ಈಗೇನಿದ್ದರೂ ಪ್ರಿವೆಡ್ಡಿಂಗ್ ಫೋಟೋಶೂಟ್ ಕಾಲ. ಮದುವೆಗೂ ಮೊದಲೇ ಫೋಟೋಗ್ರಾಫರ್‌ಗಳಿಗೆ ಕೆಲಸ ಶುರುವಾಗುತ್ತದೆ. ಇನ್ನು ಮದುವೆಯ ದಿನದ ಕತೆ ಬೇರೆಯೇ. ಎಷ್ಟು ಕ್ರಿಯೇಟಿವ್ ಆಗಿದ್ದರೂ ಸಾಲದು. ವೆಡ್ಡಿಂಗ್ ಫೋಟೋಗ್ರಫಿಗೆ ಈಗಿರುವ ಭಾರೀ ಬೇಡಿಕೆ ಹಾಗೂ ಆ ರಂಗದಲ್ಲಿರುವ ಸಿಕ್ಕಾಪಟ್ಟೆ ಸ್ಪರ್ಧೆಯಿಂದಾಗಿ ಛಾಯಾಗ್ರಾಹಕರು ಕ್ರಿಯಾಶೀಲರಾಗಿ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಫೋಟೋ, ವಿಡಿಯೋ ತೆಗೆಯುತ್ತಾರೆ. ಕೆಲವೊಂದು ಫೋಟೋಗಳು ವೈರಲ್ ಆಗುವ ಮೂಲಕ ಛಾಯಾಗ್ರಾಹಕರು ತೆರೆಯ ಹಿಂದಿನ ಹೀರೋಗಳಾಗಿ ಮಿಂಚಿ ತಮ್ಮ ಬೇಡಿಕೆ ಕುದುರಿಸಿಕೊಳ್ಳುತ್ತಾರೆ.
ಇದೂ ಅಂಥದ್ದೇ ಒಂದು ಕತೆ. ಇಲ್ಲಿ ಛಾಯಾಗ್ರಾಹಕ ಅದ್ಭುತ ಲೊಕೇಶನ್ ಹುಡುಕಿಕೊಂಡು ಹೋಗಿಲ್ಲ. ಇರುವ ಜಾಗದಲ್ಲೇ ಅದ್ಭುತವನ್ನು ತೋರಿಸಿದ್ದಾರೆ. ಚಂದದ ಫೋಟೋ ಜೊತೆಗೆ ಸಮಸ್ಯೆಯನ್ನೂ ಎತ್ತಿ ತೋರಿಸಿ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.
ಇಲ್ಲಿ ಮದುಮಗಳು, ಯಾವ ಭಿಡೆಯೂ ಇಲ್ಲದೆ, ಹೊಂಡಗಳಿಂದ ಆವೃತವಾಗಿರುವ, ಮಳೆಯಿಂದಾಗಿ ಆ ಹೊಂಡಗಳೆಲ್ಲ ಕೆನ್ನೀರಿನಿಂದ ತುಳುಕಾಡುತ್ತಿರುವ, ಹೊಂಡ ಎಲ್ಲಿದೆ ರಸ್ತೆ ಎಲ್ಲಿದೆ ಎಂದು ಸಂದೇಹ ಬರುವಷ್ಟರಮಟ್ಟಿಗಿನ ಪರಿಸ್ಥಿತಿ ಇರುವ ಸಾಮಾನ್ಯ ರಸ್ತೆಯೊಂದರಲ್ಲಿ ನಡೆದು ಬರುತ್ತಾಳೆ. ಎಲ್ಲರೂ ಗಡಿಬಿಡಿಯಲ್ಲಿ ಅವರವರದೇ ಕೆಲಸಗಳಿಗಾಗಿ ಓಡಾಡಿಕೊಂಡಿರುವ, ಹೊಂಡಕ್ಕೆ ಬೀಳದಂತೆ ಬ್ಯಾಲೆನ್ಸ್ ಮಾಡಿಕೊಂಡು ಗಾಡಿ ಓಡಿಸುವ ಚಾಲಕರುಗಳೇ ಈ ಫೋಟೋಶೂಟ್‌ನ ಪ್ರಮುಖ ಹಿನ್ನೆಲೆಯಾಗಿದೆ. ಹಾಗಾಗಿಯೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನದೀತೀರ, ಚಂದನೆಯ ಹೂದೋಟ, ಗದ್ದೆ ಬಯಲು, ನೀಲಾಕಾಶ ಇವುಗಳೇ ಹಿನ್ನೆಲೆಯಾಗಿ ಫೋಟೋ ತೆಗೆಯಬೇಕೆಂದು ನಿಯಮವೇನಾದರೂ ಇದೆಯಾ? ಚಂದದ ಹಿನ್ನೆಲೆಯೇ ಬೇಕೆಂದು ಹೇಳಿದ್ಯಾರು? ಇರೋದನ್ನು ಇರೋ ಹಾಗೆ ತೋರಿಸ್ತೀವಪ್ಪ ಎಂದು ಹಲವರು ಇಂಥ ಪ್ರಯತ್ನಗಳಿಗೆ ಕೈ ಹಾಕಿದ್ದುಂಟು. ಈ ಛಾಯಾಗ್ರಾಹಕ ಕೂಡಾ ಅಂಥದ್ದೇ ವಾದವನ್ನು ಮುಂದಿಟ್ಟಿದ್ದಾರೆ. ನಮ್ಮ ರಸ್ತೆಗಳೆಲ್ಲಾ ಅಂಕುಡೊಂಕು. ರಸ್ತೆ ಪೂರ್ತಿ ಹೊಂಡಗಳು. ಹೊಂಡಗಳ ತುಂಬ ಕೆಸರು ನೀರು. ರಸ್ತೆಯೆಲ್ಲಿದೆ ಹೊಂಡವೆಲ್ಲಿದೆ ಎಂದು ನೋಡಬೇಕಾದ ಪರಿಸ್ಥಿತಿ ಇದೆ. ಕೆಂಪಾದ ಸೀರೆಯುಟ್ಟ ನೀರೆ, ಇಂತಹ ಕೆಂಪಾದ ನೀರಿನ ರಸ್ತೆಯಲ್ಲಿ ನಡೆಯುತ್ತಾ ಬಂದರೆ ಎಷ್ಟು ಚೆನ್ನಾಗಿ ಕಾಣುತ್ತಾಳೆ ನೋಡಿ ಎಂದು ಛಾಯಾಗ್ರಾಹಕನೇ ಹೇಳಿದ ಹಾಗಿದೆ. ಆ ಮೂಲಕ ಮಲಗಿರುವ ಸರ್ಕಾರವೇ, ಇಲ್ಲೊಮ್ಮೆ ರಸ್ತೆ ನೋಡಿ ಎಂದೂ ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: Viral video| ಅಂಗಡಿಗೆ ನುಗ್ಗಿ ಎರಡು ಚಾಕೊಲೇಟ್ ಎಗರಿಸಿ ಓಡಿದ ಕರಡಿ!
ಹೊಂಡಗಳಾದ ರಸ್ತೆಗಳನ್ನು ಸರಿಪಡಿಸಲು ಎಷ್ಟೇ ಮನವಿ ಮಾಡಿದರೂ, ಅದೇ ರಸ್ತೆಯಲ್ಲಿ ಪ್ರಯಾಣಿಸುವ ರಾಜಕಾರಣಿಗಳು ಅಧಿಕಾರಿಗಳಿದ್ದರೂ ಅವರ್ಯಾರೂ ಕಣ್ಣು ತೆರೆಯದೆ ಇದ್ದಾಗ, ಕ್ರಿಯಾತ್ಮಕವಾಗಿ ಹೊಂಡಗಳನ್ನೇ ಬಳಸಿಕೊಂಡು ಚಿತ್ರ ಬಿಡಿಸಿ ಗಮನ ಸೆಳೆಯಲು ಪ್ರಯತ್ನಿಸಿದ ಉದಾಹರಣೆಗಳಿವೆ. ಇದೂ ಅಂಥದ್ದೇ ಒಂದು ಉದಾಹರಣೆಯೂ ಹೌದು. ಕಲೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದಕ್ಕೆ ಇಂತಹುಗಳೇ ನಿದರ್ಶನ.
ಆರೋ ವೆಡ್ಡಿಂಗ್ ಕಂಪನಿ ಹೆಸರಿನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದ್ದು, ಈ ಫೋಟೋಶೂಟ್ ನೋಡಿ ಹಲವರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಹಲವರು ರಸ್ತೆಯ ಸ್ಥಿತಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದು ರಸ್ತೆಯಲ್ಲ, ಕೆರೆ ಎಂದಿದ್ದಾರೆ. ಇನ್ನೂ ಕೆಲವರು ಇದು ರಸ್ತೆಯಾ? ಇಲ್ಲಿ ಒಂದಿಷ್ಟು ಮೀನುಗಳನ್ನು ಹಾಕಿ ಮೀನುಗಾರಿಕೆ ಮಾಡಬಹುದು ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. ಕೇರಳದಲ್ಲಿ ಸದ್ಯ ರಸ್ತೆಗಳ ಸ್ಥಿತಿಗತಿಯ ಕುರಿತು ಭಾರೀ ಚರ್ಚೆಗಳಾಗುತ್ತಿರುವ ಕಾರಣ ಈ ವಿಡಿಯೋ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇಂತದ್ದೊಂದು ಕ್ರಿಯೇಟಿವ್ ಐಡಿಯಾ ಮಾಡಿ ಫೋಟೋ ತೆಗೆದ ಛಾಯಾಗ್ರಾಹಕನಿಗೂ, ಯಾವ ತಲೆಬಿಸಿಯೂ ಇಲ್ಲದೆ, ಮದುವೆ ಸೀರೆ ಏನಾದೀತು ಎಂಬ ಚಿಂತೆಯೂ ಇಲ್ಲದೆ, ಹೊಂಡಗಳ ಕೆನ್ನೀರಿನ ಮಧ್ಯೆ ಕೆಂದಾವರೆಯ ಹಾಗೆ ಹೆಜ್ಜೆ ಹಾಕಿದ ಮದುಮಗಳಿಗೂ ಎಲ್ಲರೂ ಶಹಬ್ಬಾಸ್‌ಗಿರಿ ಕೊಡುತ್ತಿದ್ದಾರೆ.