ಆಳ್ವರ್: ವಿವಾಹವಾದ ೫೪ ವರ್ಷಗಳ ಬಳಿಕ ಮೊದಲ ಬಾರಿಗೆ ಅಪ್ಪ-ಅಮ್ಮ ಎನಿಸಿಕೊಂಡಿರುವ ರಾಜಸ್ಥಾನದ ವೃದ್ಧ ದಂಪತಿ, ಐವಿಎಫ್ ತಂತ್ರಜ್ಞಾನದ ಮೂಲಕ ಈ ಸಂತಸವನ್ನು ಬರಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
೭೫ ವರ್ಷದ ಗೋಪಿ ಸಿಂಗ್ ಮತ್ತು ೭೦ ವರ್ಷದ ಚಂದ್ರಾವತಿ ಆಳ್ವರ್ ಜಿಲ್ಲೆಯ ಜುಂಜುನು ಸಮೀಪದ ಗ್ರಾಮಸ್ಥರು. ಹಲವಾರು ವರ್ಷಗಳಿಂದ ವೈದ್ಯರು, ಔಷಧಿ ಎಂದು ಸುತ್ತಿದರೂ ಮಡಿಲು ತುಂಬಿರಲಿಲ್ಲ. ʻಈಗ ಒಂದೂವರೆ ವರ್ಷಗಳ ಹಿಂದೆ ನಮ್ಮ ಐವಿಎಫ್ ಕೇಂದ್ರವನ್ನು ಗೋಪಿ ಸಿಂಗ್ ಸಂಪರ್ಕಿಸಿದರು. ಐವಿಎಫ್ ಚಿಕಿತ್ಸೆಯಿಂದ ಚಂದ್ರಾವತಿ ಗರ್ಭಿಣಿಯಾದರೂ, ಪ್ರಾಯ ಹೆಚ್ಚಾಗಿದ್ದರಿಂದ ಆತಂಕ ಇದ್ದೇ ಇತ್ತು. ಆದರೆ ೩.೫ ಕೆ.ಜಿ ತೂಕದ ಆರೋಗ್ಯವಂತ ಗಂಡು ಮಗು ಜನಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆʼ ಎಂದು ಡಾ. ಪಂಕಜ್ ಗುಪ್ತಾ ತಿಳಿಸಿದ್ದಾರೆ.
ಐವತ್ತು ವರ್ಷ ಮೇಲ್ಪಟ್ಟ ದಂಪತಿಗೆ ಐವಿಎಫ್ ಚಿಕಿತ್ಸೆ ನೀಡುವಂತಿಲ್ಲ ಎಂಬ ಬಗ್ಗೆ ಜೂನ್ ೨೦೨೨ರಲ್ಲಿ ಸಂಸತ್ತಿನಲ್ಲಿ ಕಾನೂನು ಜಾರಿಗೆ ಬಂದಿದೆ. ಆದರೆ ಈ ಕಾನೂನಿಗೂ ಮುನ್ನವೇ ಈ ದಂಪತಿಗೆ ಐವಿಎಫ್ ಚಿಕಿತ್ಸೆ ನೀಡಲಾಗಿತ್ತು. ಸೈನಿಕನಾಗಿದ್ದ ಗೋಪಿ ಸಿಂಗ್, ಬಾಂಗ್ಲಾ ಯುದ್ಧದಲ್ಲಿ ಪಾಲ್ಗೊಂಡವರು. ಚಂದ್ರಾವತಿ ಅವರಿಗೆ ಸಿಜೇರಿಯನ್ ಮಾಡಿದ ವೈದ್ಯೆ ಕರ್ನಲ್ ರೀನಾ ಯಾದವ್ ಸಹ ಸೇನೆಯಲ್ಲಿರುವವರು.
ಇದನ್ನೂ ಓದಿ: Young in mind | ದಾರ್ಜಿಲಿಂಗ್ ಬೆಟ್ಟಗಳಲ್ಲಿ 87 ವರ್ಷದ ಅಜ್ಜನ ಭರ್ಜರಿ ಮ್ಯಾರಥಾನ್