Site icon Vistara News

ಹೋಳಿ ಸಂಭ್ರಮಾಚರಣೆ ನಡುವೆಯೂ ಕರ್ತವ್ಯ ಪ್ರಜ್ಞೆ ಜಾಗೃತ; ಲಕ್ಷಾಂತರ ಮಂದಿ ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಕೊಟ್ಟಿದ್ದು ಹೀಗೆ…

viral news

viral news

ಇಂದೋರ್‌: ಜೀವ ರಕ್ಷಕ ವಾಹನ ಎಂದೇ ಪರಿಗಣಿಸಲ್ಪಡುವ ಆಂಬ್ಯುಲೆನ್ಸ್‌ (Ambulance)ನ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತ್ಯವ್ಯ. ಕರ್ತವ್ಯದ ಜತೆಗೆ ಇದು ಮಾನವೀಯತೆಯ ಕಾರ್ಯವೂ ಹೌದು. ಇದೀಗ ಮಧ್ಯ ಪ್ರದೇಶದ ಇಂದೋರ್‌ (Indore)ನಲ್ಲಿ ಹೋಳಿ (Holi) ಆಚರಣೆಯಲ್ಲಿ ತೊಡಗಿದ್ದ ಲಕ್ಷಾಂತರ ಮಂದಿ ಆಂಬ್ಯುಲೆನ್ಸ್‌ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಸಂಭ್ರಮಾಚರಣೆ ನಡುವೆಯೂ ಕರ್ತವ್ಯ ಪ್ರಜ್ಞೆ ಮರೆಯದ ಅವರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ (Viral News).

ಶನಿವಾರ (ಮಾರ್ಚ್‌ 30) ಮಧ್ಯ ಪ್ರದೇಶದ ಇಂದೋರ್‌ನ ರಾಜ್ವಾಡಾದಲ್ಲಿ ರಂಗಪಂಚಮಿ ಆಚರಿಸಲಾಯಿತು. ರಂಗಪಂಚಮಿಯನ್ನು ಹೋಳಿ ಹಬ್ಬ ನಡೆದು 5 ದಿನದ ಬಳಿಕ ಆಚರಿಸಲಾಗುತ್ತದೆ. ಅಂದು ಪರಸ್ಪರ ಬಣ್ಣ ಎರಚಿ ಜನರು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅದರಂತೆ ಲಕ್ಷಾಂತರ ಮಂದಿ ನಗರದಲ್ಲಿ ಗುಂಪುಗೂಡಿದ್ದರು.

ನಡೆಯಿತು ಪವಾಡ

ಈ ವೇಳೆ ರೋಗಿಯನ್ನು ಕರೆದುಕೊಂಡು ಬಂದ ಆಂಬುಲೆನ್ಸ್‌ ರಾಜ್ವಾಡಾ ಪ್ರವೇಶಿಸಿತ್ತು. ನಗರದ ಎಲ್ಲಿ ನೋಡಿದರೂ ಜನ ಸಾಗರ. ಎಲ್ಲ ರಸ್ತೆಯಲ್ಲಿಯೂ ಜನರು ತುಂಬಿ ತುಳುಕುತ್ತಿದ್ದರು. ಸಾಸಿವೆ ಕಾಳು ಹಾಕಿದರೂ ನೆಲಕ್ಕೆ ಬೀಳದಷ್ಟು ಮಂದಿ ಅಲ್ಲಿ ಒಟ್ಟಾಗಿದ್ದರು. ಆಂಬುಲೆನ್ಸ್‌ಗೆ ಸಾಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇತ್ತು. ಆದರೆ ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಆ ದಿನ ಸಾಕ್ಷಿಯಾಯಿತು. ಬಹು ದೊಡ್ಡ ಪವಾಡವೇ ನಡೆಯಿತು. ಆಂಬ್ಯುಲೆನ್ಸ್‌ನ ಸೈರನ್ ಕೇಳುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಸ್ವಯಂ ಪ್ರೇರಿತರಾಗಿ ಜಾಗ ಬಿಟ್ಟು ಕೊಡ ತೊಡಗಿದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡ ತಕ್ಷಣ ನೆರವಿಗೆ ಧಾವಿಸಿ ಮಾರ್ಗ ತೆರವುಗೊಳಿಸಿದರು. ಆಂಬ್ಯುಲೆನ್ಸ್ ಜನಸಂದಣಿಯ ನಡುವೆ ಚಲಿಸಲು ಸಹಾಯ ಮಾಡಿದರು. ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್‌ ತನ್ನ ಗಮ್ಯ ಸ್ಥಾನವನ್ನು ತಲುಪಿತು.

ವಿಡಿಯೊ ವೈರಲ್‌

ಲಕ್ಷಾಂತರ ಜನರ ಮಧ್ಯೆ ಆಂಬ್ಯುಲೆನ್ಸ್‌ ಸಾಗುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಲಕ್ಷಾಂತರ ಮಂದಿ ವೀಕ್ಷಿಸಿ ಜನತೆಗೆ ಹ್ಯಾಟ್ಸಾಪ್‌ ಹೇಳುತ್ತಿದ್ದಾರೆ.

ಇಂದೋರ್‌ಗೆ ಸೆಲ್ಯೂಟ್

ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಕಾರ್ಯಕ್ಕಾಗಿ ಇಂದೋರ್ ನಿವಾಸಿಗಳನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಇಂದೋರ್‌ಗೆ ಸೆಲ್ಯೂಟ್‌ ಹೊಡೆದಿದ್ದಾರೆ. ʼʼಇಡೀ ರಾಜ್ವಾಡಾದಲ್ಲಿ ಎಳ್ಳು ಇಡಲು ಸಹ ಸ್ಥಳವಿಲ್ಲದಷ್ಟು ಜನ ದಟ್ಟಣೆ ಇತ್ತು. ಆದರೆ ಆಂಬ್ಯುಲೆನ್ಸ್ ಹಾದುಹೋಗುವ ಕ್ಷಣದಲ್ಲಿ ರಸ್ತೆಯನ್ನು ತೆರವುಗೊಳಿಸುವುದನ್ನು ನೋಡಿ ನನ್ನ ಹೃದಯ ತುಂಬಿ ಬಂತು. ಇಂದೋರ್‌ನ ಸಹೋದರ ಸಹೋದರಿಯರ ಬಗ್ಗೆ ನನ್ನ ನಂಬಿಕೆ ಇನ್ನೂ ಹೆಚ್ಚಾಯಿತುʼʼ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಕೊಡಲಿಯೇಟು ತಿಂದ ಮರದೊಳಗಿನಿಂದ ಜುಳುಜುಳು ಹರಿಯಿತು ನೀರು; ಅಚ್ಚರಿಯ ವಿಡಿಯೊ ನೀವೂ ನೋಡಿ

ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಈ ಘಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. “ನಿಮ್ಮೆಲ್ಲರ ಹೃದಯದಲ್ಲಿ ಇತರರಿಗಾಗಿ ಇರುವ ಪ್ರೀತಿ ಮತ್ತು ಸಹಕಾರದ ಮನೋಭಾವ ಕಂಡು ಸಂತಸವಾಗಿದೆ. ಇದು ಇತರರಿಗೂ ಮಾದರಿ. ನಾನು ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ತಿಳಿಸುತ್ತೇನೆ. ಇಂದೋರ್‌ನ ಶಿಸ್ತು ಅದ್ಭುತವಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಈ ಕಾರ್ಯಕ್ಕೆ ನೆಟ್ಟಿಗರೂ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version