ನವದೆಹಲಿ: ಕೆಲವೊಮ್ಮೆ ರಸ್ತೆ ಅಪಘಾತ ಯಾವಾಗ ಹೇಗೆ ಸಂಭವಿಸುತ್ತೆ ಎನ್ನುವುದನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಸದ್ಯ ಅಂತಹದ್ದೊಂದು ಭೀಕರ ರಸ್ತೆ ಅಪಘಾತವೊಂದರ ದೃಶ್ಯ ವೈರಲ್ ಆಗುತ್ತಿದೆ. ಉತ್ತಮ ಭವಿಷ್ಯದ ಕನಸು ಕಂಡು ಪರೀಕ್ಷೆ ಬರೆಯಲು ಹೊರಟಿದ್ದ ಮಕ್ಕಳ ಪೈಕಿ ಇಬ್ಬರ ಉಸಿರನ್ನೇ ಈ ಅಪಘಾತ ನಿಲ್ಲಿಸಿಬಿಟ್ಟಿದೆ. ದೆಹಲಿಯ ಉಪನಗರ ಗಾಜಿಯಾಬಾದ್ ಬಳಿಯ ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಶನಿವಾರ (ಮಾರ್ಚ್ 30) ನಡೆದ ಈ ಅಪಘಾತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).
ಎಕ್ಸ್‌ಪ್ರೆಸ್ ವೇಯಲ್ಲಿ ಸಾಗುತ್ತಿದ್ದ ಕಾರು ಆರಂಭದಲ್ಲಿ ಬಲಭಾಗದಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಬಳಿಕ ಒಂದೆರಡು ಬಾರಿ ತಿರುಗಿ ಮತ್ತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇನ್ನೊಂದು ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಬಳಿಕ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
Terrible accident on the Meerut-Delhi Expressway. Clearly the SUV driver’s fault. pic.twitter.com/5rJPxtEV62
— Sneha Mordani (@snehamordani) March 31, 2024
ಅಮ್ರೋಹಾ ಜಿಲ್ಲೆಯ ಹನ್ನೊಂದು ವಿದ್ಯಾರ್ಥಿಗಳು 6ನೇ ತರಗತಿಯ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗೆ ಹಾಜರಾಗಲು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ತೆರಳುತ್ತಿದ್ದಾಗ ಈ ಅವಘಢ ನಡೆದಿದೆ. “ಅಮ್ರೋಹಾದಿಂದ ದೆಹಲಿಗೆ 11 ಮಕ್ಕಳನ್ನು ಕರೆದೊಯ್ಯುತ್ತಿದ್ದ ಎರ್ಟಿಗಾ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯ ನಿವಾಸಿಗಳು 11 ಮಕ್ಕಳು ಮತ್ತು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಮತ್ತು ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆʼʼ ಎಂದು ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ ತಿಳಿಸಿದ್ದಾರೆ.
ಬೆಳಗ್ಗೆ 6.45ಕ್ಕೆ ಈ ಅಪಘಾತ ಸಂಭವಿಸಿದೆ. ಮೃತರನ್ನು ಎರ್ಟಿಗಾ ಕಾರು ಚಾಲಕ ಅನಾಸ್ (24) ಮತ್ತು ಇಬ್ಬರು ವಿದ್ಯಾರ್ಥಿಗಳಾದ ಉನೇಶ್ (12) ಮತ್ತು ಅಜಮ್ (13) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಎರಡು ಟ್ರಕ್‌ಗಳ ಚಾಲಕರು ಸ್ಥಳದಿಂದ ಪರಾರಿಯಾಗಿದ್ದು, ಈ ಪೈಕಿ ನಿಂತಿದ್ದ ಟ್ರಕ್‌ನ ಡ್ರೈವರ್ ಸದ್ದಾಂನನ್ನು ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ʼʼಟ್ರಕ್‌ನಲ್ಲಿ ಕಂಡು ಬಂದ ತಾಂತ್ರಿಕ ದೋಷದ ಕಾರಣದಿಂದ ರಸ್ತೆಯ ಮಧ್ಯೆ ನಿಲ್ಲಿಸಿದ್ದೆʼʼ ಎಂದು ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ʼʼತಜ್ಞರ ಸಹಾಯದಿಂದ ಟ್ರಕ್ ತಪಾಸಣೆ ನಡೆಸಲಿದ್ದು, ಸದ್ದಾಂ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ ಎನ್ನುವುದನ್ನು ಪರಿಶೀಲಿಸಲಾಗುವುದುʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Misbehaviour : ಮಹಿಳೆಯರನ್ನು ಚುಡಾಯಿಸಿದ ಕಾಮುಕನ ಹಿಗ್ಗಾಮುಗ್ಗಾ ಥಳಿಸಿದ ಜನರು
ಗಾಯಗೊಂಡ 10ರಿಂದ 12 ವರ್ಷದೊಳಗಿನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ʼʼಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಚಾಲಕ ಮಕ್ಕಳನ್ನು ಕರೆದುಕೊಂಡು ಹೊರಟಿದ್ದʼʼ ಎಂದು ವಿದ್ಯಾರ್ಥಿಯೊಬ್ಬನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಗೆ ಪರೀಕ್ಷೆ ನಿಗದಿಯಾಗಿತ್ತು. ʼʼಚಾಲಕ ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ