ಅಮ್ಮನಾದವಳಿಗೆ ತನ್ನ ಮಗುವಿನ ರಕ್ಷಣೆ, ಕಾಳಜಿ, ಆರೈಕೆಯೇ ಪ್ರಥಮ ಆದ್ಯತೆಯಾಗಿರುತ್ತದೆ. ತನ್ನ ಮಗುವಿಗೆ ಯಾವೊಂದು ಮಾರ್ಗದಲ್ಲೂ ಅಪಾಯ ಬಾರದಂತೆ ಆಕೆ ಕಾಪಾಡಿಕೊಳ್ಳುತ್ತಾಳೆ. ಹಾಗೇ, ಮಕ್ಕಳೂ ಕೂಡ ಅಮ್ಮನ ಬಗ್ಗೆ ಅಪಾರ ಕಾಳಜಿ ಹೊಂದಿರುತ್ತಾರೆ. ಅಮ್ಮಂಗೆ ಸ್ವಲ್ಪ ಏನಾದರೂ ಆದರೂ ಮಕ್ಕಳು ಸಹಿಸಿಕೊಳ್ಳಲಾರರು. ಅಮ್ಮಂಗೆ ಒಂದು ಚಿಕ್ಕ ಗಾಯವಾದರೂ ತಾವೇ ಅಳುವ ಮಕ್ಕಳನ್ನೂ ನಾವು ನೋಡಿದ್ದೇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಾಲಕನೊಬ್ಬ ತನ್ನ ತಾಯಿಯನ್ನು ಅಪಾಯದಿಂದ ಕಾಪಾಡಿದ ವಿಡಿಯೊವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭರ್ಜರಿ ಮೆಚ್ಚುಗೆಗೆ ಪಾತ್ರವಾಗಿದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಎಂಬುವರು 43 ಸೆಕೆಂಡ್ಗಳ ಈ ವಿಡಿಯೊವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು, ‘ತಾಯಿಯನ್ನು ಅಪಾಯದಿಂದ ಪಾರು ಮಾಡಿದ ಈ ಪುಟ್ಟ ಮಗುವಿನ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಎಷ್ಟು ಪ್ರಶಂಸಿಸಿದರೂ ಸಾಕಾಗುವುದಿಲ್ಲ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಡಿ.23ರಂದು ಶೇರ್ ಆಗಿರುವ ವಿಡಿಯೊ 2 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ‘ಈ ಬಾಲಕ ಒಬ್ಬ ಹೀರೋ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ’ ‘ಮಕ್ಕಳು ದೇವರ ಉಡುಗೊರೆ ಎಂದು ಹೇಳುವುದು ಇದಕ್ಕೇ’ ಎಂದೂ ಹಲವರು ಹೇಳಿದ್ದಾರೆ.
ಏನಿದೆ ವಿಡಿಯೊದಲ್ಲಿ?
ರಸ್ತೆ ಪಕ್ಕದಲ್ಲಿರುವ ಗ್ಯಾರೇಜ್ವೊಂದರಲ್ಲಿ ನಡೆದ ಘಟನೆ ಇದು. ಅದರ ದ್ವಾರದ ಚಾವಣಿ ಮೇಲೆ ಇಟ್ಟ ಯಾವುದೋ ವಸ್ತುವನ್ನು ತೆಗೆಯುವ ಸಲುವಾಗಿ ಮಹಿಳೆಯೊಬ್ಬರು ಮರದ ಏಣಿಯನ್ನು ಹಾಕಿಕೊಂಡು ಅದರ ಮೇಲೆ ನಿಂತಿದ್ದರು. ಅದೇನೋ ಸಮತೋಲನ ತಪ್ಪಿದಂತಾಗಿ ಏಣಿ ಕೆಳಗೆ ಬಿದ್ದುಹೋಯಿತು. ಅಷ್ಟರಲ್ಲಿ ಮಹಿಳೆ ಥಟ್ಟನೆ ಆ ಚಾವಣಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ನೇತಾಡಲು ಶುರು ಮಾಡಿದರು. ನೆಲ ತುಂಬ ಕೆಳಗೆ ಇರುವುದರಿಂದ ಆಕೆ ಜಂಪ್ ಮಾಡಿದರೂ ಗಾಯಗೊಳ್ಳುತ್ತಾರೆ. ಬಿದ್ದರೂ ಗಂಭೀರ ಏಟು ಆಗುತ್ತದೆ. ಆದರೆ ಎಷ್ಟೊತ್ತು ಅವರು ಹೀಗೆ ಚಾವಣಿಗೆ ನೇತಾಡುತ್ತ ಇರಲು ಸಾಧ್ಯ? ಇಂಥ ಪರಿಸ್ಥಿತಿ ಅಲ್ಲಿ ಎದುರಾಗಿತ್ತು.
ಇದೆಲ್ಲವನ್ನೂ ಅಲ್ಲೊಂದು ಮಗು ನಿಂತು ನೋಡುತ್ತಿತ್ತು. ಪುಟ್ಟ ಬಾಲಕ ಅವನು. ತನ್ನಮ್ಮ ಅಪಾಯದಲ್ಲಿದ್ದಾಳೆ ಎಂಬುದು ಅವನಿಗೆ ಗೊತ್ತಾಯಿತು. ಎರಡು-ಮೂರು ಸೆಕೆಂಡ್ ಆ ಬಾಲಕ ಹಾಗೇ ನಿಂತು ನೇತಾಡುತ್ತಿದ್ದ ಅಮ್ಮನನ್ನು ನೋಡಿದ. ತಕ್ಷಣವೇ ಅವನಿಗೆ ತಾನೇನು ಮಾಡಬೇಕು ಎಂಬುದು ಮನಸಿಗೆ ಹೊಳೆಯಿತು. ಓಡಿ ಹೋಗಿ ಆ ಏಣಿಯನ್ನು ತನ್ನ ಪುಟ್ಟ ಕೈಗಳಿಂದ, ಪ್ರಯಾಸ ಪಡುತ್ತ ಎತ್ತಿದ. ಅಮ್ಮನ ಕಾಲು ಎಟಕುವ ಜಾಗದಲ್ಲಿ ಸರಿಯಾಗಿ ನಿಲ್ಲಿಸಿದ. ಮಹಿಳೆ ಆ ಏಣಿಯ ಮೇಲೆ ನಿಂತು ಸುಧಾರಿಸಿಕೊಂಡರು. ಇತ್ತ ಬಾಲಕ ಮತ್ತೆ ಏಣಿ ಬೀಳದೆ ಇರಲಿ ಎಂದು ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದ. ತನಗಿರುವ ಯುಕ್ತಿ ಮತ್ತು ಪುಟ್ಟ ಶಕ್ತಿಯಿಂದ ಅಮ್ಮನನ್ನು ಅಪಾಯದಿಂದ ಪಾರು ಮಾಡಿದ್ದಾನೆ. ನೀವೊಮ್ಮೆ ವಿಡಿಯೊ ನೋಡಿ, ಇದು ನಿಮ್ಮ ಹೃದಯವನ್ನೂ ಸ್ಪರ್ಶಿಸುತ್ತದೆ..
ಇದನ್ನೂ ಓದಿ:Viral Video | ಏರ್ಪೋರ್ಟ್ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ; ಮತ್ತೆ ಉಸಿರುಕೊಟ್ಟು ಅಪಾಯದಿಂದ ಪಾರು ಮಾಡಿದ ಸೈನಿಕ