Site icon Vistara News

Google Map: ಗೂಗಲ್‌ ಮ್ಯಾಪ್‌ ನಂಬಿ ಹೊರಟವರಿಗೆ ಕಾದಿತ್ತು ಬಿಗ್‌ ಶಾಕ್‌; 11ಗಂಟೆ ದಟ್ಟ ಕಾಡಿನಲ್ಲೇ ಸಿಲುಕಿದ ವಿದ್ಯಾರ್ಥಿಗಳು

Google Map

ಭುವನೇಶ್ವರ: ಇತ್ತೀಚೆಗೆ ಗೂಗಲ್‌ ಮ್ಯಾಪ್‌ ದಾರಿ ತೋರಿಸುವುದಕ್ಕಿಂತ ದಾರಿ ತಪ್ಪಿಸುವ ಘಟನೆಗಳೇ ಹೆಚ್ಚಾಗಿ ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಹೋಗಲು ಗೂಗಲ್ ಮ್ಯಾಪ್ (Google Map) ಬಳಸಿ ದಾರಿ ಹುಡುಕುತ್ತಾ ಹೋದ ಯುವಕರಿಬ್ಬರು ತಮ್ಮ ಕಾರನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಇಳಿಸಿದ ಘಟನೆ ಕೇರಳದಲ್ಲಿ ನಡೆದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದ್ದು, ಗೂಗಲ್‌ ಮ್ಯಾಪ್‌ ಯುವಕರಿಗೆ ದುಃಸ್ವಪ್ನವಾಗಿ ಕಾಡಿದೆ. ಗೂಗಲ್‌ ಮ್ಯಾಪ್‌ ಸೂಚನೆಯಂತೆ ಹೊರಟ ಐವರು ಸ್ನೇಹಿತರು ದಟ್ಟ ಕಾಡಿನ ನಡುವೆ ಸಿಲುಕಿದ್ದು, ಬರೋಬ್ಬರಿ 11ಗಂಟೆಗಳ ಬಳಿಕ ಪಾರಾಗಿದ್ದಾರೆ.

ಏನಿದು ಘಟನೆ?

ಒಡಿಶಾದ ಧೆಂಕನಲ್‌ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಕಟ್ಟಕ್‌ ಕಾಲೇಜಿ ವಿದ್ಯಾರ್ಥಿಗಳಾದ ಸುಜಿತ್ಯಾ ಸಾಹು, ಪ್ರಕಾಶ್‌ ಮೊಹಂಟಿ, ಸುಭನ್‌ ಮೊಹಪತ್ರ, ಹಿಮಾಂಶು ದಾಸ್‌ ಮತ್ತು ಆರಕ್ಷಿತಾ ಮೊಹಪತ್ರ ತಮ್ಮ ತಮ್ಮ ಬೈಕಿನಲ್ಲಿ ಸಪ್ತಸಜ್ಯ ದೇವಸ್ಥಾನಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದರು. ಜೂ.30ರಂದು ಬೆಳಗ್ಗೆ 11 ಗಂಟೆಗೆ ದೇಗುಲಕ್ಕೆ ತಲುಪಿದ್ದರು. ಬಳಿಕ ಅಲ್ಲಿಂದ ಎತ್ತರದ ಗುಡ್ಡದಲ್ಲಿರುವ ದೇಗುಲಮತ್ತು ವಿಷ್ಣು ಬಾಬಾ ಮಠಕ್ಕೆ ಭೇಟಿ ಕೊಟ್ಟಿದ್ದರು.

ಅಲ್ಲಿಂದ ವಾಪಾಸ್‌ ಬರುತ್ತಾ ಗೂಗಲ್‌ ಮ್ಯಾಪ್‌ ಹಾಕಿದ್ದರು. ಅದು ಹೇಳಿದ ದಿಕ್ಕಿಗೆ ಹೋಗುತ್ತಾ ಹೋಗುತ್ತಾ ಐವರು ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದರು. ಮಧ್ಯಾಹ್ನ 2ಗಂಟೆ ಹೊತ್ತಿಗೆ ಅವರು ದಟ್ಟ ಕಾಡಿನ ನಡುವೆ ದಾರಿ ಹುಡುಕಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಹೊಟ್ಟೆಗೆ ಊಟ, ನೀರಿಲ್ಲದೇ ಎಲ್ಲರೂ ಸುಸ್ತಾಗಿರುತ್ತಾರೆ. ಸಾಗುತ್ತಾ ಸಾಗುತ್ತಾ ಅವರು ಸಂಜೆ5:30ರ ಹೊತ್ತಿಗೆ ಭೌಶುನಿ ಕೋಲ ಪ್ರದೇಶಕ್ಕೆ ತಲುಪುತ್ತಾರೆ. ಅಲ್ಲಿ ಜನ ಸಂಪರ್ಕಕ್ಕೆ ಯತ್ನಿಸುತ್ತಾರೆ. ಅವರಲ್ಲಿ ಒಬ್ಬ ಪೊಲೀಸರನ್ನು ಸಂಪರ್ಕಿಸುವಲ್ಲಿ ಯಶಸ್ವಿ ಆಗುತ್ತಾನೆ.

ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ

ಯುವಕರು ಕಾಡಿನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಸತತ 11ಗಂಟೆಗಳ ಕಾರ್ಯಾಚರಣೆ ಬಳಿಕ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್‌ ಎಲ್ಲರೂ ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ಹೋಗಲು ಗೂಗಲ್ ಮ್ಯಾಪ್ (Google Map) ಬಳಸಿ ದಾರಿ ಹುಡುಕುತ್ತಾ ಹೋದ ಯುವಕರಿಬ್ಬರು ತಮ್ಮ ಕಾರನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಇಳಿಸಿದ ಘಟನೆ ಕೇರಳದ (kerala) ಕಾಸರಗೋಡು (kasaragodu) ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ವಾಹನ ಮರಕ್ಕೆ ಸಿಲುಕಿದ್ದರಿಂದ ಯುವಕರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳದ ಕಾಸರಗೋಡಿನ ಪಲ್ಲಂಚಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಕಾರಿನಲ್ಲಿ ಸಿಲುಕಿದ್ದ ಯುವಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಹೈದರಾಬಾದ್ ಮೂಲದ ಪ್ರವಾಸಿಗರಾದ ಯುವಕರು ಬೆಳ್ಳಂಬೆಳಗ್ಗೆ ಹತ್ತಿರದ ಆಸ್ಪತ್ರೆಗೆ ಹೋಗುತ್ತಿದ್ದರು. ಇದಕ್ಕಾಗಿ ಅವರು ಗೂಗಲ್ ನಕ್ಷೆಯನ್ನು ಬಳಸಿಕೊಂಡು ಮುಂದುವರಿಯುತ್ತಿದ್ದರು. ಎಂದು ಯುವಕರಲ್ಲಿ ಒಬ್ಬರಾದ ಅಬ್ದುಲ್ ರಶೀದ್ ತಿಳಿಸಿದ್ದಾರೆ.

ಗೂಗಲ್ ನಕ್ಷೆ ಕಿರಿದಾದ ರಸ್ತೆಯನ್ನು ತೋರಿಸಿತ್ತು. ಹೀಗಾಗಿ ಕಾರನ್ನು ಮುಂದೆ ಓಡಿಸಿದೆವು. ವಾಹನದ ಹೆಡ್‌ಲೈಟ್ ಅನ್ನು ಬಳಸಿದಾಗ ನಮ್ಮ ಮುಂದೆ ಸ್ವಲ್ಪ ನೀರು ಇದೆ ಎಂದು ಅನಿಸಿತು. ಆದರೆ ಎರಡು ಕಡೆ ನದಿ ಮತ್ತು ಮಧ್ಯದಲ್ಲಿ ಸೇತುವೆ ಇರುವುದು ಗೊತ್ತಾಗಲಿಲ್ಲ. ಸೇತುವೆಗೆ ತಡೆ ಗೋಡೆಯೂ ಇರಲಿಲ್ಲ ಎಂದು ಅವರು ತಿಳಿಸಿದರು.
ಕಾರು ಹಠಾತ್ತನೆ ನೀರಿನ ಪ್ರವಾಹಕ್ಕೆ ಸಿಲುಕಲು ಪ್ರಾರಂಭಿಸಿತು. ಆದರೆ ಅನಂತರ ನದಿಯ ದಡದಲ್ಲಿರುವ ಮರದಲ್ಲಿ ಸಿಲುಕಿಕೊಂಡಿತು. ಅಷ್ಟರಲ್ಲಾಗಲೇ ಕಾರಿನ ಬಾಗಿಲು ತೆರೆದು ವಾಹನದಿಂದ ಹೊರಬಂದು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸಂಪರ್ಕಿಸಿ ಸ್ಥಳವನ್ನು ತಿಳಿಸಿದೆವು. ಅನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗಗಳನ್ನು ಬಳಸಿ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅವರು ವಿವರಿಸಿದರು. ನಾವು ನಮ್ಮ ಜೀವ ಉಳಿಸಿಕೊಳ್ಳಬಹುದು ಎಂದು ಕನಸಿನಲ್ಲೂ ಯೋಚಸಲಿಲ್ಲ. ಇದು ಪುನರ್ಜನ್ಮ ಎಂದು ಭಾವಿಸುತ್ತೇವೆ ಎಂದು ರಶೀದ್ ಹೇಳಿದರು.

ಇದು ಮೊದಲಲ್ಲ

ಗೂಗಲ್ ನಕ್ಷೆ ತಪ್ಪು ದಾರಿ ತೋರಿಸಿರುವುದು ಇದು ಮೊದಲಲ್ಲ. ಕಳೆದ ತಿಂಗಳು, ಹೈದರಾಬಾದ್‌ನಿಂದ ಪ್ರವಾಸಿಗರ ಗುಂಪೊಂದು ಕೊಟ್ಟಾಯಂನ ಕುರುಪ್ಪಂಥಾರ ಬಳಿ ಉಕ್ಕಿ ಹರಿಯುತ್ತಿದ್ದ ನದಿಗೆ ವಾಹನವನ್ನು ಓಡಿಸಿತ್ತು. ಸಮೀಪದ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ಪ್ರಯತ್ನದಿಂದಾಗಿ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದರೂ ಅವರ ವಾಹನವು ಸಂಪೂರ್ಣವಾಗಿ ಮುಳುಗಿತ್ತು.

ಇದನ್ನೂ ಓದಿ: Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

Exit mobile version