Site icon Vistara News

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Viral Video

ಚೆನ್ನೈ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ (Wayanad Landslide) ಸಾವಿನ ಸಂಖ್ಯೆ 360 ದಾಟಿದೆ. ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಹಗಲು-ರಾತ್ರಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸೇನೆ ಸೇರಿ ನೂರಾರು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯು ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಇನ್ನು, ಜನ ಕೂಡ ಮಾನವೀಯತೆಯಿಂದ ಪರಿಹಾರ ನಿಧಿಗೆ ಹಣ ಕಳುಹಿಸುತ್ತಿದ್ದಾರೆ. ಆ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇನ್ನು, ತಮಿಳುನಾಡಿನಲ್ಲಿ (Tamil Nadu) ಕೂಡ ಪ್ರವಾಹ ಉಂಟಾಗಿದ್ದು, ಹೀಗೆ ಪ್ರವಾಹದಲ್ಲಿ ಸಿಲುಕಿದ 7 ಶ್ವಾನಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ, ಮಾಂಸವನ್ನು ರವಾನಿಸುವ ಮೂಲಕ ಭದ್ರತಾ ಸಿಬ್ಬಂದಿಯು ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಮೆಟ್ಟೂರು ಡ್ಯಾಮ್‌ ಬಳಿಯ ಕಾವೇರಿ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದು, ಸಣ್ಣದೊಂದು ದ್ವೀಪ ಸೃಷ್ಟಿಯಾಗಿದೆ. ಈ ದ್ವೀಪದ ಪ್ರದೇಶದಲ್ಲಿ ಏಳು ನಾಯಿಗಳು ಉಳಿದುಕೊಂಡಿವೆ. ಇದು ಅಗ್ನಿಶಾಮಕ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿಯು ಡ್ರೋನ್‌ಗಳಿಗಾಗಿ ಜಿಯೋಟೆಕ್ನೋವ್ಯಾಲಿ ಎಂಬ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಜಿಯೋಟೆಕ್ನೋವ್ಯಾಲಿ ಕಂಪನಿಯಿಂದ ಸುಮಾರು 30 ಕೆ.ಜಿ ತೂಕದ ವಸ್ತುಗಳನ್ನು ಸಾಗಣೆ ಮಾಡುವ ಡ್ರೋನ್‌ ತರಿಸಿಕೊಂಡು, ಶ್ವಾನಗಳಿಗೆ ಮಾಂಸವನ್ನು ರವಾನಿಸಿದ್ದಾರೆ.

ಭಾರಿ ಮಳೆಯಿಂದಾಗಿ ಮೂರು ದಿನಗಳ ಹಿಂದೆ ಮೆಟ್ಟೂರು ಡ್ಯಾಮ್‌ನಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಕಾರಣ ಪ್ರವಾಹ ಉಂಟಾಗಿದೆ. ಹಾಗಾಗಿ, ನದಿಯ ಪಾತ್ರದಲ್ಲಿಯೇ ಏಳು ನಾಯಿಗಳು ಉಳಿದುಕೊಂಡಿವೆ. ಮೂರು ದಿನಗಳಿಂದ ನಾಯಿಗಳಿಗೆ ತಿನ್ನಲು ಏನೂ ಸಿಕ್ಕಿರಲಿಲ್ಲ. ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಒಂದು ನಾಯಿ ಮಾತ್ರ ಕಾಣಿಸಿದೆ. ಬಳಿಕ ಅವರು ಡ್ರೋನ್‌ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಿದಾಗ ಏಳು ನಾಯಿಗಳು ಇರುವುದು ಗೊತ್ತಾಗಿದೆ. ಆಗ, ಡ್ರೋನ್‌ ಮೂಲಕ ನಾಯಿಗಳಿಗೆ ಮಾಂಸ, ಬಿರಿಯಾನಿಯನ್ನು ರವಾನಿಸಲಾಗಿದೆ.

ನಾಯಿಗಳ ರಕ್ಷಣೆಗೂ ಪ್ಲಾನ್‌

ಅಗ್ನಿಶಾಮಕ ಸಿಬ್ಬಂದಿಯು ನಾಯಿಗಳನ್ನು ರಕ್ಷಣೆ ಮಾಡಲು ಕೂಡ ಪ್ಲಾನ್‌ ಮಾಡಿವೆ. ಭಾನುವಾರ (ಆಗಸ್ಟ್‌ 4) ಡ್ರೋನ್‌ಗಳ ಮೂಲಕ ನಾಯಿಗಳ ಇರುವಿಕೆ ಪತ್ತೆ ಹಚ್ಚಿ, ಅವುಗಳಿಗೆ ಇನ್ನಷ್ಟು ಆಹಾರ ರವಾನಿಸುವ ಸಿಬ್ಬಂದಿಯು, ಬಳಿಕ ಅವುಗಳನ್ನು ರಕ್ಷಿಸಲು ಯೋಜನೆ ರೂಪಿಸಿದ್ದಾರೆ. ನಾಯಿಗಳ ರಕ್ಷಣೆಗಾಗಿ ಪಂಜರವನ್ನು ಕಳುಹಿಸಲಾಗುತ್ತದೆ. ಪಂಜರಗಳಲ್ಲಿ ನಾಯಿಗಳು ಪ್ರವೇಶಿಸುತ್ತಲೇ, ಲಾಕ್‌ ಮಾಡಿಕೊಂಡು, ಅವುಗಳನ್ನು ಏರ್‌ಲಿಫ್ಟ್‌ ಮಾಡುವ ಯೋಜನೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಯ ಮಾನವೀಯತೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Exit mobile version