ಈ ಸುದ್ದಿ ಕೇಳಿದರೆ ನೀವು ಹೀಗೂ ಉಂಟೇ ಎಂದು ಹುಬ್ಬೇರಿಸಬಹುದು. ಇಲ್ಲೊಬ್ಬ ಮಹಿಳೆ ಆಲೂಗಡ್ಡೆಯೊಂದು ಮನುಷ್ಯ ಮುಖದಂತೆ ಕಾಣಿಸುತ್ತದೆ ಎಂಬ ಒಂದೇ ಕಾರಣಕ್ಕೆ ಅದನ್ನು ಅಡುಗೆ ಮಾಡಿ ತಿನ್ನಲು ಸರಿಯೆನಿಸದೆ ಐದು ವರ್ಷಗಳ ಕಾಲ ಪ್ರೀತಿಯಿಂದ ಫ್ರೀಜರ್‌ನಲ್ಲಿರಿಸಿ ಸಂರಕ್ಷಿಸಿಟ್ಟಿದ್ದಾರೆ!
ಹೌದು. ಎಷ್ಟೋ ಬಾರಿ ತರಕಾರಿಗಳು ಮನುಷ್ಯ ಮುಖವನ್ನೋ, ಪ್ರಾಣಿಯ ಮುಖವನ್ನೋ ಹೋಲುವುದು ಪ್ರಕೃತಿಯಲ್ಲಿ ಅಪರೂಪಕ್ಕೆಂಬಂತೆ ಸಂಭವಿಸುತ್ತಿರುತ್ತದೆ. ಹಸುವಿನ ಮುಖದಂತಿರುವ ಟೊಮೇಟೋ ಹಣ್ಣು, ಗಣೇಶನಂತೆ ಸೊಂಡಿಲು ಬಿಟ್ಟುಕೊಂಡಿರುವ ಹಲಸಿನಕಾಯಿ, ನೆಲ್ಲಿಕಾಯಿ ಗಾತ್ರದ ತೆಂಗಿನಕಾಯಿ, ಮನುಷ್ಯನಷ್ಟೆತ್ತರದ ಬಾಳೆಗೊನೆ, ಕೋತಿಯ ಮುಖದಂತಿರುವ ಪಪ್ಪಾಯಿ ಹಣ್ಣು… ಹೀಗೆ ವಿಚಿತ್ರ ಆಕಾರ ವಿಕಾರಗಳು ಆಗಾಗ ನಮ್ಮ ಸುತ್ತಮುತ್ತ ಕಾಣುತ್ತಿರುತ್ತೇವೆ. ಇಂತಹವು ಸಿಕ್ಕರೆ ಒಮ್ಮೆ ಅವುಗಳ ಫೋಟೋ ಕ್ಲಿಕ್ಕಿಸಿಕೊಂಡು, ಹೆಚ್ಚೆಂದರೆ ನೆಂಟರಿಷ್ಟರ ಅಥವಾ ಗೆಳೆಯರ ಬಳಿ ಚಿತ್ರ ಹಂಚಿಕೊಂಡು ಸುಮ್ಮನಾಗಿ ತಿಂದು ಮುಗಿಸುತ್ತೇವೆ.
ಆದರೆ, ಯುಎಸ್‌ನ ಕೊಲೊರಾಡೋ ನಿವಾಸಿ ಲೋರಿ ಬ್ರಿಕ್ಸ್ ಎಂಬಾಕೆಗೆ 2017ರಲ್ಲಿ ಕಣ್ಣು ಮೂಗು ಹಾಗೂ ಚೆಂದಕ್ಕೆ ನಗುತ್ತಿರುವ ಭಾವದ ಬಾಯಿಯಿರುವ ಆಲೂಗಡ್ಡೆ ಆಗಷ್ಟೇ ಸೂಪರ್ ಮಾರ್ಕಟಿನಿಂದ ಕೊಂಡುತಂದ ಅಲೂಗಡ್ಡೆ ರಾಶಿಯೆಡೆಯಲ್ಲಿ ಸಿಕ್ಕಿದೆ. ಅಡುಗೆ ಮಾಡಲೆಂದು ಚೀಲದಿಂದ ಹೊರತೆಗೆದು ಯಥಾಪ್ರಕಾರ ತೊಳೆಯಲು ಹೊರಟಾಗ, ನಮ್ಮನಿಮ್ಮಂತೆ ಕಣ್ಣು ಬಾಯಿ ಮೂಗುಗಳ ಆಕಾರದಂತಿದ್ದ ಮುದ್ದಾಗಿ ನಗುತ್ತಿದ್ದ ಆಲೂಗಡ್ಡೆ ಕಂಡು ಆಶ್ಚರ್ಯಚಕಿತಳಾಗಿ ಕಣ್ಣು ಬಾಯಿ ಬಿಟ್ಟು ನೋಡಿದ್ದೂ ಅಲ್ಲದೆ, ಅದನ್ನು ಅಡುಗೆ ಮಾಡಿ ಮುಗಿಸಲು ಮನಸ್ಸಾಗದೆ ಫ್ರೀಜರ್‌ನಲ್ಲಿಟ್ಟಿದ್ದಾರೆ. ಈ ಆಲೂಗಡ್ಡೆಯ ಮೇಲೆ ಎರಡು ಕಣ್ಣುಗಳು, ಒಂದು ಚಿಕ್ಕ ಮೂಗು ಹಾಗೂ ಚೆಂದಕ್ಕೆ ನಗುವ ಇಮೋಜಿಯಲ್ಲಿರುವಂಥ ಬಾಯಿಯೂ ಸ್ಪಷ್ಟವಾಗಿ ಕಾಣುತ್ತಿದ್ದು, ನೋಡಿದ ತಕ್ಷಣ ಮುದ್ದಾಗಿ ಪ್ರೀತಿ ಉಕ್ಕುವಂತಿತ್ತು. ಹಾಗಾಗಿ ಅಡುಗೆ ಮಾಡಲು ಮನಸ್ಸಾಗದೆ, ಹಾಗೆಯೇ ತಮ್ಮ ಜೊತೆ ಇಟ್ಟುಕೊಂಡಿದ್ದಾರೆ.
ಪ್ರತಿದಿನವೂ ಫ್ರೀಜರ್‌ನೊಳಗೆ ತಣ್ಣಗೆ ಕೂತ ಆಲೂಗಡ್ಡೆಯನ್ನು ನೋಡುತ್ತಾ ನೋಡುತ್ತಾ ಲೋರಿ ಹಾಗೂ ಮೈಕೆಲ್ ದಂಪತಿಗಳು ಆಲೂಗಡ್ಡೆಯ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡು, ಅದಕ್ಕೊಂದು ಹೆಸರನ್ನೂ ಇಟ್ಟಿದ್ದಾರೆ. ಪೀಟ್ ಎಂದು ನಾಮಕರಣವಾದ ಈ ಆಲೂಗಡ್ಡೆಯ ಕಥೆ ಇಲ್ಲಿಗೇ ಮುಗಿದಿಲ್ಲ. ಲೋರಿ ದಂಪತಿಗಳು ಈ ಪೀಟ್ ಜೊತೆಗೆ ಫೋಟೋಶೂಟ್ ಕೂಡಾ ಮಾಡಿಕೊಂಡಿದ್ದಾರೆ.
ತಣ್ಣಗೆ ಫ್ರೀಜರ್‌ನಲ್ಲಿ ಐದು ವರ್ಷ ಕೂತ ಈ ಪೀಟ್ ಆಲೂಗಡ್ಡೆಗೆ ಇತ್ತೀಚೆಗೆ ಎರಡು ಪುಟಾಣಿ ʻಮೊಳಕೆʼ ಕಾಲುಗಳೂ ಹುಟ್ಟಿವೆ. ಫ್ರೀಜರ್‌ನಿಂದ ಹೊರತೆಗೆದು ಐದು ವರ್ಷದ ಸಂಭ್ರಮದಲ್ಲಿ ಮೊಳಕೆ ಬಂದ ಕಾಲುಗಳೂ ಇರುವ ಪೀಟ್‌ನೊಂದಿಗೆ ಮತ್ತೆ ಫೋಟೋಶೂಟ್ ಮಾಡಿಕೊಂಡು ಮತ್ತೆ ಫ್ರೀಜರ್‌ನೊಳಗೆ ಭದ್ರಪಡಿಸಿದ್ದಾರೆ ಲೋರಿ ದಂಪತಿಗಳು.
ಇದನ್ನೂ ಓದಿ: ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್ ವಿಡಿಯೋ ನೋಡಿ
ಅಂದಹಾಗೆ, ಈ ದಂಪತಿಗಳಿಬ್ಬರಿಗೂ ಈಗ ಪೀಟ್ ಜೊತೆಗೆ ಬಿಡಿಸಲಾಗದ ಬಂಧ. ಮತ್ತೆ ಮಣ್ಣು ಸೇರಿಸಲು ಮನಸಿಲ್ಲ. ಅಡುಗೆ ಮಾಡಿ ತಿಂದು ತೇಗಲೂ ಮನಸಿಲ್ಲ. ಸದ್ಯಕ್ಕೆ ಲೋರಿ ಅವರಿಗೆ ಪೀಟ್‌ನನ್ನು ಇನ್ನೂ ಐದು ವರ್ಷ ಫ್ರೀಜರ್‌ನೊಳಗಿಟ್ಟು ಆಮೇಲೆ ಹೊರತೆಗೆದು ಮತ್ತೊಂದು ಫೋಟೋಶೂಟ್ ಮಾಡಿಸಿಕೊಂಡು ದಶಮಾನೋತ್ಸವದ ಸಂಭ್ರಮಾಚರಣೆ ಮಾಡಿಕೊಳ್ಳುವ ಇರಾದೆಯಿದೆಯಂತೆ!
ಲೋರಿ ಹೇಳುವ ಪ್ರಕಾರ, ಅದ್ಯಾಕೋ ಗೊತ್ತಿಲ್ಲ, ಚೀಲದಿಂದ ಅಲೂಗಡ್ಡೆ ಹೊರತೆಗೆದ ತಕ್ಷಣ ಅದು ಮನುಷ್ಯ ಮುಖದಂತೆ ಕಂಡು ನಗು ಬಂತು. ಅದರ ಮುದ್ದು ಮುಖ ಎಷ್ಟು ಇಷ್ಟವಾಯಿತೆಂದರೆ, ನಾನು ಆ ಇಡೀ ದಿನ ಅದನ್ನು ಕೈಲಿ ಹಿಡಿದು ಬಿದ್ದು ಬಿದ್ದು ನಕ್ಕಿದ್ದೇನೆ. ಆ ಆಲೂಗಡ್ಡೆ ನೋಡಿದರೆ ಯಾರ ಮುಖದಲ್ಲಾದರೂ ಖಂಡಿತ ನಗು ಹೊಮ್ಮದೆ ಇರದು. ಖುಷಿ ಹಂಚಿದ ಆ ಆಲೂಗಡ್ಡೆಯನ್ನು ಇಟ್ಟುಕೊಳ್ಳುವ ಮನಸ್ಸಾಯಿತು. ಮುದ್ದಾಗಿ ಪೀಟ್ ಎಂದು ಹೆಸರಿಡುವ ಅನಿಸಿತು. ಈಗ ಐದು ವರ್ಷವಾಗಿದೆ. ಪುಟಾಣಿ ಕಾಲು ಕೂಡಾ ಬಂದು ಇನ್ನಷ್ಟು ಮುದ್ದಾಗಿದ್ದಾನೆ. ಇನ್ನೂ ಐದು ವರ್ಷ ಬಿಟ್ಟು ಪೀಟ್ ಜೊತೆಗೆ ಮತ್ತೊಂದು ಫೋಟೋಶೂಟ್ ಮಾಡಿಕೊಳ್ಳುವೆ ಎಂದು ಆಕೆ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎಷ್ಟೋ ಮಂದಿ, ಇದು ವಿಚಿತ್ರವಾದರೂ ಖುಷಿ ಹಂಚುವ ಪೋಸ್ಟ್ ಎಂದು ಆಕೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಸೈಕಲ್ ಓಡಿಸುತ್ತಿದ್ದ ಗೋರಿಲ್ಲಾ ಕೆಳಗೆ ಬಿದ್ದ ಬಳಿಕ ಮಾಡಿದ್ದೇನು?-ನಗು ತರಿಸುವ ವಿಡಿಯೋ ವೈರಲ್