ಲಖನೌ: ”ಎರಡು ಜಡೆಗಳು ಒಟ್ಟಿಗೆ ಸೇರಲ್ಲ” ಎಂಬ ಮಾತಿದೆ. ಇನ್ನು ಸರ್ಕಾರಿ ಬಸ್‌ಗಳು, ಅಕ್ಕಪಕ್ಕದ ಮನೆಗಳಲ್ಲಿ ಹೆಣ್ಣುಮಕ್ಕಳು ಬಡಿದಾಡಿಕೊಳ್ಳುವ, ಹಿಗ್ಗಾಮುಗ್ಗ ಬೈದು ಜಗಳವಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ವೈಷಮ್ಯ, ಜಗಳ, ಸುತ್ತಮುತ್ತಲಿನವರ ಬಗ್ಗೆ ಗಾಸಿಪ್ ಮಾಡುವ ಕಾರಣಕ್ಕಾಗಿಯೇ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ಚಾಲ್ತಿಗೆ ಬಂದಿರಬೇಕು. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿರುವ (Agra) ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿ ಮಧ್ಯೆ ಶಾಲೆಯಲ್ಲಿಯೇ ಮಾರಾಮಾರಿ ನಡೆದಿದೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹೌದು, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿಯು ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಿದ್ದಾರೆ. ಅಷ್ಟೇ ಅಲ್ಲ, ಪ್ರಾಂಶುಪಾಲೆಯು, ನಾನು ಯಾವುದಕ್ಕೂ ಏನು ಕಡಿಮೆ ಇಲ್ಲ ಎಂಬಂತೆ, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಶಿಕ್ಷಕಿಯೂ ರೊಚ್ಚಿಗೆದ್ದು, ಪ್ರಾಂಶುಪಾಲೆಯ ಬಟ್ಟೆ ಹಿಡಿದು ಎಳೆದಿದ್ದಾರೆ. ಇಬ್ಬರ ನಡುವಿನ ಈ ಜಂಗಿಕುಸ್ತಿಯು ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Kalesh b/w a female teacher and the school principal over coming late to school, Agra UP
— Ghar Ke Kalesh (@gharkekalesh) May 3, 2024
pic.twitter.com/RyfA6cSV1Z
ನಾನು ಇವಳನ್ನು ಬಿಡಲ್ಲ ಎಂಬ ರೀತಿ ಪ್ರಾಂಶುಪಾಲೆ ಮುನ್ನುಗ್ಗಿದರೆ, ಕುರ್ಚಿ ಮೇಲೆಯೇ ಕುಳಿತ ಶಿಕ್ಷಕಿಯು ತಿರುಗೇಟು ನೀಡಿದ್ದಾರೆ. ಇವರ ಸಹೋದ್ಯೋಗಿಗಳು ಎಷ್ಟು ಜಗಳ ಬಿಡಿಸಿದರೂ ಇಬ್ಬರ ನಟುವಿನ ಜಟಾಪಟಿ ಮಾತ್ರ ನಿಂತಿಲ್ಲ. ನಿಮ್ಮಿಬ್ಬರದ್ದು ಇದೇ ಆಯಿತು, ವಿಡಿಯೊ ಮಾಡಿ ಅಪ್‌ಲೋಡ್ ಮಾಡುತ್ತೇನೆ, ನಿಮ್ಮ ಘನತೆಗೆ ತಕ್ಕಂತೆ ನೀವು ವರ್ತಿಸುತ್ತಿಲ್ಲ ಎಂಬುದಾಗಿ ವಿಡಿಯೊ ಮಾಡುವವರು ಹೇಳಿದರೂ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯು ಪಟ್ಟಿಗೆ ಬಿದ್ದು ಜಗಳವಾಡಿದ್ದಾರೆ.
“ಶಾಲೆಯಲ್ಲಿ ಹೇಗೆ ವರ್ತಿಸಬೇಕು ಎಂಬುದೇ ಗೊತ್ತಿರದ ಇವರು, ಮಕ್ಕಳಿಗೆ ಯಾವ ಶಿಕ್ಷಣ ನೀಡುತ್ತಾರೆ? ಇಬ್ಬರನ್ನೂ ವಜಾಗೊಳಿಸಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಇಂತಹ ಶಿಕ್ಷಕರ ಕೈಯಲ್ಲಿ ಕಲಿತ ಮಕ್ಕಳು ಕೂಡ ಹಾಳಾಗುತ್ತಾರೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಮರುಕವಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ, ನೂರಾರು ಜನ ಪ್ರತಿಕ್ರಿಯಿಸಿ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇವರ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು, ನೋಟಿಸ್ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.
ಇದನ್ನೂ ಓದಿ: Asaduddin Owaisi: ಅಸಾದುದ್ದೀನ್ ಓವೈಸಿಯ ಭರ್ಜರಿ ಬೈಕ್ ರೈಡ್;ವಿಡಿಯೋ ವೈರಲ್