ಬೆಂಗಳೂರು: ಇಲ್ಲಿ ನೀಡಲಾಗಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social media) ಭಾರಿ ವೈರಲ್ (Viral Photo) ಆಗುತ್ತಿದೆ. ನಟ ದರ್ಶನ್ (Actor Darshan), ಭವಾನಿ ರೇವಣ್ಣ (Bhavani Revanna), ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಸೂರಜ್ ರೇವಣ್ಣ (Suraj Revanna) ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋ ಇದು. ಈ ಫೋಟೋದಲ್ಲಿರುವ ನಾಲ್ವರೂ ಇದೀಗ ಭಾರಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮೂವರು ಆಗಲೇ ಪರಪ್ಪನ ಅಗ್ರಹಾರ (Parappana Agrahara) ಜೈಲುಪಾಲಾಗಿದ್ದರೆ, ಭವಾನಿ ರೇವಣ್ಣ ಮಾತ್ರವೇ ತಾತ್ಕಾಲಿಕವಾಗಿ ಪಾರಾಗಿದ್ದಾರೆ.
ಈ ಫೋಟೋ ತೆಗೆಸಿಕೊಂಡಿರುವುದು ಎಲ್ಲಿ ಮತ್ತು ಯಾವಾಗ ಎಂಬುದು ಇದೀಗ ಚರ್ಚೆ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಗೂ ಮುನ್ನ ಹಾಸನ ಪ್ರವಾಸದಲ್ಲಿದ್ದ ವೇಳೆ ದರ್ಶನ್, ಎಚ್‌ಡಿ ರೇವಣ್ಣ ನಿವಾಸದಲ್ಲಿ ಇವರು ಮೂರನ್ನೂ ಭೇಟಿಯಾದ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಫೋಟೋ ಇದಾಗಿದೆ ಎನ್ನಲಾಗುತ್ತಿದೆ. ಫೋಟೋ ತೆಗೆಸಿಕೊಂಡ ಗಳಿಗೆಯಿಂದಲೇ ಈ ನಾಲ್ವರನ್ನೂ ದುರದೃಷ್ಟ ದೇವತೆ ಅಟಕಾಯಿಸಿಕೊಂಡಿದ್ದಾಳೆ.
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾರೆ. ಅದರ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣನನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಸ್ವಲ್ಪದರಲ್ಲಿ ಅವರು ಎಸ್‌ಐಟಿ ಬಂಧನ ಹಾಗೂ ಜೈಲುಪಾಲಾಗುವಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್ ರೇವಣ್ಣನ ಬಂಧನವಾಗಿದ್ದು, ಅವರೂ ಜೈಲು ಸೇರಿದ್ದಾರೆ. ಅತ್ತ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕಂಬಿ ಎಣಿಸುತ್ತಿದ್ದಾರೆ. ನಾಲ್ಕೂ ಪ್ರಕರಣಗಳೂ ದೇಶಾದ್ಯಂತ ಸುದ್ದಿಯಾಗಿವೆ.
ಮೊದಲ ಮೂರು ಪ್ರಕರಣಗಳು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮರ್ಯಾದೆಯನ್ನೇ ಬೀದಿಗೆ ತಂದು ನಿಲ್ಲಿಸಿವೆ. ದರ್ಶನ್ ಪ್ರಕರಣ ಇನ್ನೊಂದು ಬಗೆ ಕರಾಳತೆ, ಕ್ರೌರ್ಯವನ್ನು ಅನಾವರಣಗೊಳಿಸಿದೆ. ಸಾಮಾಜಿಕ ಜಾಲತಾಣಗಳ ನೋಡುಗರು ಇದೀಗ ವೈರಲ್ ಆಗುತ್ತಿರುವ ಫೋಟೋವನ್ನು ಮುಂದಿಟ್ಟುಕೊಂಡು ತರಹೇವಾರಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಕೆಲವರು ‘ಇದೊಂದು ಕಾಕತಾಳೀಯ!ʼ ಎಂದಿದ್ದಾರೆ. ಇನ್ನೊಬ್ಬರು “ಪರಪ್ಪನ ಅಗ್ರಹಾರದಿಂದ ಲೈವ್ʼʼ ಎಂದು ವಿನೋದವಾಡಿದ್ದಾರೆ. ಇನ್ನೊಬ್ಬರು, “ಈ ಫೋಟೋ ಇಟ್ಟುಕೊಂಡು ಈ ನಾಲ್ಕೂ ಮಂದಿಗೂ ಯಾರೋ ಮಾಟ- ಮಂತ್ರ ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ. ದರ್ಶನ್ ಫ್ಯಾನ್ ಒಬ್ಬಾತ, ʼಈ ಫ್ಯಾಮಿಲಿ ಜೊತೆ ಫೋಟೋ ತೆಗೆಸಿಕೊಂಡದ್ದರಿಂದಲೇ ಡಿ ಬಾಸ್‌ಗೆ ದುರದೃಷ್ಟ ಮೆಟ್ಟಿಕೊಂಡಿತುʼ ಎಂದು ಹೇಳಿದ್ದಾನೆ. ʼಈ ಫೋಟೋ ತೆಗೆದ ಗಳಿಗೆಯೇ ಚೆನ್ನಾಗಿರಲಿಲ್ಲʼ ಎಂದಿದ್ದಾನೆ ಮತ್ತೊಬ್ಬ.
ಎಂಎಲ್‌ಸಿ ಸೂರಜ್ ರೇವಣ್ಣ ಮೇಲೆ ಮತ್ತೊಂದು ಸಲಿಂಗಕಾಮ ಕೇಸ್
ಬೆಂಗಳೂರು: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣಗೆ (Suraj Revanna Case) ಮತ್ತೊಂದು ಸಂಕಷ್ಟ ಎದುರಾಗುತ್ತಿದೆ. ಇಂದು ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಅಂತಹದೇ ಕೇಸ್ ದಾಖಲು ಮಾಡುವ ಸಾಧ್ಯತೆ ಇದೆ.
ಸೂರಜ್‌ಗೆ ಮೊದಲ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಸೂರಜ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ನಡುವೆ ಸಿಐಡಿ ಕಚೇರಿಯಲ್ಲಿ ಮತ್ತೊಬ್ಬ ಸಂತ್ರಸ್ತನಿಂದ ಇಂದು ಕೇಸ್ ದಾಖಲು ಸಾಧ್ಯತೆ ಇದೆ. ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗುತ್ತಿದೆ.
ಸಲಿಂಗ ಕಾಮ ಪ್ರಕರಣದಲ್ಲಿ ಜೈಲುಪಾಲಾಗಿರುವ ಸೂರಜ್ ರೇವಣ್ಣನನ್ನು ಕಳೆದ ರಾತ್ರಿ ಎಂಟು ಗಂಟೆಯ ಸುಮಾರಿಗೆ ಪೊಲೀಸರು ಕಂರೆತಂದಿದ್ದು, ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಬ್ಯಾರಕ್‌ಗೆ ಶಿಫ್ಟ್ ಮಾಡಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿ ಸೆರೆವಾಸ ಅನುಭವಿಸುತ್ತಿರುವ ಸೂರಜ್ ರೇವಣ್ಣಗೆ ಎಲ್ಲ ಕೈದಿಗಳಿಗೆ ನೀಡುವ ಊಟವನ್ನು ಸಿಬ್ಬಂದಿ ನೀಡಿದ್ದರು.
ರಾತ್ರಿ ಊಟ ಮಾಡಿ 12 ಗಂಟೆಯ ಸುಮಾರಿಗೆ ಸೂರಜ್ ನಿದ್ರೆಗೆ ಜಾರಿದ್ದರು. ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ನಿತ್ಯ ಕರ್ಮ ಮುಗಿಸಿ ಕಾಫಿ ಸೇವನೆ ಮಾಡಿದ್ದು, ಜೈಲಿನಲ್ಲಿದ್ದ ನ್ಯೂಸ್ ಪೇಪರ್ ಓದಿದ್ದಾರೆ ಎಂದು ಗೊತ್ತಾಗಿದೆ. ನ್ಯೂಸ್ ಪೇಪರ್‌ನಲ್ಲಿನ ತನ್ನ ಮೇಲಿನ ಆರೋಪದ ಸುದ್ದಿ ಓದಿದ ಸೂರಜ್, ಜೈಲು ಸಿಬ್ಬಂದಿ ಜೊತೆಗಾಗಲೀ ಸಹಕೈದಿಗಳ ಜೊತೆಗಾಗಲೀ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.
ರಾತ್ರಿ ಸೂರಜ್ ರೇವಣ್ಣನನ್ನು ಪೊಲೀಸರು ಜೈಲಿಗೆ ತಡವಾಗಿ ಕರೆತಂದ ಹಿನ್ನೆಲೆಯಲ್ಲಿ, ಬೆಳಿಗ್ಗೆ 10 ಗಂಟೆಯ ಬಳಿಕ ಸೂರಜ್‌ಗೆ ವಿಚಾರಣಾಧೀನ ಕೈದಿ ನಂಬರ್ ಕೊಡಲಾಗುತ್ತದೆ. ಮಧ್ಯಾಹ್ನ ಅಥವಾ ಸಂಜೆ ವೇಳೆ ಬಾಡಿ ವಾರಂಟ್ ಮೇಲೆ ಮತ್ತೆ ಸಿಐಡಿ ಕಸ್ಟಡಿಗೆ ನೀಡಲಾಗುತ್ತದೆ. ಸೂರಜ್‌ನನ್ನು ಸಿಐಡಿ ಕಸ್ಟಡಿಗೆ ಪಡೆದು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ ದರ್ಶನ್ ಬೇರೆ ಜೈಲಿಗೆ ಶಿಫ್ಟ್? ಇಂದು ಜಾಮೀನು ಅರ್ಜಿ ಸಲ್ಲಿಕೆ