Site icon Vistara News

Offbeat news: ಆಹಾ ಎಂಥ ಕಲೆ! ಉಪ್ಪಿನಕಾಯಿ ಕಲೆಗೆ ₹ 4.9 ಲಕ್ಷ!

pickle art

ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆಯಿದೆ. ಹಾಗಾಯಿತು ಈ ಕಥೆಯೂ. ಗೋಡೆಗೆ ಅಂಟಿದ ಉಪ್ಪಿನಕಾಯಿಯ ಕಲೆಯೂ ಇಲ್ಲಿ ʻಆರ್ಟ್‌ ಪೀಸುʼ ಎಂದು ೪.೯ ಲಕ್ಷ ರೂಪಾಯಿಗಳಿಗೆ ಮಾರಲು ಹೊರಟಿದ್ದಾರೆ!

ಸಾಂಪ್ರದಾಯಿಕ ಕಲೆಗೆ ಇಂದು ಇರುವ ಬೇಡಿಕೆಯಂತೆಯೇ ಸಮಕಾಲೀನ ಹೊಸ ಬಗೆಯ ಕಲೆಗೂ ಭಾರೀ ಬೇಡಿಕೆಯಿದೆ. ಏನು ಮಾಡಿದರೂ ಕಲೆ ಎಂದು ನೋಡುವ ದೃಷ್ಟಿಕೋನದ ಮಂದಿ ಈಗಿದ್ದಾರೆ. ನಿರ್ಧಿಷ್ಟ ಆಕಾರ, ಬಣ್ಣ, ರೂಪು ಇಲ್ಲದಿದ್ದರೂ ಹೊಸ ಹೊಸ ಕ್ರೇಜಿ ಐಡಿಯಾಗಳೇ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಇದೂ ಇಂಥದ್ದೇ ಒಂದು ಪ್ರಕರಣ. ಇಲ್ಲೊಬ್ಬ ಕಲಾಕಾರರಿಗೆ ಉಪ್ಪಿನಕಾಯಿ ಮೂಡಿಸಿದ ಕಲೆಯೂ ಕಲೆಯಾಗಿ ಕಂಡಿದೆ.

ಸಿಡ್ನಿಯ ಆರ್ಟ್‌ ಗ್ಯಾಲರಿಯೊಂದರಲ್ಲಿ ಮೆಕ್‌ ಡೋನಾಲ್ಡ್‌ನ ಚೀಸ್‌ ಬರ್ಗರಿನೊಳಗಿದ್ದ ಉಪ್ಪಿನಕಾಯಿಯ ತುಂಡೊಂದು ಹಾರಿ ಗೋಡೆಯ ಮೇಲೆ ತನ್ನ ಮುದ್ರೆಯನ್ನೊತ್ತಿದಂತಹ ಕಲಾಕೃತಿ ಪ್ರದರ್ಶನ ಕಾಣುತ್ತಿದ್ದು, ಸದ್ಯಕ್ಕಿದು ಇಂಟರ್ನೆಟ್‌ನಲ್ಲಿ ಭಾರೀ ವೈರಲ್‌ ಆಗಿದೆ.

ʻಪಿಕ್ಕಲ್‌ʼ ಹೆಸರಿನ ಈ ಕಲಾಕೃತಿ ಸದ್ಯಕ್ಕೀಗ ಮ್ಯಾಥ್ಯೂ ಗ್ರಿಫಿನ್‌ ಎಂಬ ಕಲಾಕಾರನ ಸೊತ್ತಾಗಿದ್ದು, ಈತ ಇದನ್ನು ಸುಮಾರು ೪.೯೩ ಲಕ್ಷ ರೂಪಾಯಿಗಳಿಗೆ ಮಾರಲು ಹೊರಟಿದ್ದಾನೆ. ಈತನ ಈ ಪಿಕ್ಕಲ್‌ ಹೆಸರಿನ ಕಲಾಕೃತಿ ಸಿಡ್ನಿಯ ಮೈಕೆಲ್‌ ಲೆಟ್‌ ಗ್ಯಾಲರಿಯಲ್ಲಿ ಈತನದೇ ನಾಲ್ಕು ಕಲಾಕೃತಿಗಳ ಪೈಕಿ ಒಂದಾಗಿ ಪ್ರದರ್ಶನಗೊಂಡಿದ್ದು, ಇದರ ಬೆಲೆ ೧೦,೦೦೦ ನ್ಯೂಜಿಲ್ಯಾಂಡ್‌ ಡಾಲರ್‌ಗಳು ಅಂದರೆ ಸುಮಾರು ೪.೯೩ ಲಕ್ಷ ರೂಪಾಯಿಗಳು ಎಂದು ನಿಗದಿಪಡಿಸಲಾಗಿದೆ.

ಈ ಕಲಾಕೃತಿಯ ಕೆಳಗೆ ಆತನೇ ಬರೆದ ತಲೆಬರಹವ ವಿವರಣೆಯಲ್ಲಿ, “ಮೆಕ್‌ ಡೊನಾಲ್ಡ್ಸ್‌ ಚೀಸ್‌ ಬರ್ಗರ್‌ನ ಉಪ್ಪಿನಕಾಯಿಯ ತುಂಡೊಂದು ಗೋಡೆಯ ಮೇಲೆ ಹಾರಿದಾಗ” ಎಂದಿದೆ. ಕಲಾಕೃತಿಯ ಚಿತ್ರವನ್ನು ನೋಡಿದ ಇಂಟರ್ನೆಟ್‌ ಜನತೆ ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಹಲವರು ಇದಕ್ಕೆ ಕಾಮೆಂಟುಗಳನ್ನು ಮಾಡುತ್ತಿದ್ದು, ಕೆಲವರು ʻಜೀನಿಯಸ್‌ʼ, ʻಬ್ರಿಲಿಯಂಟ್‌ʼ ಎಂದೆಲ್ಲಾ ಈ ಕಲಾಕಾರನ ಐಡಿಯಾವನ್ನು ಬಣ್ಣಿಸಿದ್ದಾರೆ. ಇನ್ನೂ ಕೆಲವರು ʻನನ್ನ ಜೀವನದಲ್ಲೇ ನೋಡಿದ ಅದ್ಭುತ ಕಲಾಕೃತಿಯಿದುʼ ಎಂದು ನಗೆಯಾಡಿದ್ದಾರೆ. ಇನ್ನೂ ಕೆಲವರು, ʻಕಲೆ ಸತ್ತು ಹೋಗಿದೆ, ಸ್ಟುಪಿಡ್‌, ಯೂಸ್ಲೆಸ್‌ʼ ಎಂದು ನೇರವಾಗಿ ಬೈದಿದ್ದಾರೆ.

ಇದನ್ನೂ ಓದಿ: ಆನೆಯಲ್ಲ, ಆಮೆಗಾಗಿ ಒಂದೂವರೆ ಗಂಟೆ ನಿಂತ ರೈಲು!

ಇನ್ನೊಬ್ಬ, ನಾನೂ ಹಿಂದೆ ಸಣ್ಣವನಿದ್ದಾಗ ಮೆಕ್‌ ಡೊನಾಲ್ಡ್ಸ್‌ನಲ್ಲಿ ಉಪ್ಪಿನಕಾಯಿ ತುಂಡೊಂದನ್ನು ಹೀಗೆಯೇ ಹಾರಿಸಿದ್ದೆ, ಆದರೆ ನನ್ನನ್ನು ಬೈದು ಹೊರಗಟ್ಟಿದ್ದರು, ಈಗ ನೋಡಿದರೆ ಇದು ಕಲೆ!” ಎಂದು ತಮಾಷೆ ಮಾಡಿದ್ದಾರೆ.

ಸಿಡ್ನಿಯ ಆರ್ಟ್‌ ಗ್ಯಾಲರಿಯ ನಿರ್ದೇಶಕ ರ್ಯಾನ್‌ ಮೂರ್‌ ಮಾತನಾಡುತ್ತಾ, ʻಜನ ತಮಾಷೆ ಮಾಡಿ ನಗುವುದು ಸಹಜವೇ. ಯಾಕೆಂದರೆ ಈ ಕಾನ್ಸೆಪ್ಟ್‌ ತುಂಬ ತಮಾಷೆಯಾಗಿದೆʼ ಎಂದಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಕಲೆ ಯಾವುದೆಂದು ಕಲಾಕಾರರು ನಿರ್ಧಾರ ಮಾಡುವುದಿಲ್ಲ. ಸಮಾಜ ಯಾವುದನ್ನು ಕಲೆ ಎಂದು ಮಾತಾಡುತ್ತದೋ ಅದು ನಿಜವಾಗಿಯೂ ಕಲೆಯಾಗುತ್ತದೆ. ಈಗ ಈ ಕಲಾಕೃತಿಯೂ ಕೂಡಾ, ಗೋಡೆಗಂಟಿದ ಉಪ್ಪಿನಕಾಯಿಯಂತೆ ಕಾಣುವುದರಿಂದ ಇದೂ ಕಲಾಕೃತಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಹೇಳಿದ್ದಾರೆ.

ಸದ್ಯ ಈ ಕಲಾಕೃತಿ ೧೦,೦೦೦ ನ್ಯೂಜಿಲ್ಯಾಂಡ್‌ ಡಾಲರ್ಸ್‌ ಎಂಬ ಮುಖಬೆಲೆಯನ್ನು ಹೊತ್ತು ಪ್ರದರ್ಶನಗೊಳ್ಳುತ್ತಿದೆ. ಇದನ್ನು ಕೊಳ್ಳುವವರು ಇದಲ್ಲದೆ ಪ್ರತ್ಯೇಕ ೪.೪೪ ನ್ಯೂಜಿಲ್ಯಾಂಡ್‌ ಡಾಲರ್‌ಗಳನ್ನೂ ನೀಡಿ ಚೀಸ್‌ ಬರ್ಗರ್‌ ಕೂಡಾ ಕೊಳಳಬೇಕಾಗುತ್ತದೆ. ಯಾಕೆಂದರೆ, ಕೊಂಡವರಿಗೆ ಚೀಸ್‌ ಬರ್ಗರ್‌ನಿಂದ ಉಪ್ಪಿನಕಾಯಿ ಹಾರಿಸುವುದು ಹೇಗೆ ಎಂಬ ಪ್ರಾತ್ಯಕ್ಷಿಕೆಯನ್ನೂ ಇಲ್ಲಿ ತೋರಿಸಿಕೊಡಲಾಗುತ್ತಿದೆಯಂತೆ!

ಸದ್ಯಕ್ಕೆ, ಎಲ್ಲರೂ ಉಪ್ಪಿನಕಾಯಿಯನ್ನು ಗೋಡೆಗೆ ಹಾರಿಸಿ ಕಲಾಕಾರರಾಗುವ ಲಕ್ಷಣ ತೋರಿಸುತ್ತಿದ್ದಾರಂತೆ!

ಇದನ್ನೂ ಓದಿ: Viral Video | ಗೋವಿಗೆ ಅಮ್ಮ ಎಂದು ಸುಮ್ಮನೆ ಹೇಳೋಲ್ಲ; ಈ ದೃಶ್ಯಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ

Exit mobile version