Site icon Vistara News

Viral News : ಗಾಯಕಿ ಸಿಟ್ಟಿನಿಂದ ಎಸೆದಿದ್ದ ಮೈಕ್‌ಗೆ ಭಾರೀ ಡಿಮ್ಯಾಂಡ್‌! ಹರಾಜಾಗುತ್ತಿರುವ ಆ ಮೈಕ್‌ ಬೆಲೆ ಎಷ್ಟು ನೋಡಿ!

cardi b mic on auction

ಲಾಸ್‌ ವೇಗಾಸ್‌: ಪ್ರಸಿದ್ಧ ಗಾಯಕಿ ಕಾರ್ಡಿ ಬಿ ಅವರು ಇತ್ತೀಚೆಗೆ ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ಸಂಗೀತ ಕಛೇರಿ ನಡೆಸುವಾಗ ಅಲ್ಲಿದ್ದವರೊಬ್ಬರು ಆಕೆಯ ಮೇಲೆ ಪಾನೀಯ ಚೆಲ್ಲಿದ್ದರು. ಆಗ ಸಖತ್‌ ಕೋಪಗೊಂಡಿದ್ದ ಗಾಯಕಿ ಕೈನಲ್ಲಿದ್ದ ಮೈಕ್‌ ಅನ್ನೇ ಆತನ ಮುಖಕ್ಕೆ ಎಸೆದಿದ್ದರು. ಹೀಗೆ ಗಾಯಕಿಯ ಕೋಪಕ್ಕೆ ಸಾಕ್ಷಿಯಾಗಿದ್ದ ಆ ಮೈಕ್‌ ಇದೀಗ ಭಾರೀ ಬೆಲೆಯ ಮೈಕ್‌ ಆಗಿದೆ. ಆ ಮೈಕ್‌ ಅನ್ನು ಹರಾಜು ಇಡಲಾಗಿದ್ದು, ಅದಕ್ಕೆ ಬರೋಬ್ಬರಿ 82 ಲಕ್ಷ ರೂ. ಅನ್ನು ನಿಗದಿ (Viral News) ಮಾಡಲಾಗಿದೆ.

ಹೌದು. ಕಾರ್ಡಿ ಬಿ ಅವರು ಎಸೆದಿದ್ದ ಅದೇ ಮೈಕ್‌ ಅನ್ನು eBay ವೆಬ್‌ಸೈಟ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ಅದನ್ನು “ಕಾರ್ಡಿ ಬಿ ಅವರು ವ್ಯಕ್ತಿಯ ಮೇಲೆ ಎಸೆದ ಶುರ್‌ ಆಕ್ಸಿಯೆಂಟ್‌ ಡಿಜಿಟಲ್‌ ಮೈಕ್‌” ಎಂದು ಹೆಸರಿಸಲಾಗಿದೆ. ಲಾಸ್‌ ವೇಗಾಸ್‌ನಲ್ಲಿ ಹಲವು ಪ್ರಮುಖ ನೈಟ್‌ ಕ್ಲಬ್‌ಗಳಿಗೆ ಆಡಿಯೊ ಸಪೋರ್ಟ್‌ ನೀಡುವ ಆಡಿಯೋ ಕಂಪನಿಯಾದ ದಿ ವೇವ್‌ ಕಂಪನಿಯದ ಮಾಲೀಕರಾದ ಸ್ಕಾಟ್‌ ಫಿಶರ್‌ ಅವರು ಈ ಮೈಕ್‌ ಅನ್ನು ಹರಾಜಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: Laptop Import: ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ ಆಮದು ನಿರ್ಬಂಧಿಸಿದ ಕೇಂದ್ರ ಸರ್ಕಾರ; ಏನಿದಕ್ಕೆ ಕಾರಣ?
eBay ವೆನ್‌ಸೈಟ್‌ನಲ್ಲಿ ಮೈಕ್‌ ಅನ್ನು ಹರಾಜಿಗೆ ಇಡಲಾಗಿದ್ದು, ಅದರಲ್ಲಿನ ಉತ್ಪನ್ನದ ವಿವರಣೆ ಜಾಗದಲ್ಲಿ ಹೀಗೆ ಬರೆಯಲಾಗಿದೆ. “2023ರ ಜುಲೈ 29ರಂದು ಡ್ರಾಯಿಸ್‌ ಬೀಚ್‌ ಕ್ಲಬ್‌ನಲ್ಲಿ ಗಾಯಕಿ ಕಾರ್ಡಿ ಬಿ ಅವರು ವ್ಯಕ್ತಿಯ ಮೇಲೆ ಸಿಟ್ಟಿನಿಂದ ಎಸೆದ ಮೈಕ್‌ ಇದು. ಆ ಘಟನೆಯನ್ನು ನೋಡುವುದಕ್ಕೆ ನಿಮಗೆ ಸಾಮಾಜಿಕ ಜಾಲತಾಣಗಳಾದ್ಯಂತ ಸಾವಿರಾರು ಲಿಂಕ್‌ಗಳು ಸಿಗುತ್ತವೆ” ಎಂದು ವಿವರಣೆ ನೀಡಲಾಗಿದೆ.

“ನಾವು ಆ ಕಾರ್ಯಕ್ರಮಕ್ಕೆಂದು ಹಲವು ಮೈಕ್‌ಗಳನ್ನು ಕೊಟ್ಟಿದ್ದೆವು. ಆದರೆ ಅದರಲ್ಲಿ ಕಾರ್ಡಿ ಬಿ ಅವರು ಬಳಸಿದ ಮೈಕ್‌ ಯಾವುದು ಎನ್ನುವುದನ್ನು ಕಾರ್ಯಕ್ರಮದಲ್ಲಿ ಇದ್ದ ಕಾರ್ಯಕರ್ತರ ಸಹಾಯದಿಂದ ಗುರುತಿಸಿದ್ದೇವೆ. ಆ ಮೈಕ್‌ ಅನ್ನು ಮುಖ್ಯವಾದ ಮೈಕ್‌ ಎಂದು ಪರಿಗಣಿಸಲಾಗಿತ್ತಾದ್ದರಿಂದ ಅದನ್ನು ಪತ್ತೆ ಹಚ್ಚುವುದು ಸುಲಭವಾಗಿತ್ತು. ಇದೇ ಮೈಕ್‌ ಸದ್ಯ ಜಗತ್ತಿನಾದ್ಯಂತ ವೈರಲ್‌ ಆಗುತ್ತಿರುವುದು” ಎಂದೂ ವಿವರಣೆಯಲ್ಲಿ ಮಾಹಿತಿ ನೀಡಲಾಗಿದೆ.

ಸದ್ಯಕ್ಕೆ ಮೈಕ್‌ಗೆ ಸ್ಕಾಟ್‌ ಫಿಶರ್‌ ಅವರು 82 ಲಕ್ಷ ರೂ. ಅನ್ನು ಆರಂಭಿಕ ಬೆಲೆಯನ್ನಾಗಿ ಇರಿಸಿದ್ದಾರೆ. ಹರಾಜು ತೆಗೆದುಕೊಳ್ಳು ಇಚ್ಛಿಸುವವರು ಅಲ್ಲಿ ಬೆಲೆ ಏರಿಕೆ ಮಾಡಬಹುದಾಗಿದೆ. ಈ ಮೈಕಿನ ಹರಾಜಿನಿಂದ ಬಂದ ಹಣವನ್ನು ಲಾಸ್‌ ವೇಗಾಸ್‌ನಲ್ಲಿರುವ ಎರಡು ಚಾರಿಟಿಗಳಿಗೆ ದಾನ ಮಾಡಲಾಗುವುದು ಎಂದು ಸ್ಕಾಟ್‌ ಫಿಶರ್‌ ತಿಳಿಸಿದ್ದಾರೆ.

ಜುಲೈ 29ರಂದು ಲಾಸ್‌ ವೇಗಾಸ್‌ನ ಡ್ರಾಯಿಸ್‌ ಬೀಚ್‌ ಕ್ಲಬ್‌ನಲ್ಲಿ ಕಾರ್ಡಿ ಬಿ ಅವರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತೆರೆದ ವೇದಿಕೆಯಲ್ಲಿ ಗಾಯಕಿ ಹಾಡುತ್ತಿದ್ದ ಸಮಯದಲ್ಲಿ ಅಲ್ಲಿದ್ದ ಯಾರೋ ಒಬ್ಬರು ತಮ್ಮ ಕೈನಲ್ಲಿದ್ದ ಪಾನೀಯವನ್ನು ಗಾಯಕಿಯ ಮೇಲೆ ಎರಚಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾರ್ಡಿ ಬಿ ತಮ್ಮ ಕೈನಲ್ಲಿದ್ದ ಮೈಕ್‌ ಅನ್ನೇ ಪಾನೀಯ ಎರಚಿದವರತ್ತ ಎಸೆದಿದ್ದಾರೆ. ಇದರಿಂದಾಗಿ ಮಹಿಳೆ ಒಬ್ಬಳಿಗೆ ಪೆಟ್ಟು ಬಿದ್ದಿರುವುದಾಗಿಯೂ ವರದಿಯಾಗಿದೆ. ಮಹಿಳೆ ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಜಾರಿಯಲ್ಲಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version