Site icon Vistara News

Endo the Blind | ಕಣ್ಣೇ ಕಾಣದ ಈ ಕುದುರೆಯ ಜೀವನವೇ ಒಂದು ಸ್ಫೂರ್ತಿ ಕತೆ!

endo

ʻಎಂಡೋ ದಿ ಬ್ಲೈಂಡ್‌ʼ!

ಇದ್ಯಾವುದೋ ಸಿನಿಮಾದ ಹೆಸರಲ್ಲ. ಕುದುರೆಯೊಂದಕ್ಕೆ ಇಡಲಾದ ಹೆಸರು. ಈ ಎಂಡೋ ಎಂಬ ಕುದುರೆಗೆ ಬಂದ ರೋಗ ಮೂನ್‌ ಬ್ಲೈಂಡ್‌ನೆಸ್‌! ಇದರಿಂದಾಗಿ ಎರಡೂ ಕಣ್ಣುಗಳನ್ನು ಕಳೆದುಕೊಂಡು ದೃಷ್ಠಿಹೀನವಾಗಿರುವ ಇದು ಈಗ ಅಭೂತಪೂರ್ವ ಸಾಧನೆ ಮಾಡಿದೆ. ಕಣ್ಣೇ ಕಾಣದಿದ್ದರೂ ಅತ್ಯಂತ ಎತ್ತರಕ್ಕೆ ಜಿಗಿಯುವ ಮೂಲಕ ಗಿನ್ನಿಸ್‌ ದಾಖಲೆ ಬರೆದಿದೆ. ಆ ಮೂಲಕ ಬದುಕುವ ಅದಮ್ಯ ಉತ್ಸಾಹ, ಜೀವನಪ್ರೀತಿಯ ಕತೆಯಾಗಿ ಪ್ರಾಣಿಯೊಂದರ ಬದುಕೂ ನಮಗೆ ಉದಾಹರಣೆಯಾಗಿ ನಿಲ್ಲುತ್ತದೆ.

ಕಣ್ಣು ಕಾಣದೆ ಜಿಗಿಯುವುದಾದರೂ ಹೇಗೆ? ಓಟ, ಸವಾರಿಗೆಂದೇ ಹೇಳಿ ಮಾಡಿಸಿದ ಕುದುರೆ ಕಣ್ಣಿಲ್ಲದೆಯೂ ನಾಗಾಲೋಟದಲ್ಲಿ ಓಡಿ ಜಿಗಿಯುವುದು ಹೇಗಿದ್ದೀತು ಎಂದು ಒಮ್ಮೆ ಯೋಚಿಸಿ. ಯುಎಸ್‌ನ ಒರೆಗಾಂನಲ್ಲಿ ತನ್ನ ಪ್ರೀತಿಯ ಒಡತಿಯ ಜೊತೆ ಸೇರಿ ಆಕೆಯ ಸಹಕಾರದಿಂದ ತನ್ನೆಲ್ಲ ತೊಂದರೆಗಳನ್ನೂ ಮೆಟ್ಟಿನಿಂತು ಬೆಳೆದಿರುವ ಈ ಕುದುರೆ ಯಶೋಗಾಥೆಯೇ ಒಂದು ಸ್ಪೂರ್ತಿಕತೆ.

೨೨ರ ಹರೆಯದ ಅಪ್ಪಲೂಸಾ ತಳಿಯ ಎಂಡೋ, ʻಎಂಡೋ ದಿ ಬ್ಲೈಂಡ್‌ʼ ಎಂದೇ ಖ್ಯಾತ ಪಡೆದಿದೆ. ಈ ಕುದುರೆ ತನ್ನ ಒಡತಿ ಮಾರ್ಗನ್ ವ್ಯಾಗ್ನರ್‌ ಜೊತೆ ಸೇರಿ ಭಾರೀ ಸಾಧನೆ ಮಾಡಿದ್ದು ಈಗ ವಿಶ್ವವಿಖ್ಯಾತ. ಅತ್ಯಂತ ಎತ್ತರಕ್ಕೆ ನೆಗೆದ ಅಂಧ ಕುದುರೆ (೩ ಅಡಿ ೫.೭೩ ಇಂಚು), ಒಂದು ನಿಮಿಷದಲ್ಲಿ ಅತ್ಯಂತ ಹೆಚ್ಚು ಬಾರಿ ನೆಗೆತ ಬದಲಾಯಿಸಿಕೊಂಡ ಅಂಧ ಕುದುರೆ (೩೯ ಬಾರಿ), ಹಾಗೂ ಐದು ಪೋಲ್‌ಗಳನ್ನು (ತಡೆಗಳನ್ನು) ಅತ್ಯಂತ ವೇಗವಾಗಿ ದಾಟಿದ ಅಂಧ ಕುದುರೆ ಎಂಬ ಮೂರು ದಾಖಲೆಗಳನ್ನು ಬರೆದಿದೆ.

ಈ ಕುದುರೆಯ ಒಡತಿ ವ್ಯಾಗ್ನರ್‌ ಹೇಳುವಂತೆ, ನಾನು ೧೩ನೇ ವಯಸ್ಸಿನಲ್ಲಿದ್ದಾಗ ಆಕೆಯ ಅಜ್ಜಿ ನಿನಗೆಂದೇ ಒಂದು ಕುದುರೆಯನ್ನು ಕೊಡುವುದಾಗಿ ಹೇಳಿದ್ದಳು. ನನ್ನದೇ ಕುದುರೆ ಬೇಕೆಂದು ನನಗೆ ಅತಿಯಾಗಿ ಅನಿಸುತ್ತಿತ್ತು. ನಾನು ಅಜ್ಜಿಯ ತೋಟದಲ್ಲಿ ಮೊದಲು ಎಂಡೋನನ್ನು ಭೇಟಿಯಾದೆ. ಆಗ ನಾವು ನಮ್ಮ ಕುಟುಂಬದ ಜೊತೆ ಕ್ಯಾಲಿಫೋರ್ನಿಯಾದಿಂದ ಒರೆಗಾಂಗೆ ನಿವಾಸ ಬದಲಾಯಿಸಿಕೊಂಡೆವು. ಆಗ ಅಜ್ಜಿ ಆಕೆಯ ಕುದುರೆಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದಳು. ನಾನು ಎಂಡೋ ಆಯ್ಕೆ ಮಾಡಿಕೊಂಡೆ. ಎಂಡೋಗೆ ಅವನದ್ದೇ ಆದ ಕಳೆ ಇತ್ತು. ಇತರ ಎಲ್ಲ ಕುದುರೆಗಳಿಗಿಂತಲೂ ಆತ ಸುಂದರವಾಗಿ ನನಗೆ ಕಾಣುತ್ತಿದ್ದ. ಹಾಗಾಗಿ ನನಗೆ ಎಂಡೋ ಎಲ್ಲರಿಂತ ಹೆಚ್ಚು ಇಷ್ಟವಾದ ಎಂದು ಅವನನ್ನು ಆಯ್ಕೆ ಮಾಡಿಕೊಂಡೆ ಎಂದಾಕೆ ಹೇಳಿದ್ದಾರೆ.

ಅಲ್ಲಿಂದ ನನ್ನ ಹಾಗೂ ಎಂಡೋನ ಗೆಳೆತನ ಆರಂಭವಾಯ್ತು. ನಾನು ಅವನ ಮೇಲೆ ಕುಳಿತು ಸವಾರಿ ಮಾಡಲು ಕಲಿಯುತ್ತಾ ಕಲಿಯುತ್ತಲೇ ನಮ್ಮಿಬ್ಬರ ಗೆಳೆತನ ಗಾಢವಾಯ್ತು. ಏನೇ ತೊಂದರೆ ಬಂದರೂ, ಎಷ್ಟೇ ಕಷ್ಟದ ಹಾದಿಯಿದ್ದರೂ ಎಂಡೋ ಧೃತಿಗೆಡುತ್ತಿರಲಿಲ್ಲ ಎಂದಾಕೆ ವಿವರಿಸುತ್ತಾರೆ.

ಹೀಗೆ ಒಂದು ದಿನ ಎಂಡೋನ ಕಣ್ಣುಗಳಲ್ಲಿ ಆಗಾಗ ನೀರು ಸುರಿಯುವುದನ್ನು ಗಮನಿಸಿದೆ. ಆತನಿಗಾಗ ಎಂಟು ವರ್ಷ ವಯಸ್ಸಾಗಿತ್ತು. ಹೀಗಾಗಿ ಆತನನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋದೆ. ಆಗ ಆತನಿಗೆ ಮೂನ್‌ ಬ್ಲೈಂಡ್‌ನೆಸ್‌ ಎಂಬ ಸಾಮಾನ್ಯ ಕಣ್ಣಿನ ತೊಂದರೆ ಇದೆ ಎಂದು ಅರ್ಥವಾಯ್ತು. ನನಗಾಗ ಇದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆಮೇಲೆ ವಿಷಯ ತಿಳಿಯುತ್ತಾ ಹೋಯಿತು. ಇದು ವಿಶ್ವದೆಲ್ಲೆಡೆ ಕುದುರೆಗಳ ಅಂಧತ್ವಕ್ಕೆ ವ್ಯಾಪಕವಾಗಿ ಕಾರಣವಾಗುತ್ತದೆ ಎಂದೂ ತಿಳಿಯಿತು. ದುರದೃಷ್ಟವಶಾತ್‌ ಎಂಡೋನ ಬಲಗಣ್ಣು ಆಗಲೇ ಹರಿದು ಹೋಗಿತ್ತು. ಹೀಗಾಗಿ ಅದನ್ನು ಬೇರೆ ವಿಧಿಯಿಲ್ಲದೆ ತೆಗೆಸಿದೆ. ಕೇವಲ ಎಡಗಣ್ಣು ಮಾತ್ರ ಕೆಲಸ ಮಾಡುತ್ತಿತ್ತು. ಅವನ ನೋವು ನನಗೆ ಅರ್ಥವಾಗುತ್ತಿತ್ತು. ಎಡಗಣ್ಣೂ ಕೂಡಾ ಆತನಿಗೆ ಬಹಳ ತೊಂದರೆ ಕೊಡಲು ಆರಂಭಿಸಿತ್ತು. ಕೊನೆಗೆ ಎಡಗಣ್ಣನ್ನೂ ತೆಗೆಸಬೇಕಾಯ್ತು ಎಂದಾಕೆ ಭಾವುಕವಾಗಿ ಹೇಳುತ್ತಾರೆ.

ಆದರೆ, ಇಲ್ಲಿಂದ ನಂತರ ಎಂಡೋನ ಹೊಸ ಪಯಣ ಆರಂಭವಾಯ್ತು. ಎರಡೂ ಕಣ್ಣಿಲ್ಲದೆ ಆತ ಜೀವಿಸಬೇಕಾಗಿತ್ತು. ಆತ ಮತ್ತೆ ತನ್ನ ಪಯಣವನ್ನು ಆರಂಭದಿಂದ ಮತ್ತೆ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಶುರು ಮಾಡಿದ. ಮೊದಲು ಎಂಡೋ ತುಂಬಾ ಹೆದರಿದ್ದ. ಒಂದು ಹೆಜ್ಜೆ ಇಡಲೂ ಅವನಿಗೆ ಭಯವಾಗುತ್ತಿತ್ತು ಆದರೆ ನಾನು ಆತನನನ್ನು ವಾಕ್‌ ಕರೆದುಕೊಂಡು ಹೋಗುವದರಿಂದ ಆರಂಭಿಸಿ ನಿಧಾನವಾಗಿ ಹೊಸ ಬದುಕಿಗೆ ಒಗ್ಗಿಕೊಳ್ಳಲು ಆರಂಭಿಸಿದ. ಆತನ ಜೊತೆಗೆ ಆತನ ಕುಟುಂಬವಾದ ನಾವೆಲ್ಲ ಇದ್ದೆವು. ಆತ ಮತ್ತೆ ನೆಗೆಯಲು ಕಲಿತ. ಶಿಸ್ತಿನಿಂದ ಎಲ್ಲವನ್ನೂ ಕಲಿತು ಮತ್ತೆ ಮೊದಲಿನಂತೆ ಆದ. ಆತನ ಈ ಹೊಸ ಪಯಣವೇ ಅದ್ಭುತ. ಏನೇ ತೊಂದರೆಯಿದ್ದರೂ ಅದನ್ನು ನಿವಾರಿಸುವುದನ್ನು ಕಲಿತ. ಯಾವುದೇ ಹೊಸ ಪರಿಸರವಾದರೂ, ಕಣ್ಣಿಲ್ಲದಿದ್ದರೂ ಇತರ ಇಂದ್ರಿಯಗಳ ಸಹಾಯದಿಂದಲೇ ಕಣ್ಣಿರುವ ಮಂದಿಯಂತೆಯೇ ನಡೆದಾಡಲು ಶುರು ಮಾಡಿದ. ಆತನ ಜೊತೆಗೆ ಸೇರಿ ನಾನೂ ಇತರ ಇಂದ್ರಿಯಗಳನ್ನು ಸಮರ್ಥವಾಗಿ ಎಲ್ಲೆಲ್ಲಿ ಹೇಗೆ ಬಳಸಬಹುದೆಂಬುದನ್ನು ಕಲಿಯಲು ಆರಂಭಿಸಿದೆ. ಹೀಗೆ ಕಣ್ಣಿಲ್ಲದೇ ನ್ಯಾಷನಲ್‌ ಚಾಂಪಿಯನ್‌ ಆದ ಅವನ ಕತೆಯೇ ಎಲ್ಲರಿಗೂ ಸ್ಪೂರ್ತಿ ಎಂದಾಕೆ ಹೇಳುತ್ತಾರೆ.

ಕಣ್ಣಿನ ತೊಂದರೆಯಿರುವ ಎಷ್ಟೋ ಕುದುರೆಗಳು ಪ್ರಪಂಚದಾದ್ಯಂತ ಹೀಗೆ ಕಷ್ಟದ ಜೀವನ ಸಾಗಿಸುತ್ತಿವೆ. ಅವುಗಳು ಮತ್ತೆ ಮೊದಲಿನಂತಾಗಲು, ಒಡೆಯನ ಸಹಕಾರ, ಪ್ರೀತಿ ಇದ್ದರೆ, ಖಂಡಿತಾ ಅವು ಮುಂದೆ ಬರಬಲ್ಲವು. ತಮ್ಮ ತೊಂದರೆಗಳನ್ನು, ಮಿತಿಗಳನ್ನು ಮೀರಿ, ಎಂಡೋನಂತೆ ಎಲ್ಲ ಕುದುರೆಗಳೂ ಬೆಳೆಯಲಿ. ಈ ಎಂಡೋನ ಕತೆ ಪ್ರಪಂಚದ ಎಲ್ಲ ಕುದುರೆ ಸಾಕುವ ಮಂದಿಗೆ ಸ್ಪೂರ್ತಿಯಾಗಲಿ. ಎಂಡೋನಂತೆ ಒಳ್ಳೆಯ ಬದುಕು ಅವುಗಳೂ ಪಡೆಯುವಂತಾಗಲಿ ಎಂದಾಕೆ ಹಾರೈಸಿದ್ದಾಳೆ.

Exit mobile version