Site icon Vistara News

Bahubali Samosa | ಬಾಹುಬಲಿ ಸಮೋಸಾಗೆ ವೃಕೋದರರು ಬೇಕಾಗಿದ್ದಾರೆ

samosa and other non indian foods

Bahubali Samosa | ʻಯಾರು ಬಲ್ಲರು ಎನ್ನ ಭುಜಬಲದ ಪರಾಕ್ರಮಾʼ ಎಂದು ಅಣ್ಣಾವ್ರ ಹಾಗೆ ಹಾಡಿದ್ರೆ ನಮಗೆ ನೆನಪಾಗುವುದು ಯುದ್ಧಭೂಮಿಯ ಸನ್ನಿವೇಶ. ಆದರೆ ಮಧ್ಯಪ್ರದೇಶದ ಈ ಮಿಠಾಯಿ ಅಂಗಡಿಯಲ್ಲಿ ಹೀಗೆ ಹಾಡುವ ಪರಾಕ್ರಮಿಗಳು ಸಾಲುಹಚ್ಚಿ ನಿಂತಿದ್ದಾರಂತೆ ಯುದ್ಧಕ್ಕಲ್ಲ, ಸಮೋಸ ತಿನ್ನುವುದಕ್ಕೆ!

ಇದರ ಹೆಸರೇ ʻಬಾಹುಬಲಿ ಸಮೋಸʼ. ಬರೋಬ್ಬರಿ ಎಂಟು ಕೆ.ಜಿ. ತೂಗುವ ಇದನ್ನು ತಿನ್ನುವುದು ಮಾತ್ರವಲ್ಲ, ಎತ್ತುವುದಕ್ಕೂ ಭುಜಬಲದ ಪರಾಕ್ರಮವೇ ಬೇಕು. ಇಷ್ಟೊಂದು ಗಾತ್ರದ ಸಮೋಸಾದ ಬಣ್ಣ, ಘಮ ಮತ್ತು ರುಚಿ ನೋಡಿದವರ ಬಾಯಲ್ಲಿ ಇನ್ನೆಷ್ಟು ಪ್ರಮಾಣದ ನೀರು ಸುರಿದಿದೆಯೋ ಗೊತ್ತಿಲ್ಲ. ಆದರೆ ಈವರೆಗೆ ಒಬ್ಬರೂ ಇದನ್ನು ತಿಂದುಮುಗಿಸಿದವರಿಲ್ಲವಂತೆ. ಅಂದರೆ, ಎಂಟು ಕೆ.ಜಿ. ತೂಗುವ ಒಂದಿಡೀ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸುವ ವೃಕೋದರರಿಗೆ ಬಹುಮಾನವಾಗಿ 51,000 ರೂ.ಗಳನ್ನು ಈ ಮಿಠಾಯಿ ಅಂಗಡಿಯ ಮಾಲೀಕ ಶುಭಂ ಕೌಶಲ್‌ ಘೋಷಿಸಿದ್ದಾರೆ. ಆದರೆ ಅವರ ಬಹುಮಾನದ ಥೈಲಿ ಹಾಗೆಯೇ ಉಳಿದಿದೆಯಂತೆ.

ಛೇ! ಇದೆಂತಾ ನಾಚಿಕೆಗೇಡು! ಭೀಮ-ಬಕಾಸುರರ ನಾಡಿನಲ್ಲಿ ಒಂದು ಸಮೋಸ ತಿಂದು ತೇಗುವವರಿಗೆ ಗತಿ ಇಲ್ಲವೇ ಎಂದು ಕೇಳಬಹುದು. ತಿಂದು ಮುಗಿಸುವುದಾಗಿ ಹಲವು ಪರಾಕ್ರಮಿಗಳು ಭುಜ ತಟ್ಟಿ ಬಂದವರಿದ್ದರು. ಹಾಗೆ ಬಂದವರಲ್ಲಿ ಕೆಲವರು ಸಮೋಸಾದ ಗಾತ್ರ ನೋಡಿಯೇ ಹಿಮ್ಮೆಟ್ಟಿದರೆ, ಹಲವರಿಗೆ ತಿಂದ ಮೇಲಿನ ತಮ್ಮ ಸ್ಥಿತಿ ನೆನೆದು ದಿಗಿಲಾಗಿರಬಹುದು. ಹಾಗೂ ಉಮೇದಿ ತೋರಿದವರಿಗೆ ಅರ್ಧವೂ ತಿನ್ನಲಾಗಲಿಲ್ಲವಂತೆ. ಬಕ-ವೃಕರದ್ದು ಮಾತ್ರವಲ್ಲ, ನಮ್ಮದು ಉತ್ತರ ಕುಮಾರನ ನಾಡೂ ಹೌದಲ್ಲವೇ!

ವಾಸ್ತವದಲ್ಲಿ, 1,100 ರೂ. ಬೆಲೆಯ ಈ ಬಾಹುಬಲಿ ಸಮೋಸಾ ತಿನ್ನಲು ಸುಮಾರು 30 ಹುಲುಮಾನವರು ಬೇಕೆಂದು ಅಂದಾಜಿಸಲಾಗಿದೆ. ಒಂದು ಸಮೋಸಾ ತಯಾರಿಸಲು ಸುಮಾರು ಒಂದೂವರೆ ತಾಸು ಬೇಕಾಗುತ್ತದೆ ಎಂದು ಶುಭಂ ಕೌಶಲ್‌ ಹೇಳುತ್ತಾರೆ. ಈ ಸಮೋಸಾಗೆ ಆಲೂಗಡ್ಡೆ, ಬಟಾಣಿ, ಪನೀರ್‌ ಮತ್ತು ಒಣಹಣ್ಣುಗಳ ಹೂರಣವನ್ನು ತುಂಬುತ್ತಾರಂತೆ. ಈ ಹಿಂದೆ, 600 ರೂ.ಗಳ ವೆಚ್ಚದಲ್ಲಿ ಇಂಥದ್ದೇ 4 ಕೆ.ಜಿ. ತೂಕದ ಸಮೋಸಾವನ್ನು ಈ ಅಂಗಡಿಯವರು ಮಾಡಿದ್ದರಂತೆ. ಇದೀಗ ದುಪ್ಪಟ್ಟು ತೂಕದ ತಿನಿಸನ್ನು ಮಾಡುತ್ತಿದ್ದಾರೆ. ಹಾಗೆಯೇ ಮುಂದುವರಿದು, 1300 ರೂ.ಗಳ ವೆಚ್ಚದಲ್ಲಿ 10 ಕೆ.ಜಿ. ಸಮೋಸಾ ಮಾಡುವ ಯೋಜನೆಯೂ ಇವರಿಗಿದೆ. ತಿಂದು ಮುಗಿಸುವುದಕ್ಕೆ ಜನರನ್ನು ಎಲ್ಲಿಂದ ತರುತ್ತಾರೋ ಗೊತ್ತಿಲ್ಲ.

ಆದರೆ ಒಂದು ವಿಷಯ, ಬಾಹುಬಲಿ ಸಮೋಸ ತಿಂದು ಹೊಟ್ಟೆ ಹಿಗ್ಗಿಸಿಕೊಳ್ಳಲಿಕ್ಕಾಗದಿದ್ದರೂ, ಕಂಡು ಕಣ್ತಣಿಯಬಹುದಲ್ಲ ಎಂದು ಬರುವವರ ಸಂಖ್ಯೆ ಹಿಗ್ಗಾಮುಗ್ಗಾ ಹೆಚ್ಚಾಗಿದೆಯಂತೆ. ಹಾಗಾಗಿ ಅಂಗಡಿಯ ಉಳಿದ ತಿಂಡಿಗಳ ವ್ಯಾಪಾರವೂ ಎದ್ವಾತದ್ವಾ ಹೆಚ್ಚಾಗಿದೆ. ಈ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿರುವ ಅಂಗಡಿಯ ಮಾಲೀಕರು, ತಿನಿಸುಗಳ ಬ್ಲಾಗರ್‌ಗಳು ತುಂಬಾ ಬರುತ್ತಾರೆ ಇಲ್ಲಿ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮೋಸಾಗಳು ಬಿಸಿಬಿಸಿಯಾಗಿ ಹಂಚಿಕೆಯಾಗುತ್ತಿವೆ ಎನ್ನುತ್ತಾರೆ.

ಇದನ್ನೂ ಓದಿ: Viral Video | ಇವರಲ್ಲಿ ನಿಜಕ್ಕೂ ಬಿಲ್‌ ಕೊಟ್ಟಿದ್ದು ಯಾರು?

Exit mobile version