹಿಳೆಯೊಬ್ಬಳು ತನ್ನ ಪಕ್ಕದ ಮನೆಯ ಸಾಕು ನಾಯಿಯ ಮೇಲೇ ಆ್ಯಸಿಡ್‌ ಸುರಿದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ಪೊಲೀಸರು (Viral Video) ಬಂಧಿಸಿದ್ದಾರೆ.

35 ವರ್ಷದ ಶಬಿಸ್ತಾ ಸುಹೈಲ್‌ ಅನ್ಸಾರಿ ಹೆಸರಿನ ಮಹಿಳೆ ತನ್ನ ಮನೆಯಲ್ಲಿ ಬೆಕ್ಕು ಸಾಕಿದ್ದಾಳೆ. ಆಕೆಯ ಪಕ್ಕದ ಮನೆಯವರು ನಾಯಿಯನ್ನು ಸಾಕಿದ್ದಾರೆ. ಬ್ರೌನಿ ಹೆಸರಿನ ನಾಯಿ ಶಬಿಸ್ತಾ ಅವರ ಮನೆಯ ಬೆಕ್ಕನ್ನು ಓಡಿಸುಕೊಂಡು ಹೋಗುತ್ತಿತ್ತಂತೆ. ಈ ವಿಚಾರವಾಗಿ ಆಕೆ ಹಲವು ಬಾರಿ ಬ್ರೌನಿಯ ಮಾಲೀಕರ ಬಳಿ ದೂರು ನೀಡಿದ್ದಳಂತೆ. ಆದರೆ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದರಂತೆ.

ಇದನ್ನೂ ಓದಿ: Viral Video : ಪುಟಾಣಿ ಮಾಡ್ತಿದೆ ಕಾವಾಲಯ್ಯ ಡ್ಯಾನ್ಸ್‌! ಆಹಾ ಎಷ್ಟು ಮುದ್ಮುದ್ದು

ಬುಧವಾರ ಬ್ರೌನಿ ಮನೆಯ ಹತ್ತಿರ ರಸ್ತೆ ಬದಿಯಲ್ಲಿ ಮಲಗಿರುವುದನ್ನು ಶಬಿಸ್ತಾ ನೋಡಿದ್ದಾಳೆ. ಅದನ್ನು ಕಂಡ ಆಕೆ ಒಂದಿಷ್ಟು ಆಸಿಡ್‌ ತಂದು ಮಲಗಿದ್ದ ನಾಯಿಯ ಮೇಲೆ ಸುರುಗಿದ್ದಾಳೆ. ನಂತರ ಅಲ್ಲಿಂದ ವಾಪಸು ತೆರಳಿದ್ದಾಳೆ. ಆಕೆ ಹೀಗೆ ಮಾಡುವಾಗ ಮುಖಕ್ಕೆ ವೇಲನ್ನು ಕಟ್ಟಿಕೊಂಡಿರುವುದನ್ನು ಕಾಣಬಹುದಾಗಿದೆ. ಆ್ಯಸಿಡ್‌ ದಾಳಿಗೆ ಒಳಗಾದ ನಾಯಿ ನೋವನ್ನು ತಡೆಯಲಾರದೆ ಓಡುವ ದೃಶ್ಯಗಳು ಕೂಡ ಅಲ್ಲಿದ್ದ ಸಿಸಿಟಿವಿಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬುಧವಾರ ಸಂಜೆ ಆ ಕಟ್ಟಡದ ಮಾಲೀಕರಾದ ಬಾಳಾಸಾಹೇಬ್‌ ತುಕುರಾಮ್‌ ಅವರು ಬ್ರೌನಿ ಉದ್ದಾಡುತ್ತಾ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣವೇ ಅದನ್ನು ಪ್ರಾಣಿಗಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸಿಡ್‌ ದಾಳಿಯಿಂದಾಗಿ ಬ್ರೌನಿ ಒಂದು ಕಣ್ಣು ಕಳೆದುಕೊಂಡಿದೆ. ಹಾಗೆಯೇ ಅದರ ದೇಹದಲ್ಲಿ ಸುಟ್ಟ ಗಾಯಗಳು ಉಂಟಾಗಿವೆ.

ಆಸ್ಪತ್ರೆಯಿಂದ ಮನೆಗೆ ಬಂದ ಬಾಳಾಸಾಹೇಬ್‌ ಅವರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅವರಿಗೆ ಶಬಿಸ್ತಾ ಅವರೇ ಬ್ರೌನಿ ಮೇಲೆ ಆ್ಯಸಿಡ್‌ ಹಾಕಿರುವುದು ತಿಳಿದುಬಂದಿದೆ. ಈ ವಿಚಾರವಾಗಿ ಅವರು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವರ್ತರಾದ ಪೊಲೀಸರು ಶಬಿಸ್ತಾರನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 429 ಮತ್ತು 11 (1) ಹಾಗೂ ಮಹಾರಾಷ್ಟ್ರ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 119ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಬಿಸ್ತಾ ನಾಯಿಯ ಮೇಲೆ ಆ್ಯಸಿಡ್‌ ಸುರಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ. ಕ್ರೂರಿಯಂತೆ ವರ್ತಿಸಿದ ಶಬಿಸ್ತಾ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿತ್ತು. ಅಕ್ಕ ಪಕ್ಕದ ಮನೆಯವರು ಸಾಕಿಕೊಂಡಿದ್ದ ನಾಯಿಗಳು ಜಗಳ ಆರಂಭಿಸಿದ್ದು, ಆ ಜಗಳ ನಾಯಿಗಳ ಮಾಲೀಕರಲ್ಲೂ ಶುರುವಾಗಿತ್ತು. ಅದೇ ಸಿಟ್ಟಿನಿಂದ ಒಂದು ನಾಯಿಯ ಮಾಲೀಕ ಗುಂಡು ಹಾರಿಸಿದ್ದು, ಇಬ್ಬರು ಮೃತರಾಗಿದ್ದರು. ಹಾಗೆಯೇ ಗರ್ಭಿಣಿ ಸೇರಿ ಒಟ್ಟು ಆರು ಮಂದಿ ಗಾಯಾಳುಗಳಾಗಿದ್ದರು.

Exit mobile version