Site icon Vistara News

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

divorce

divorce

ಭೋಪಾಲ್‌: ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯ (Indore family court)ವು ಮಹತ್ವದ ತೀರ್ಪು ನೀಡಿ, ವಿಚ್ಛೇದನದ ಬಳಿಕ ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್‌ ಹೊಂದಿರುವ ಪತ್ನಿಗೆ ಆದೇಶಿಸಿದೆ (Viral news).

ʼʼಪತ್ನಿಯ ಒತ್ತಾಯದ ಮೇರೆಗೆ ಕಾಲೇಜು ತೊರೆದು ನಿರುದ್ಯೋಗಿಯಾಗಿದ್ದೆ. ಆದರೆ ತನ್ನ ಪತ್ನಿ ನಂದಿನಿ (22) ಇಂದೋರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆʼʼ ಎಂದು 23 ವರ್ಷದ ಅಮನ್ ಕುಮಾರ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ವಿಶೇಷ ತೀರ್ಪು ಪ್ರಕಟಿಸಿದೆ.

ಅಮನ್‌ ಪರ ವಾದ ಮಂಡಿಸಿದ ವಕೀಲ ಮನೀಷ್‌ ಝರೋಲಾ ಈ ಬಗ್ಗೆ ಮಾತನಾಡಿ, ʼʼನಾವು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೀವನಾಂಶವಲ್ಲದೆ ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನಂದಿನಿಗೆ ಸೂಚಿಸಿದೆʼʼ ಎಂದು ತಿಳಿಸಿದ್ದಾರೆ.

ʼʼಉಜ್ಜಯಿನಿ ಮೂಲದ ಅಮನ್‌ಗೆ ಸ್ನೇಹಿತರೊಬ್ಬರ ಮುಖಾಂತರ 2020ರಲ್ಲಿ ನಂದಿನಿಯ ಪರಿಚಯವಾಗಿತ್ತು. ಆ ಪರಿಚಯ ಬಳಿಕ ಸಲುಗೆಗೆ ತಿರುಗಿತ್ತು. ನಂತರ ನಂದಿನಿ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಅಮನ್‌ ಇದಕ್ಕೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕ‍್ಳಳುವುದಾಗಿ ನಂದಿನಿ ಬೆದರಿಕೆ ಒಡ್ಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅಮನ್‌ 2021ರ ಜುಲೈಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ನಂದಿನಿಯನ್ನು ವರಿಸಿದ್ದರು. ಬಳಿಕ ಅವರು ಇಂದೋರ್‌ನಲ್ಲಿ ಜೀವನ ಸಾಗಿಸಲು ಆರಂಭಿಸಿದ್ದರುʼʼ ಎಂದು ಮನೀಷ್‌ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ.

ʼʼಮದುವೆ ಬಳಿಕ ನಂದಿನಿಯ ಮನೆಯವರು ತೊಂದರೆ ಕೊಡಲಾರಂಭಿಸಿದರು. ಮಾತ್ರವಲ್ಲ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳ್ಳುವಂತೆ ಮಾಡಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಪೋಷಕರ ಮನೆಗೆ ಮರಳಿದೆ. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದೆವುʼʼ ಎಂದು ಅಮನ್‌ ತಿಳಿಸಿದ್ದಾರೆ.

ಅತ್ತ ಅಮನ್‌ ಪೋಷಕರ ಮನೆಗೆ ತೆರಳಿದಾಗ ನಂದಿನಿ ನಾಪತ್ತೆಯ ದೂರು ದಾಖಲಿಸಿದ್ದರು. ಇತ್ತ ಅಮನ್‌ ಉಜ್ಜಯಿನಿ ಪೊಲೀಸ್‌ ಠಾಣೆಗೆ, ನಂದಿನಿ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಜತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶವನ್ನು ಕೋರಿದ್ದರು. ಇದಕ್ಕೆ ಪ್ರತಿಯಾಗಿ 2021ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಂದಿನಿ ಅಮನ್‌ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದರು. 2023ರ ಡಿಸೆಂಬರ್‌ನಲ್ಲಿ ಅಮನ್‌ ಇಂದೋರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತನ್ನ ಮದುವೆಯನ್ನು ಅಸಿಂಧು ಎಂದು ಪರಿಗಣಿಸುವಂತೆ ಕೋರಿದ್ದರು. ಫೆಬ್ರವರಿ 21ರಂದು ನಡೆದ ವಿಚಾರಣೆಯ ಸಮಯದಲ್ಲಿ ನಂದಿನಿ ತಾನು ಅಮನ್ ಅವರೊಂದಿಗೆ ವಾಸಿಸಲು ಇಚ್ಛಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

ʼʼತಾನು ನಿರುದ್ಯೋಗಿ ಮತ್ತು ಅಮನ್‌ ಉದ್ಯೋಗದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ನಂದಿನಿ ಸುಳ್ಳು ಮಾಹಿತಿ ನೀಡಿದ್ದರು. ಅಲ್ಲದೆ ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿರುವುದನ್ನು ಗಮನಿಸಿ ನ್ಯಾಯಾಲಯ ನಂದಿನಿ ಅರ್ಜಿಯನ್ನು ತಳ್ಳಿ ಹಾಕಿದೆ. ಅಲ್ಲದೆ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆʼʼ ಎಂದು ಮನೀಷ್‌ ಹೇಳಿದ್ದಾರೆ.

ನಿಯಮ ಏನು ಹೇಳುತ್ತದೆ?

ಹಿಂದೂ ವಿವಾಹ ಕಾಯ್ದೆ 1955 (Hindu Marriage Act, 1955)ರ ಅಡಿಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಜೀವನಾಂಶವನ್ನು ಕೋರಬಹುದಾಗಿದೆ. ಜೀವನಾಂಶಕ್ಕಾಗಿ ಲಿಂಗ ಮತ್ತು ಧರ್ಮ ತಟಸ್ಥ ಏಕರೂಪದ ನಿಬಂಧನೆಯನ್ನು ಕೋರಿ 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version