ತನ್ನ ೯೬ನೇ ವಯಸ್ಸಿನಲ್ಲಿ ಮೃತ ಪಟ್ಟಿರುವ ಬ್ರಿಟನ್‌ನ ರಾಣಿ ಎಲಿಜಬೆತ್‌ರ ೭೦ ವರ್ಷಗಳ ಅಧಿಕಾರಾವಧಿಯ ನೆನಪಿನಲ್ಲಿ ಆಕೆಯ ಹುಟ್ಟುಹಬ್ಬದ ದಿನದಂದು ಅಂದರೆ, ೨೧ ಏಪ್ರಿಲ್ ೨೦೨೨ರಲ್ಲಿ ಈ ಬಾರ್ಬಿ ಡಾಲ್ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಬಂದಷ್ಟೇ ವೇಗದಲ್ಲಿ ಸೋಲ್ಡ್ ಔಟ್ ಆಗಿದ್ದ ಈ ಬೊಂಬೆಗಳೀಗ ರಾಣಿಯ ಪ್ರೀತಿಪಾತ್ರರ ಮನೆಗಳಲ್ಲಿ, ಬಾರ್ಬಿ ಪ್ರಿಯ ಮನೆಗಳಲ್ಲಿ ರಾಣಿಯ ನೆನಪಿನಲ್ಲಿ ಇರಲಿವೆ. ಕಾಕತಾಳೀಯವೆಂಬಂತೆ ಬಾರ್ಬಿ ಬೊಂಬೆ ಬಿಡುಗಡೆಯಾದ ವರ್ಷವೇ ರಾಣಿ ಇಹಲೋಕ ತ್ಯಜಿಸಿದ್ದಾರೆ.
ಸದ್ಯಕ್ಕೆ ಔಟ್ ಆಫ್ ಸ್ಟಾಕ್ ತೋರಿಸುತ್ತಿರುವ ಖ್ಯಾತ ಆಟಿಕೆ ಕಂಪನಿ ಮಟೆಲ್‌ನ ಹೆಮ್ಮೆಯ ಉತ್ಪನ್ನವಾಗಿದ್ದ ಇದಕ್ಕೆ ಸುಮಾರು ೭೫.೯೯ ಡಾಲರ್ ಬೆಲೆ ನಮೂದಿಸಲಾಗಿತ್ತು. ಬಿಳಿಯ ಗೌನ್‌ನ ಮೇಲೆ ಬಿಳಿ ಹೂಗಳ ಲೇಸ್ ಪ್ರಿಂಟ್‌ನಲ್ಲಿ ಬೆಳ್ಳಿಯ ಆಭರಣಗಳನ್ನು ಧರಿಸಿರುವ ಹೊಳೆವ ಕಿರೀಟವಿದ್ದ ಈ ಬಾರ್ಬಿ ಬೊಂಬೆ ಖಂಡಿತವಾಗಿಯೂ ಬಾರ್ಬಿ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.
ಬಾರ್ಬಿ ಬ್ರಾಂಡ್ ಖದರಿಗೆ, ರಾಣಿಯ ಗತ್ತಿಗೆ ಎರಡಕ್ಕೂ ಹೊಂದುವಂತೆ ಬಹಳ ಆಕರ್ಷಕವಾಗಿ ಇದನ್ನು ವಿನ್ಯಾಸ ಮಾಡಲಾಗಿದ್ದು, ಇದರ ಶ್ರೇಯಸ್ಸು ಮಟೆಲ್‌ನ ಬಾರ್ಬಿ ವಿನ್ಯಾಸ ವಿಭಾಗದ ಹಿರಿಯ ನಿರ್ದೇಶಕ ರಾಬರ್ಟ್ ಬೆಸ್ಟ್ ಅವರಿಗೆ ಸಲ್ಲಬೇಕು. ಇವರು ರಾಣಿಯದ್ದೇ ಮಾದರಿಯ ಲುಕ್ ಹಾಗೂ ಅಪರೂಪದ ಸ್ಟೈಲ್ ಇದರಲ್ಲಿ ತರಲು ಪ್ರಯತ್ನಿಸಿದ್ದರೂ, ರಾಣಿಯ ದಿರಿಸನ್ನು ಹೋಲುವಂತೆ ಗೌನ್ ಹಾಗೂ ಇತರ ಎಲ್ಲ ವಿಶೇಷತೆಗಳನ್ನು ಬೊಂಬೆಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ಮೂಲಕ ನೋಡಿದ ಕೂಡಲೇ ರಾಣಿ ಎಲಿಜಬೆತ್ ಜೀವತಳೆದು ಬಂದಂತೆ ಕಾಣುವಂತೆ ಈ ಬೊಂಬೆ ರೂಪಿಸಲಾಗಿತ್ತು.
ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್
ಈ ಬಾರ್ಬಿ ಬೊಂಬೆ ಹಾಕಿಕೊಂಡಿರುವ ಗೌನ್ ರಾಣಿ ಧರಿಸುವ ಯಾವುದೇ ಗೌನ್‌ನ ಕಾಪಿ ಮಾಡಿಲ್ಲವಾದರೂ, ಆಕೆಯ ವ್ಯಕ್ತಿತ್ವ, ಸ್ಟೈಲ್ ಹಾಗೂ ಧರಿಸುವ ಬಣ್ಣಗಳನ್ನು ನೋಡಿ ಅದರಿಂದ ಪ್ರೇರಿತರಾಗಿ ಬೇರೆಯದೇ ಆದ ವಿನ್ಯಾಸ ಮಾಡಲಾಗಿತ್ತು. ಆಕೆಯ ಕಳೆದ ಹಲವು ವರ್ಷಗಳ ಫೋಟೋಗಳನ್ನು ನೋಡಿ ಅಭ್ಯಾಸ ಮಾಡಿ ಅದರಂತೆ ಈ ಬೊಂಬೆ ರೂಪಿಸಲಾಗಿದೆ ಎಂದು ಅವರು ಬಿಡುಗಡೆಯ ಸಂದರ್ಭ ಹೇಳಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.
ತುಂಬ ಸಿಂಪಲ್ ಆಗಿರುವ ಆದರೆ ಅಷ್ಟೇ ಆಕರ್ಷಕವಾಗಿರುವ ಗೌನ್ ಧರಿಸುವ ರಾಣಿ ಅದಕ್ಕೊಪ್ಪುವ ಆಭರಣಗಳನ್ನು ಜತನದಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಬಾರ್ಬಿಯಲ್ಲೂ ಇದನ್ನೇ ಮುಖ್ಯವಾಗಿ ಪರಿಗಣಿಸಲಾಗಿತ್ತು. ರಾಣಿಯ ಈ ಬಾರ್ಬಿಯ ಪ್ರಮುಖ ಆಕರ್ಷಣೆಯೆಂದರೆ ಅದು ಆಕೆಯ ಕಿರೀಟ. ಇದನ್ನು ೧೯೪೭ರಲ್ಲಿ ಪ್ರಿನ್ಸ್ ಫಿಲಿಪ್ ಅವರನ್ನು ಮದುವೆಯಾಗುವ ಸಂದರ್ಭ ಧರಿಸಿದ ಮಾದರಿಯದ್ದೇ ಇದಾಗಿದೆ.
ಈ ಡಾಲ್ ಹೊತ್ತು ಬರುವ ಪೆಟ್ಟಿಗೆಯನ್ನು ಕೂಡಾ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿತ್ತು. ಬಕ್ಕಿಂಗ್‌ಹ್ಯಾಂ ಅರಮನೆಯ ಸಿಂಹಾಸನದ ಕೊಠಡಿಯನ್ನೇ ಹೋಲುವ ಪೆಟ್ಟಿಗೆ ಇದಾಗಿದ್ದು, ಸಿಂಹಾಸನ, ರೆಡ್ ಕಾರ್ಪೆಟ್, ಹಾಗೂ ಲಾಂಛನಗಳನ್ನು ಹೊಂದಿದ್ದ ಇದು ರಾಣಿಯ ಅಧಿಕಾರದ ಅಮೃತ ಮಹೋತ್ಸವದ ನೆನಪನ್ನು ಉಳಿಸುವಂತೆ ವಿನ್ಯಾಸ ಮಾಡಲಾಗಿತ್ತು. ಹಾಗಾಗಿ ಪೆಟ್ಟಿಗೆ ಸಮೇತ ರಾಣಿಯ ಡಾಲ್ ಮಾದರಿಯನ್ನು ಸಂಗ್ರಹಿಸಿಡಬಹುದಾಗಿದೆ.
ಮಟೆಲ್ ಆಟಿಕೆ ಕಂಪನಿಯ ಈವರೆಗಿನ ಬಾರ್ಬಿ ಡಾಲ್‌ಗಳಲ್ಲಿ ಸಾಕಷ್ಟು ಹಾಲಿವುಡ್ ಸೆಲೆಬ್ರಿಟಿಗಳ ಬಾರ್ಬಿ ರೂಪದಲ್ಲಿ ಬಂದಿದ್ದು ಪ್ರಿನ್ಸ್ ವಿಲಿಯಮ್ಸ್ ಹಾಗೂ ಕೇಟ್ ಮಿಡ್ಲ್‌ಟನ್ ಕೂಡಾ ಇವರಲ್ಲಿ ಪ್ರಮುಖರು.
ಇದನ್ನೂ ಓದಿ | ಮಹಾರಾಣಿಯ ನೋಟಕ್ಕಾಗಿ ಕಾತರಿಸುತ್ತಿದ್ದ ಜನ | ಭಾರತಕ್ಕೆ 3 ಬಾರಿ ಭೇಟಿ