ಕ್ರಿಸ್ಮಸ್ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡುತ್ತದೆ. ಯಾವುದೇ ಹಬ್ಬವಾದರೂ ಮನೆಯಲ್ಲೇ ಕೆಲವೊಂದು ತಿಂಡಿಗಳನ್ನು ಮಾಡಿ ಕುಟುಂಬಸ್ಥರೊಂದಿಗೆ ನೆರೆಹೊರೆಯವರೊಂದಿಗೆ ಹಂಚಿ ತಿನ್ನುವುದು ವಾಡಿಕೆ. ಹಬ್ಬದ ಹೆಸರಿನಲ್ಲಿ ಎಲ್ಲರೂ ಸೇರಿ ಮಾತುಕತೆ ನಗು ವಿನಿಮಯ ಎಲ್ಲ ಧರ್ಮಗಳ ಮೂಲಮಂತ್ರ. ಆದರೆ, ಪ್ರಾಣಿಗಳ ಬಗ್ಗೆ ಈ ಸಂದರ್ಭ ಯಾರಾದರೂ ಯೋಚನೆ ಮಾಡುತ್ತಾರಾ? ಆದರೆ, ಇಲ್ಲೊಂದು ಇದಕ್ಕೆ ಅಪವಾದವೆಂಬಂತ ಕತೆಯಿದೆ. ಥಾಯ್ಲೆಂಡಿನ ಶೆಫ್ ಒಬ್ಬರು ಕ್ರಿಸ್‌ಮಸ್ ಹಬ್ಬಕ್ಕಾಗಿ ಸುಮಾರು ನೂರು ಬೀದಿನಾಯಿಗಳಿಗಾಗಿಯೇ ವಿಶೇಷ ಅಡುಗೆ ಮಾಡಿ ಬಡಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಥಾಯ್ಲೆಂಡಿನಲ್ಲಿರುವ ನಾಯಿಪ್ರೇಮಿ ಶೆಫ್ ನಿಯಾಲ್ ಹರ್ಬಿಸನ್ ತನ್ನೂರಿನ ನೂರು ಬೀದಿನಾಯಿಗಳಿಗಾಗಿ ಅಡುಗೆ ಮಾಡಿದ್ದು ಪ್ರಾಣಿಗಳಿಗೂ ಕ್ರಿಸ್‌ಮಸ್ ಸಡಗರವನ್ನು ಹಂಚಿದ್ದಾರೆ. ʻಬೀದಿನಾಯಿಗಳ ಜೀವನವೇ ಪ್ರಪಂಚದೆಲ್ಲೆಡೆ ಬಹಳ ದುಸ್ತರವಾದದ್ದು. ಆದರೆ, ಈ ನೂರು ಬೀದಿನಾಯಿಗಳಿಗೆ ಇಂದು ಹಬ್ಬ. ಬೆಳಗ್ಗೆ ೪.೩೦ಕ್ಕೆ ಎದ್ದು, ಈ ಬೀದಿನಾಯಿಗಳಿಗೆಂದೇ ಸ್ವಾದಿಷ್ಟವಾದ ಭೋಜನವನ್ನು ನಾನೇ ಕೈಯಾರೆ ಅಡುಗೆ ಮಾಡಿ ಬಡಿಸಿದ್ದೇನೆ. ನನ್ನ ನಾಯಿ ಪ್ರೀತಿಯನ್ನು ಕಂಡು ಅನೇಕರು ನನಗೆ ನಾಯಿಗಳಿಗಾಗಿ ಇರುವ ಆಟಿಕೆಗಳನ್ನು ಕಳುಹಿಸುತ್ತಿದ್ದಾರೆ. ಈ ನಾಯಿಗಳೆಲ್ಲ ಆಟಿಕೆಗಳ್ನು ನೋಡಿಯೇ ಇಲ್ಲ. ಅವಕ್ಕಾಗಿ ಈಗ ಪುಷ್ಕಳ ಭೋಜನದ ಜೊತೆಗೆ ಆಟಿಕೆಯೂ ಸಿಕ್ಕಿದೆʼ ಎಂದು ಶೆಫ್ ಹರ್ಬಿಸನ್ ತನ್ನ ಜಾಲತಾಣದ ಪುಟದಲ್ಲಿ ಬರೆದುಕೊಂಡು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Christmas 2022 | ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂತಸದ ಕ್ಷಣ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ
ಬೀದಿನಾಯಿಗಳಿಗೆ ಇಂದು ಎಲ್ಲ ಜೀವಿಗಳಂತೆಯೇ ಔಷಧಿ, ಬೆಚ್ಚನೆಯ ಪ್ರೀತಿ, ಉತ್ತಮ ಪೋಷಕಾಂಶಯುಕ್ತ ಆಹಾರ ಇವೆಲ್ಲವುಗಳ ಅಗತ್ಯವಿದೆ. ನಾವು ನಾಯಿಗಳಿಗೆ ಇದೆಲ್ಲ ಯಾಕೆ ಬೇಖು ಎಂಬಂತೆ ಅವುಗಳ ಬಗೆಗೆ ತಾತ್ಸಾರ ವಹಿಸುತ್ತೇವೆ. ಈ ನಿಟ್ಟಿನಲ್ಲಿ ನನ್ನದು ಇದೊಂದು ಪುಟ್ಟ ಹೆಜ್ಜೆ. ನೂರು ನಾಯಿಗಳು ನಾನು ಅಡುಗೆ ಮಾಡಿದ ಹಬ್ಬದೂಟವನ್ನು ಬಹಳ ಸಂಭ್ರಮದಿಂದ ತಿಂದವು. ಬಹಳ ಸಂತೃಪ್ತಿಯಿಂದ ತಿಂದು ಖುಷಿ ವ್ಯಕ್ತಪಡಿಸಿದವು. ನನಗೂ ತೃಪ್ತಿಯಾಯಿತು. ನನಗನಿಸುವ ಹಾಗೆ ಈ ನಾಯಿಗಳು ನನ್ನನ್ನು ಈ ಜನ್ಮದಲ್ಲಿ ಮರೆಯುವುದಿಲ್ಲ ಎಂದು ಈತ ಬರೆದುಕೊಂಡಿದ್ದಾನೆ.
ಈ ವಿಡಿಯೋಗೆ ಲಕ್ಷಗಟ್ಟಲೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದು ನಿಜವಾದ ಮಾನವೀಯತೆ. ಹಬ್ಬದೂಟ ನಮಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬೇಕು. ಅವಗಳೂ ಸಂಭ್ರಮ ಪಡಬೇಕು. ಇದು ನಿಮ್ಮ ಅತ್ಯುತ್ತಮ ಅಂತಃಕರಣದ ನಡೆ. ಇದು ನಮಗೆ ಅತ್ಯಂತ ಖುಷಿ ನೀಡಿದ ವಿಡಿಯೋ ಎಂದು ಕೆಲವರು ಈತನ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಕೆಲವು ನಾಯಿಪ್ರೇಮಿಗಳು, ನಿಜವಾಗಿಯೂ ಈ ವಿಡಿಯೋ ನೋಡಿ ಕಣ್ಣಿರು ಬಂತು. ಬಹಳ ಒಳ್ಳೆಯ ಕೆಲಸ ಎಂದಿದ್ದಾರೆ. ಇನ್ನೂ ಕೆಲವರು, ನೀವು ಇಂತಹ ಕೆಲಸ ಮಾಡಿದ್ದಕ್ಕಾಗಿ ನಿಮಗೆ ವಿಶೇಷ ಅಭಿನಂದನೆಗಳು, ನಮ್ಮ ಹೃದಯಾಂತರಾಳದಿಂದ ಎಂದು ಪ್ರತಿಕ್ರಿಯೆ ಬರೆದಿದ್ದಾರೆ.
ಇದನ್ನೂ ಓದಿ | Christmas Celebrations | ರಾಜ್ಯಾದ್ಯಂತ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ; ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ