ನ್ಯೂಜೆರ್ಸಿ: ಮಳೆ ಬಂದಾಗ ವಿದ್ಯುತ್ ತಂತಿ ಮೇಲೆ ಮರ ಬಿದ್ದೋ ಅಥವಾ ಕಂಬವೇ ಮುರಿದುಬಿದ್ದೋ ವಿದ್ಯುತ್ ಕಡಿತವಾಗುವುದನ್ನು ಕೇಳಿರುತ್ತೀರಿ. ಆದರೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ಮೀನೊಂದರಿಂದಾಗಿ ಪೂರ್ತಿ ಏರಿಯಾಕ್ಕೆ ವಿದ್ಯುತ್ ಕಡಿತವಾಗುವಂತೆ ಆಗಿದೆ. ಅದಕ್ಕೆಲ್ಲ ಕಾರಣವಾಗಿದ್ದ ʼಇನ್ನೊಬ್ಬ ಆರೋಪಿʼಯಾದ ಹಕ್ಕಿಗೆ ಈಗ ಎಲ್ಲೆಡೆ ಹುಡುಕಾಟ ನಡೆಯುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್ (Viral News) ಆಗಿದೆ. ನೀರಿನಲ್ಲಿರುವ ಮೀನು ಕರೆಂಟನ್ನು ಹೇಗೆ ಕಟ್ ಮಾಡಿತು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹೌದು. ಇದು ಸತ್ಯವೇ. ಹಕ್ಕಿಯೊಂದು ನೀರಿನಿಂದ ಮೀನನ್ನು ಬೇಟೆಯಾಡಿ ಎತ್ತುಕೊಂಡು ಹಾರಿದೆ. ಹಾಗೆ ಹಾರುತ್ತಿದ್ದ ಹಕ್ಕಿ ಅಕಸ್ಮಾತ್ ಆಗಿ ಆ ಮೀನನ್ನು ಒಂದು ಸ್ಥಳದಲ್ಲಿ ಬೀಳಿಸಿದೆ. ಆ ಮೀನು ಸೀದಾ ಹೋಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಆಗ ಬೆಂಕಿ ಬಿದ್ದಿದೆ. ಇದರಿಂದಾಗಿ ಆ ಇಡೀ ಏರಿಯಾಕ್ಕೆ ವಿದ್ಯುತ್ ಕಡಿತಗೊಂಡಿದೆ. ಏನಾಗಿದೆ ಎಂದು ಪರಿಶೀಲಿಸಿ ಅದನ್ನು ಸರಿ ಮಾಡಲು ಬಂದ ಸಿಬ್ಬಂದಿಗೆ ಟ್ರಾನ್ಸ್‌ಫಾರ್ಮರ್ ಮೇಲೆ ಮೀನು ಬಿದ್ದಿರುವುದು ಗೊತ್ತಾಗಿದೆ.
ಇದನ್ನೂ ಓದಿ: Viral News : ಬೆತ್ತಲೆ ತೋರಿಸುವ ʼಮ್ಯಾಜಿಕ್ ಕನ್ನಡಿʼಗಾಗಿ 9 ಲಕ್ಷ ರೂ. ಕಳೆದುಕೊಂಡ ಕಿಲಾಡಿ ಮುದುಕ!
ಈ ವಿಚಾರವನ್ನು ಪೊಲೀಸ್ ಇಲಾಖೆಯು ಬಹಳ ವಿಶೇಷವಾಗಿ, ಸ್ವಾರಸ್ಯಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. “ಇಂದು ಆದ ವಿದ್ಯುತ್ ಕಡಿತ ನಮ್ಮಲ್ಲಿ ವಾಸಿಸುವ ಅನೇಕ ಜನರಿಗೆ ತೊಂದರೆಯುಂಟು ಮಾಡಿದೆ. ಈ ರೀತಿ ಪರಿಜ್ಞಾನವಿಲ್ಲದೆ ಈ ಕೃತ್ಯ ಮಾಡಿರುವ ಆ ಆರೋಪಿಯನ್ನು ಯಾರೂ ಮರೆಯಬೇಡಿ. ಗಿಲ್ಲಿಯನ್ (ಸತ್ತ ಮೀನು) ಕಷ್ಟಪಟ್ಟು ದುಡಿಯುತ್ತಿದ್ದ ಫ್ಯಾಮಿಲಿ ಮ್ಯಾನ್ ಆಗಿದ್ದ. ಸಾವಿರಾರು ಮಕ್ಕಳಿಗೆ ಆತ ತಂದೆಯಾಗಿದ್ದ. ಆರೋಪಿಯು ದಕ್ಷಿಣದ ಕಡೆಗೆ ಹಾರಿ ಹೋಗಿರುವುದು ಕಂಡುಬಂದಿದೆ. ಆರೋಪಿ ಬಳಿ ಯಾವುದೇ ಶಸ್ತ್ರಾಸ್ತ್ರ ಇಲ್ಲವಾದರೂ ಆತ ಬಹಳ ಅಪಾಯಕಾರಿಯಾಗಿ ಕಂಡುಬಂದಿದ್ದಾನೆ. ಅವನು ಕಂಡರೆ ಆತನನ್ನು ಹಿಡಿಯುವುದಕ್ಕೆ ಹೋಗಬೇಡಿ. ಒಂದು ವೇಳೆ ಈ ಪ್ರಕರಣದ ಬಗ್ಗೆ ನಿಮಗೆ ಏನೇ ವಿಚಾರ ಗೊತ್ತಿದ್ದರೆ ಡೆಟ್. ಜಾನ್ ಸಿಲ್ವರ್ ಅವರನ್ನು ಸಂಪರ್ಕಿಸಿ. ಅವರೇ ನಮ್ಮ ಎಲ್ಲ ಮೀನುಗಳ ಪ್ರಕರಣವನ್ನು ನಿಭಾಯಿಸುತ್ತಾರೆ” ಎಂದು ಹಾಸ್ಯಮಯ ರೀತಿಯಲ್ಲಿ ವಿಚಾರವನ್ನು ಪೊಲೀಸರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆಗಸ್ಟ್ 13ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 700ಕ್ಕೂ ಅಧಿಕ ಮಂದಿಯಿಂದ ಲೈಕ್ ಪಡೆದುಕೊಂಡಿದೆ. ನೂರಾರು ಮಂದಿ ಈ ಪೋಸ್ಟ್‌ಗೆ ಕಮೆಂಟ್‌ಗಳನ್ನು ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲಾರಂಭಿಸಿದ್ದಾರೆ.
ಇದನ್ನೂ ಓದಿ: Viral News : ಮದುವೆಯಾದ ದಿನದಂದೇ ಮುರಿದುಬಿತ್ತು ದಾಂಪತ್ಯ! ಅದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಕೇಕ್!
“ಪೊಲೀಸರಿಗೆ ಧನ್ಯವಾದಗಳು. ಇಷ್ಟೊಂದು ವಿಶೇಷವಾಗಿ ವಿಚಾರವನ್ನು ಹಂಚಿಕೊಂಡಿದ್ದಕ್ಕೆ. ಈ ಪೋಸ್ಟ್ ನೋಡಿದ ಮೇಲೆ ಈ ದಿನ ಪೂರ್ತಿ ಸಂತಸವಾಗಿರಬಹುದು”, “ಈ ಪೇಜ್‌ನಲ್ಲಿ ಹಾಸ್ಯಗಾರರು ಮರಳಿದ್ದಾರೆ ಎನ್ನುವ ವಿಚಾರ ಸಂತಸ ತಂದಿದೆ. ಇದೇ ರೀತಿ ಪೋಸ್ಟ್‌ಗಳು ಬರುತ್ತಿರಲಿ”, “ಈ ವಿಚಾರಗಳಿಂದಾಗಿ ನಮ್ಮ ಪೊಲೀಸ್ ಇಲಾಖೆಯೆಂದರೆ ನಮಗೆ ಪ್ರೀತಿ”, “ಈಗಿನ ಕಾಲದಲ್ಲಿ ಸುದ್ದಿಯನ್ನು ಇಷ್ಟು ಚಂದವಾಗಿ ಹೇಳಬಹುದು ಎನ್ನುವುದನ್ನು ಈ ಪೋಸ್ಟ್ ನೋಡಿದ ಮೇಲೆ ತಿಳಿದುಕೊಂಡೆ”, “ನಮ್ಮನ್ನು ನಗಿಸಿದ್ದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದಗಳು. ವಿದ್ಯುತ್ ಕಡಿತದಿಂದ ತೊಂದರೆಯಾದವರಿಗೆ ಕ್ಷಮೆಯಿರಲಿ” ಎನ್ನುವಂತಹ ಕಾಮೆಂಟ್‌ಗಳು ಈ ಪೋಸ್ಟ್‌ಗೆ ಬಂದಿವೆ.