ಮದುವೆಯಲ್ಲಿ ವಧು-ವರರು ಪರಸ್ಪರರು ಹೂವಿನ ಹಾರ ಹಾಕಿಕೊಳ್ಳುತ್ತಾರೆ. ನಂತರ ವರ, ವಧುವಿಗೆ ತಾಳಿ ಕಟ್ಟುತ್ತಾನೆ. ಇದು ಸಂಪ್ರದಾಯ. ಆದರೆ ಇಲ್ಲೊಂದು ಜೋಡಿ ಅತ್ಯಂತ ಭಯಾನಕ ರೀತಿಯಲ್ಲಿ ವಿವಾಹವಾಗಿದ್ದಾರೆ. ವಧು-ವರರಿಬ್ಬರೂ ಹೂವಿನ ಹಾರ ಹಾಕಿಕೊಳ್ಳುವ ಬದಲು, ಹಾವಿನ ಹಾರ ಹಾಕಿಕೊಂಡಿದ್ದಾರೆ. ಹಾವು ಎಂಬುದು ಅನೇಕರಿಗೆ ಭಯ ಹುಟ್ಟಿಸುವ ಜೀವಿ. ಅದು ಸುಮ್ಮನೆ ಹಾದು ಹೋದರೂ ಸಾಕು ಮೈ ಜುಂ ಎನ್ನುತ್ತದೆ. ಅಂಥದ್ದರಲ್ಲಿ ಈ ಜೋಡಿ ಹಾವು ಹಾಕಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ.
ಅಂದಹಾಗೇ, ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಬೀಡ್ ಎಂಬ ಜಿಲ್ಲೆಯ ಒಂದು ಹಿಂದುಳಿದ ಹಳ್ಳಿಯಲ್ಲಿ. ವಧು-ವರರಿಬ್ಬರೂ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಮೊದಲು ವಧು ಒಂದು ಸಣ್ಣ ಗಾತ್ರದ ಹಾವನ್ನು ವರನ ಕುತ್ತಿಗೆಗೆ ಹಾಕುತ್ತಾಳೆ. ನಂತರ ವರ ಒಂದು ದೊಡ್ಡ ಗಾತ್ರದ ಹಾವನ್ನು ವಧುವಿನ ಕೊರಳಿಗೆ ಏರಿಸುತ್ತಾನೆ. ಈ ಆಚರಣೆ ವೇಳೆ ವಧು-ವರರಿಬ್ಬರೂ ಸ್ವಲ್ಪ ಹೆದರಿದಂತೆ ಕಂಡು ಬರುತ್ತದೆ. ಇವರಿಬ್ಬರೂ ಬೀಡ್ ಜಿಲ್ಲೆಯವರೇ ಆಗಿದ್ದು, ವನ್ಯಜೀವಿ ಇಲಾಖೆಯಲ್ಲಿ ಉದ್ಯೋಗಿಗಳು.
ವಿಡಿಯೋ ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಹುಬ್ಬೇರಿಸಿದ್ದಾರೆ. ನಮ್ಮ ದೇಶದಲ್ಲಿ ಎಂಥೆಂಥಾ ವಿಚಿತ್ರ ಆಚರಣೆಗಳು ಇವೆಯಪ್ಪಾ ಎಂದು ಆಶ್ಚರ್ಯ ಚಕಿತರಾಗಿ ಕಮೆಂಟ್ ಮಾಡುತ್ತಿದ್ದಾರೆ. ʼಇವರ್ಯಾರಪ್ಪಾ, ಹಾವು ಹಾಕಿ ಮದುವೆಯಾಗುತ್ತಿದ್ದಾರೆʼ ಎಂದು ಒಬ್ಬರು ಪ್ರಶ್ನಿಸಿದ್ದರೆ, ʼಏನೇ ಅಪಾಯ ಎದುರಾದರೂ ನಾವು ಹೆದರುವುದಿಲ್ಲ, ಮದುವೆಯಾಗುತ್ತೇವೆ ಅಷ್ಟೇ ಎಂಬ ರೀತಿ ವರ್ತಿಸುತ್ತಿದ್ದಾರೆʼ ಈ ದಂಪತಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡ್ತಿದ್ದ ಹುಡುಗಿಯ ಸ್ಕರ್ಟ್ ಎತ್ತಿ ನೋಡಿದ ಪೋಲಿ ಕಪಿ !