Site icon Vistara News

Yoga in space | ಅಂತರಿಕ್ಷದಲ್ಲೂ ಯೋಗಾಭ್ಯಾಸ ಮಾಡಿದ ಯುರೋಪಿಯನ್‌ ಖಗೋಳಶಾಸ್ತ್ರಜ್ಞೆ!

yoga in space

ಯೋಗ ಕೇವಲ ದೈಹಿಕ ವ್ಯಾಯಾಮವಷ್ಟೇ ಅಲ್ಲ. ಅದು ಮಾನಸಿಕ ದೈಹಿಕ ಕ್ಷಮತೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಯೋಗಾಸನಗಳ ನಿಯಮಿತ ಅಭ್ಯಾಸದಿಂದ ದೈಹಿಕವಾಗಿ ಆರೋಗ್ಯ ಸಾಧಿಸುವ ಜೊತೆಗೆ ಮಾನಸಿಕ ಆರೋಗ್ಯವನ್ನೂ ಸಮತೋಲನದಲ್ಲಿ ಇರಿಸಬಹುದಾಗಿದೆ. ಇದಕ್ಕಾಗಿಯೇ ಇಂದು ಪ್ರಪಂಚದ ಮೂಲೆ ಮೂಲೆಯಿಂದಲೂ ಯೋಗದ ಬಗ್ಗೆ ಆಸಕ್ತಿ ತೋರಿಸುತ್ತಿದ್ದು, ಇಂದು ಯೋಗ ಬಹುತೇಕರಿಗೆ ಒಂದು ಜೀವನಕ್ರಮವಾಗಿ ಬದಲಾಗುತ್ತಿದೆ. ಯುವ ಮಂದಿಯೂ ಯೋಗದೆಡೆಗೆ ಇನ್ನಿಲ್ಲದಂತೆ ಆಕರ್ಷಿತರಾಗುತ್ತಿದ್ದಾರೆ.

ಭೂಮಿ ಮೇಲಿರುವ ಮಂದಿ ಯೋಗದೆಡೆಗೆ ಹೊರಳಿ ತಮ್ಮ ಬದಲಾದ ಜೀವನ ಶೈಲಿಯ ಪರಿಣಾಮಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೆ, ಅಂತರಿಕ್ಷಕ್ಕೆ ಹಾರಿದವರೂ ಯೋಗ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು. ಹೌದು, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುವ ಖಗೋಳಶಾಸ್ತ್ರಜ್ಞೆ ಸಮಂತಾ ಕ್ರಿಸ್ಟೋಫೊರೆಟ್ಟಿ ಇದೀಗ ಗುರುತ್ವಾಕರ್ಷಣೆಯೇ ಇಲ್ಲದ ನೆಲದ ಮೇಲೆ ಯೋಗ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಯೋಗ ಮಾಡಲು ಒಂದು ಮ್ಯಾಟ್‌ ಬಿಟ್ಟರೆ ನೆಲದ ಮೇಲೆ ನಿಲ್ಲಬಹುದಾದ ಗುರುತ್ವಾಕರ್ಷಣೆ ಇವೆರಡು ಇದ್ದರೆ ಸಾಕು. ಆದರೆ ಇಲ್ಲಿ ಕ್ರಿಸ್ಟೋಫೆರೆಟ್ಟಿ ಅಂತರಿಕ್ಷ ನಿಲ್ದಾಣದಲ್ಲಿ ನಿಂತು ವೃಕ್ಷಾಸನ ಸೇರಿದಂತೆ ಹಲವು ಯೋಗಾಸನಗಳ ಅಭ್ಯಾಸವನ್ನು ಮಾಡಿದ್ದಾರೆ. ಕಾಸ್ಮಿಕ್‌ ಕಿಡ್ಸ್‌ ಯೋಗ ಎಂಬ ಸಂಸ್ಥೆ ಪೋಸ್ಟ್‌ ಮಾಡಿದ ವಿಡಿಯೋ ತುಣುಕಿನಲ್ಲಿ ಈಕೆ ಯೋಗ ಮಾಡುತ್ತಿರುವುದು ಈಗ ವೈರಲ್‌ ಆಗಿದೆ. ಈಕೆ ದೈನಂದಿನ ಜೀವನಕ್ರಮದಲ್ಲಿ ರೂಢಿ ಮಾಡಿಕೊಂಡಿರುವ ಯೋಗಾಭ್ಯಾಸವನ್ನು ಈಗ ಸ್ಪೇಸ್‌ ಸ್ಟೇಷನ್‌ನ ಝೀರೋ ಗ್ರಾವಿಟಿಯ ಪ್ರದೇಶದಲ್ಲೂ ಮಾಡುತ್ತಿರುವುದನ್ನು ಆಕೆ ಹೇಳಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋದ ಜೊತೆಗೆ ʻತೂಕವನ್ನು ಸಮತೋಲನದಲ್ಲಿರಿಸುವುದು ಸ್ವಲ್ಪ ಸವಾಲಿನ ವಿಷಯವೇ ಸರಿ. ಆದರೆ, ಸರಿಯಾದ ಆಸನಗಳು ಹಾಗೂ ಒಂದಿಷ್ಟು ಕ್ರಿಯಾತ್ಮಕವಾದ ಸ್ವಾತಂತ್ರ್ಯ ಸಿಕ್ಕರೆ ಸಾಕು ಮಾಡಲಾಗದ ಕೆಲಸವೇನಲ್ಲʼ ಎಂದು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ | Yoga Day 2022: ನೀರಿನಲ್ಲೇ ಯೋಗಾಭ್ಯಾಸ!

ಕಾಸ್ಮಿಕ್‌ ಕಿಡ್ಸ್‌ ಎಂಬ ಈ ಯೋಗಶಾಲೆಯ ಯೋಗಕ್ರಮವನ್ನು ಪಾಲಿಸುವ ಕ್ರಿಸ್ಟೋಫೆರೆಟ್ಟಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಾರೆ.ಈ ಪೋಸ್ಟ್‌ ನೋಡಿ ಬಹುತೇಕರು ಥ್ರಿಲ್‌ ಆಗಿದ್ದಾರೆ. ಎಂಥ ಜಾಗದಲ್ಲೂ ಯೋಗ ಮಾಡಬಹುದು, ಎಲ್ಲವೂ ಯೋಗಮಯ ಎಂಬಂತೆ ಕೆಲವರು ಕಾಮೆಂಟುಗಳನ್ನು ಮಾಡಿದ್ದು, ಇನ್ನೂ ಕೆಲವರು, ನಿಮ್ಮ ಯೋಗಾಭ್ಯಾಸ ನಿಮ್ಮನ್ನು ಇನ್ನಷ್ಟು ಎತ್ತರಕ್ಕೇರಿಸಲಿ. ನಿಮ್ಮ ಕ್ರಿಯಾಶೀಲತೆ ನಮ್ಮ ಮನಗೆದ್ದಿದೆʼ ಎಂದು ಶುಭ ಹಾರೈಸಿದ್ದಾರೆ ಕೂಡಾ.

Exit mobile version