ಪಟನಾ: ಇದೊಂದು ನವಜಾತ ಶಿಶು. ಹುಟ್ಟಿ 40 ದಿನಗಳಷ್ಟೇ ಆಗಿದೆ. ಆದರೆ ಹೊಟ್ಟೆ ಉಬ್ಬರ ಮತ್ತು ಮೂತ್ರ ವಿಸರ್ಜನೆ ಸರಿಯಾಗಿ ಆಗದೆ ನರಳುತ್ತಿತ್ತು. ಆತಂಕಗೊಂಡ ಪಾಲಕರು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರೆ ಅಲ್ಲಿ ಮೊದಲು ವೈದ್ಯರಿಗೂ ಸಮಸ್ಯೆ ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ವಿವಿಧ ಮಾದರಿಯ ತಪಾಸಣೆಗಳು..ಪರೀಕ್ಷೆಗಳನ್ನೆಲ್ಲ ನಡೆಸಿದ ನಂತರ ವರದಿ ಬಂದಾಗ ಪಾಲಕರಷ್ಟೇ ಅಲ್ಲದೆ ವೈದ್ಯರೇ ಸ್ವತಃ ದಿಗಿಲುಗೊಂಡಿದ್ದರು. ಕಾರಣ ಈ 40 ದಿನಗಳ ಶಿಶುವಿನ ಹೊಟ್ಟೆಯಲ್ಲಿ ಒಂದು ಭ್ರೂಣ (Fetus found in infant) ಬೆಳೆಯುತ್ತಿತ್ತು..
ಹೀಗೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು ಬಿಹಾರದ ಮೋತಿಹಾರಿ ಎಂಬ ಜಿಲ್ಲೆಯಲ್ಲಿ. ರೆಹಮಾನಿಯಾ ಮೆಡಿಕಲ್ ಸೆಂಟರ್‌ನ ವೈದ್ಯರು ಶಿಶುವಿಗೆ ಸರ್ಜರಿ ಮಾಡಿ, ಅದರ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗೆದಿದ್ದಾರೆ. ಸದ್ಯ ಅದರ ಆರೋಗ್ಯ ಸ್ಥಿರವಾಗಿದೆ ಎಂದೂ ಆಸ್ಪತ್ರೆ ವೈದ್ಯ ತಬ್ರೇಜ್ ಅಜೀಜ್ ತಿಳಿಸಿದ್ದಾರೆ. ಹೀಗೆ ಮಗುವೊಂದರ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಬೆಳೆಯುವ ಸ್ಥಿತಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ fetus-in-fetu (ಫೀಟಸ್ ಇನ್ ಫೀಟು ಅಥವಾ ಭ್ರೂಣದಲ್ಲಿ-ಭ್ರೂಣ) ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಸಿಕಂದ್ರಾಬಾದ್‌ನಲ್ಲಿ ಭಾರಿ ಅಗ್ನಿ ಅವಘಡ: ಬಿಹಾರದ 11 ಕಾರ್ಮಿಕರು ಸಜೀವದಹನ
ಫೀಟಸ್ ಇನ್ ಫೀಟು ಅಂದ್ರೇನು?
ಮೊದಲನೇದಾಗಿ ಭ್ರೂಣದಲ್ಲಿ ಮತ್ತೊಂದು ಭ್ರೂಣ ಬೆಳೆಯುವ ಸ್ಥಿತಿ ತೀರ ಅಪರೂಪ. ಒಬ್ಬ ಮಹಿಳೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳು ಬೆಳೆಯುವ ಸಂದರ್ಭದಲ್ಲಿ ಹೀಗಾಗುತ್ತದೆ. ಅವಳಿಗಳೆಂದರೆ ಎರಡೂ ಭ್ರೂಣಗಳು ಪ್ರತ್ಯೇಕವಾಗಿಯೇ ಬೆಳೆಯಬೇಕು. ಆದರೆ ಅಪರೂಪಕ್ಕೆಂಬಂತೆ ಒಂದರ ಒಳಗೊಂದು ಬೆಳೆದುಬಿಡುತ್ತವೆ. ಅಂದಹಾಗೇ ಇಂಥ ಸನ್ನಿವೇಶವನ್ನು 5 ಲಕ್ಷದಲ್ಲಿ ಒಬ್ಬ ಮಹಿಳೆ ಎದುರಿಸುತ್ತಾಳೆ. ಹಾಗೇ, ಅತ್ಯಂತ ಕಡಿಮೆ ವೈದ್ಯರು ಇದರ ಸರ್ಜರಿ ಮಾಡಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಸೂಕ್ಷ್ಮವಾಗಿ ಮಾಡಬೇಕಾಗುತ್ತದೆ ಎಂದೂ ಡಾ. ತಬ್ರೇಜ್ ಅಜೀಜ್ ಹೇಳಿದ್ದಾರೆ.
ಹಾಂಗ್‌ಕಾಂಗ್‌ನಲ್ಲಿ ಹೀಗಾಗಿತ್ತು !
ಭ್ರೂಣದೊಳಗೊಂದು ಭ್ರೂಣ ಬೆಳೆಯುವುದು ಜಾಗತಿಕವಾಗಿಯೇ ಅತ್ಯಂತ ವಿರಳ. 5 ವರ್ಷಗಳ ಹಿಂದೆ ಚೀನಾದ ಹಾಂಗ್‌ಕಾಂಗ್‌ನಲ್ಲಿ ನವಜಾತ ಶಿಶುವೊಂದರ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿತ್ತು. ಅದಾದ ಬಳಿಕ 2019ರಲ್ಲಿ ಇಸ್ರೇಲ್ ಮಹಿಳೆಯೊಬ್ಬಳು ಇದೇ ಸವಾಲು ಎದುರಿಸಿದ್ದಳು. ಆಕೆಯ ಪುಟ್ಟ ಮಗುವಿನ ಹೊಟ್ಟೆಯಲ್ಲೇ ಬೆಳೆದಿತ್ತು ಅವಳಿ ಭ್ರೂಣ. ಇವೆರಡೂ ಶಿಶುಗಳಿಗೆ ಸರ್ಜರಿ ಮಾಡಿಯೇ, ಅದನ್ನು ತೆಗೆಯಲಾಗಿತ್ತು.
ಇದನ್ನೂ ಓದಿ: ಬಿಹಾರದಲ್ಲೊಂದು KGF !: ಅನ್ವೇಷಣೆ ಮಾಡಲು ಸರ್ಕಾರ ಅನುಮತಿ