ಮುಂಬೈ: 12ವರ್ಷದ ಬಾಲಕಿಯೊಬ್ಬಳಿಗೆ ಎದುರಾಗಬಹುದಾಗಿದ್ದ ಬಹುದೊಡ್ಡ ಅಪಾಯವನ್ನು ಅಮೇಜಾನ್‌ನ ಡೆಲಿವರಿ ಬಾಯ್‌ವೊಬ್ಬರು ತಪ್ಪಿಸಿದ್ದಾರೆ. ಯುವಕನ ಹೆಸರು ರವಿ ಭಂಡಾರಿ ಎಂದಾಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಅವರನ್ನು ತುಂಬ ಹೊಗಳುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆಯ ವಸಂತ ವಿಹಾರ ಮುನ್ಸಿಪಲ್ ಸ್ಕೂಲ್‌ನಲ್ಲಿ ಕಬ್ಬಿಣದ ಗೇಟ್ ಬಳಿ ಈ ಬಾಲಕಿ ಆಟವಾಡುತ್ತಿದ್ದಳು. ಆ ಗೇಟನ್ನು ಹತ್ತಿ-ಇಳಿಯುತ್ತ, ಅದರ ಮೇಲೆ ನಿಂತು ಆಚೀಚೆ ಹೋಗುತ್ತ ತುಂಬ ಖುಷಿಯಲ್ಲಿದ್ದಳು. ಆದರೆ ಒಮ್ಮೆಲೇ ಕಬ್ಬಿಣದ ಗೇಟ್‌ನ ಒಂದು ಭಾಗ ಸಡಿಲಗೊಂಡು, ಅದರಲ್ಲಿದ್ದ ಸರಳಿನಂಥ ಸಣ್ಣ ತುಂಡೊಂದು ಬಾಲಕಿಯ ಎಡಗೆನ್ನೆಗೆ ಚುಚ್ಚಿಕೊಂಡಿತು. ಕಣ್ಣಿನ ಕೆಲವೇ ಇಂಚುಗಳಷ್ಟು ಕೆಳಗೆ ಈ ಕಬ್ಬಿಣದ ತುಂಡು ಚುಚ್ಚಿ ಆಕೆಗೆ ರಕ್ತಸ್ರಾವವಾಗುತ್ತಿತ್ತು. ಆಕೆ ದೊಡ್ಡದಾಗಿ ಅಳುತ್ತಿದ್ದಳು.
ಅಲ್ಲಿಯೇ ದಾರಿಯಲ್ಲಿ ಹೋಗುತ್ತಿದ್ದ ಅಮೇಜಾನ್ ಡೆಲಿವರಿ ಹುಡುಗ ರವಿ ಭಂಡಾರಿ ಈ ದೃಶ್ಯವನ್ನು ನೋಡಿ ಅಲ್ಲಿಗೆ ಓಡಿದ್ದಾರೆ. ಹಾಗೇ ಬಿಟ್ಟರೆ ಕಬ್ಬಿಣದ ಸರಳು ಬಾಲಕಿಯ ಕೆನ್ನೆಯೊಳಗೆ ಇನ್ನಷ್ಟು ಆಳಕ್ಕೆ ಹೋಗುತ್ತದೆ ಎಂಬುದನ್ನು ಗಮನಿಸಿದ ಅವರು ಆ ಸರಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಹೀಗೇ 30 ನಿಮಿಷ ಹಿಡಿದೇ ಇದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಶಾಲೆಯ ವಾಚ್‌ಮೆನ್ ಮತ್ತೊಂದಷ್ಟು ಜನರಿಗೆ ವಿಷಯ ತಿಳಿಸಿ, ವೈದ್ಯರಿಗೂ ಫೋನ್ ಮಾಡಿದ್ದರು.
ಸ್ಥಳದಲ್ಲಿದ್ದ ಒಂದಿಬ್ಬರು ಸೇರಿ ಕಬ್ಬಿಣದ ಸರಳನ್ನು ಮೊದಲು ಕತ್ತರಿಸಿ, ಗೇಟ್‌ನಿಂದ ಬೇರೆ ಮಾಡಿದರು. ಬಳಿಕ ವೈದ್ಯರು, ನರ್ಸ್ ಬಾಲಕಿಯ ಕೆನ್ನೆಯಲ್ಲಿದ್ದ ತುಂಡನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲೇ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರವಿಯವರ ಈ ಸಮಯಪ್ರಜ್ಞೆಯ ಬಗ್ಗೆ ಪ್ರತೀಕ್ ಸಾಲುಂಕೆ ಎಂಬುವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʼರವಿಯವರಿಂದಾಗಿ ಬಾಲಕಿ ದೊಡ್ಡಮಟ್ಟದ ಅಪಾಯದಿಂದ ಪಾರಾಗಿದ್ದಾಳೆ. ಅವಳ ರಕ್ಷಣೆಗಾಗಿ ರವಿ 30ನಿಮಿಷ ಕಬ್ಬಿಣದ ಗೇಟ್‌ನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದರುʼ ಎಂದು ತಿಳಿಸಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ರವಿ ಭಂಡಾರಿಯವರನ್ನು ತುಂಬ ಹೊಗಳುತ್ತಿರುವುದಲ್ಲದೆ, ಅವರಿಗೆ ಅಮೇಜಾನ್ ಬಹುಮಾನ ಕೊಡಬೇಕು ಎಂದೂ ಹೇಳುತ್ತಿದ್ದಾರೆ.
ಇದನ್ನೂ ಓದಿ: Viral News | ಹಣ ಉಳಿಸಲು ಆ ಕಾಲೇಜು ವಿದ್ಯಾರ್ಥಿ ತಿಂದಿದ್ದು ಡಾಗ್‌ಫುಡ್!