ಚಂಡೀಗಢ: ದಿವಂಗತ ಗಾಯಕ ಸಿಧು ಮೂಸೆವಾಲಾ (Sidhu Moose Wala) ಅವರ ಪೋಷಕರಿಗೆ ಕಳೆದ ವಾರ ಐವಿಎಫ್ (IVF) ಮೂಲಕ ಎರಡನೇ ಮಗ ಜನಿಸಿದ್ದು, ಮಗು ಜನಿಸಿದ ನಂತರ ಗರ್ಭ ಧರಿಸುವ ಪ್ರಾಯಮಿತಿ (Age limit) ಮೀರಿದೆ ಎಂದು ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಗಾಯಕ ಸಿಧು ಮೂಸೆವಾಲಾ ತಂದೆ ಬಾಲ್ಕೌರ್ ಸಿಂಗ್, ಜಿಲ್ಲಾಡಳಿತವು ಮಗುವಿನ ಬಗ್ಗೆ ದಾಖಲೆಗಳಿಗಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಸಿಧು ಮೂಸೆವಾಲಾನನ್ನು ಗುಂಡಿಕ್ಕಿ ಸಾಯಿಸಲಾದ ಸುಮಾರು ಎರಡು ವರ್ಷಗಳ ನಂತರ ದಂಪತಿಗಳು ಕಳೆದ ಶನಿವಾರ ಮಗುವನ್ನು ಹೊಂದಿದ್ದರು. 58 ವರ್ಷದ ತಾಯಿ ಚರಣ್ ಸಿಂಗ್ ಅವರು ಇನ್-ವಿಟ್ರೋ ಫರ್ಟಿಲೈಸೇಶನ್ (IVF) ತಂತ್ರದ ಮೂಲಕ ಮಗುವನ್ನು ಹೊಂದಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಬಾಲ್ಕೌರ್ ಸಿಂಗ್ ದಾಖಲೆಗಳನ್ನು ನೀಡುವ ಉಪಕ್ರಮ ಮುಗಿಸಲು ಆಡಳಿತವನ್ನು ವಿನಂತಿಸಿದ್ದಾರೆ. “ಮಗುವಿನ ಬಗ್ಗೆ ದಾಖಲೆಗಳನ್ನು ನೀಡುವಂತೆ ಜಿಲ್ಲಾಡಳಿತ ನನಗೆ ಕಿರುಕುಳ ನೀಡುತ್ತಿದೆ. ನಾನು ಸರ್ಕಾರ ಮತ್ತು ಮುಖ್ಯಮಂತ್ರಿಗೆ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಮನವಿ ಮಾಡುತ್ತೇನೆ. ಹಾಜರಾಗಲು ಕೇಳಿದರೆ ಸೂಕ್ತ ದಾಖಲೆ ತೋರಿಸುತ್ತೇನೆ. ನಾನು ಎಲ್ಲ ಕಾನೂನುಗಳನ್ನು ಅನುಸರಿಸಿದ್ದೇನೆ” ಎಂದು ಸಿಂಗ್ ಹೇಳಿದರು.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಪಂಜಾಬ್ ಸರ್ಕಾರದಿಂದ ಸಿಧು ಮೂಸೆವಾಲಾ ಅವರ ತಾಯಿ ಚರಣ್ ಸಿಂಗ್ ಅವರ ಐವಿಎಫ್ ಚಿಕಿತ್ಸೆಗೆ ಸಂಬಂಧಿಸಿದಂತೆ ವರದಿಯನ್ನು ಕೇಳಿದೆ. ಮತ್ತು ಐವಿಎಫ್‌ಗೆ ವಯಸ್ಸಿನ ಮಿತಿ 21-50 ವರ್ಷಗಳು ಎಂದು ಸೂಚಿಸಿದೆ.
“ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ- 2021ರ ಸೆಕ್ಷನ್ 21(g)(i) ಅಡಿಯಲ್ಲಿ, ART ಸೇವೆಗಳನ್ನು ಪಡೆಯುವ ಮಹಿಳೆಗೆ ವಯಸ್ಸಿನ ಮಿತಿಯನ್ನು 21-50 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ತನ್ನ ಎರಡನೇ ಮಗನ ಜನನವನ್ನು ಘೋಷಿಸಿದ ಬಲ್ಕೌರ್ ಸಿಂಗ್ ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ಹಿರಿಯ ಮಗ, ರಾಜಕಾರಣಿಯಾಗಿ ಮಾರ್ಪಟ್ಟಿದ್ದ ಗಾಯಕ ಸಿಧು ಮೂಸೆವಾಲಾನನ್ನು ಮೇ 29, 2022ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ: Sidhu Moose Wala Murder | ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ 10 ದಿನ ಎನ್‌ಐಎ ಕಸ್ಟಡಿಗೆ