ಹೈದರಾಬಾದ್: ತನ್ನ ಮದುವೆಗೆ ಒಂದು ತಿಂಗಳು ಮುನ್ನ, ಮುಖದ ನಗುವಿನ ಭಾವ ಹೆಚ್ಚಿಸಲೆಂದು ಕಾಸ್ಮೆಟಿಕ್ ಸರ್ಜರಿಗೆ (Cosmetic Surgery) ಹೋದ ವ್ಯಕ್ತಿಯೊಬ್ಬರು ಡೆಂಟಲ್ ಕ್ಲಿನಿಕ್‌ನಿಂದ ಶವವಾಗಿ ಮರಳಿದ್ದಾರೆ. ಈ ಘಟನೆ ಹೈದರಾಬಾದ್‌ನಲ್ಲಿ (viral news) ನಡೆದಿದೆ.
28 ವರ್ಷದ ಲಕ್ಷ್ಮೀನಾರಾಯಣ ವಿಂಜಮ್ ಮೃತಪಟ್ಟ ಭಾವಿ ವರ. ಫೆಬ್ರವರಿ 16ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ʼಸ್ಮೈಲ್ ಡಿಸೈನಿಂಗ್’ (smile enhancement) ಸರ್ಜರಿ ಪ್ರಕ್ರಿಯೆ ಒಳಗಾಗುತ್ತಿದ್ದಾಗ ಅವರು (cosmetic surgery gone wrong) ಮೃತಪಟ್ಟರು. ಲಕ್ಷ್ಮೀನಾರಾಯಣ ಅವರು ಮಿತಿಮೀರಿದ ಅರಿವಳಿಕೆ ನೀಡಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ವೇಳೆ ಮಗ ಪ್ರಜ್ಞೆ ತಪ್ಪಿದ ನಂತರ ಸಿಬ್ಬಂದಿ ಕರೆ ಮಾಡಿ ಕ್ಲಿನಿಕ್‌ಗೆ ಬರುವಂತೆ ಹೇಳಿದ್ದರು ಎಂದು ರಾಮುಲು ವಿಂಜಂ ತಿಳಿಸಿದ್ದಾರೆ. “ನಾವು ಮಗನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದೆವು. ಅಲ್ಲಿ ವೈದ್ಯರು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು” ಎಂದು ಅವರು ಹೇಳಿದರು. ಶಸ್ತ್ರ ಚಿಕಿತ್ಸೆ ಬಗ್ಗೆ ತಮ್ಮ ಮಗ ತಿಳಿಸಿರಲಿಲ್ಲ. ಅವನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನ ಸಾವಿಗೆ ವೈದ್ಯರೇ ಕಾರಣ ಎಂದು ವಿಂಜಮ್ ಹೇಳಿದ್ದಾರೆ.
ಫೆಬ್ರವರಿ 16ರಂದು ಮಧ್ಯಾಹ್ನ 2.30ರ ಸುಮಾರಿಗೆ ಲಕ್ಷ್ಮೀನಾರಾಯಣ ಕ್ಲಿನಿಕ್‌ಗೆ ಬಂದಿದ್ದರು. ಸಂಜೆ 4.30ರ ಸುಮಾರಿಗೆ ಅವರನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಸರ್ಜರಿ ಸುಮಾರು ಎರಡು ಗಂಟೆ ನಡೆಯಿತು. ಸಂಜೆ 7ರ ಸುಮಾರಿಗೆ ಅವರ ತಂದೆಗೆ ಕರೆ ಮಾಡಲಾಯಿತು. ಮತ್ತು ನಂತರ ಅವರನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ವಾರದ ಹಿಂದೆ ಲಕ್ಷ್ಮೀನಾರಾಯಣ ಅವರ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ತಿಂಗಳು ಮದುವೆಯಾಗಬೇಕಿತ್ತು. ಅವರ ಮನೆಯವರು ನೀಡಿದ ದೂರಿನ ಮೇರೆಗೆ, ಕ್ಲಿನಿಕ್ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಆಸ್ಪತ್ರೆಯ ದಾಖಲೆಗಳು ಮತ್ತು ಭದ್ರತಾ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ತಾನು ಭಾರತದಲ್ಲಿ ಹೆಚ್ಚು ಪ್ರಶಸ್ತಿ ಪಡೆದ ದಂತ ಚಿಕಿತ್ಸಾಲಯಗಳಲ್ಲಿ ಒಂದು; 2017ರಿಂದ 55ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಾವು ಪಡೆದಿದ್ದೇವೆ” ಎಂದು FMS ಇಂಟರ್‌ನ್ಯಾಶನಲ್ ಕ್ಲಿನಿಕ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಇದನ್ನೂ ಓದಿ: Dhruva Sarja: ವಿಮಾನ ದುರಂತ: ಕೂದಲೆಳೆ ಅಂತರದಿಂದ ಪಾರಾದ ಧ್ರುವ ಸರ್ಜಾ!