ನಮ್ಮ ಪ್ರೀತಿಪಾತ್ರರಿಂದ ಉಡುಗೊರೆ ಪಡೆಯುವುದು, ಅವರಗೆ ಗಿಫ್ಟ್ ಕೊಡುವುದೆಲ್ಲ ನಿಜಕ್ಕೂ ಅದ್ಭುತ ಕ್ಷಣ ಎನ್ನಿಸಿಕೊಳ್ಳುತ್ತದೆ. ಅದರಲ್ಲೂ ಸಂಗಾತಿಯಿಂದ ಏನಾದರೂ ಉಡುಗೊರೆ ಪಡೆಯುವುದು ಇದೆಯಲ್ಲ, ಅದರ ಸಂತೋಷ ಏನೆಂಬುದನ್ನು ಬಲ್ಲವರೇ ಬಲ್ಲರು. ಆ ಉಡುಗೊರೆ ಮತ್ತು ಅದನ್ನು ಪಡೆದ/ ಕೊಟ್ಟ ಕ್ಷಣವೆಲ್ಲ ತುಂಬ ವಿಶೇಷ ಅನ್ನಿಸಿಕೊಳ್ಳುತ್ತದೆ. ಅದರಲ್ಲೂ ಉಡುಗೊರೆ ವಿಷಯದಲ್ಲಿ ಕೊಡುವುದಕ್ಕಿಂತಲೂ ಪಡೆಯುವುದರಲ್ಲೇ ಮಹದಾನಂದವಿದೆ ಎಂಬುದು ಸುಳ್ಳಲ್ಲ.
ಅಂಥದ್ದೊಂದು ಅದ್ಭುತ ಆನಂದ ಮತ್ತು ವಿಶೇಷ ಕ್ಷಣವನ್ನು ಯುವಕನೊಬ್ಬ ತನ್ನ ಮಡದಿಗೆ ಒದಗಿಸಿಕೊಟ್ಟಿದ್ದಾನೆ. ಈ ನವ ದಂಪತಿ ಮದುವೆ ರಿಸಪ್ಷನ್ ಅದ್ದೂರಿ ಸಮಾರಂಭ ನಡೆಯುತ್ತಿತ್ತು. ಆ ಸಂಜೆ ಸಂಗೀತಮಯವಾಗಿತ್ತು. ಅತಿಥಿಗಳೂ ತುಂಬಿದ್ದರು. ಆಗಲೇ ವರ ವರುಣ್ ತನ್ನ ಪತ್ನಿ ಪೃಥಾಳಿಗೆ ಒಂದು ಅದ್ಭುತ ಉಡುಗೊರೆ ಕೊಟ್ಟಿದ್ದಾನೆ. ಹಾಗಂತ ಇದು ಯಾವುದೇ ಚಿನ್ನಾಭರಣವಾಗಲೀ, ಬೆಲೆಬಾಳುವ ವಸ್ತುವಾಗಲೀ ಅಲ್ಲ. ಬೆಲೆಯನ್ನೇ ಕಟ್ಟಲಾಗದ ಪ್ರೀತಿಯೇ ತುಂಬಿರುವ ಪೇಂಟಿಂಗ್.
ವರುಣ್ ಚಿತ್ರಕಲಾವಿದ. ಪತ್ನಿಗೊಂದು ವಿಶೇಷ ಉಡುಗೊರೆ ಕೊಡಲು ನಿರ್ಧರಿಸಿದ ಅವನು ಆಕೆಯ ಕಣ್ಣೆದುರಲ್ಲೇ ಅವಳದ್ದೇ ಚಿತ್ರ ಬಿಡಿಸಿದ್ದಾನೆ. ಪತಿ ಪೂರ್ಣವಾಗಿ ಚಿತ್ರ ಬಿಡಿಸಿ, ಕ್ಯಾನ್ವಾಸ್ನ್ನು ಉಲ್ಟಾ ಹಿಡಿಯುವವರೆಗೂ ಪತ್ನಿ ಪೃಥಾಳಿಗೆ ಅದು ತನ್ನದೇ ಚಿತ್ರ ಎಂದು ಗೊತ್ತೇ ಆಗಲಿಲ್ಲ. ಹಿನ್ನೆಲೆಯಲ್ಲಿ ಹಾಡು ಬರುತ್ತಿದ್ದರೆ, ವರುಣ್ ಕ್ಯಾನ್ವಾಸ್ ಮೇಲೆ ರೇಖೆಗಳನ್ನು ಎಳೆಯುತ್ತಿದ್ದ. ಮೊದಲು ಒಂದು ಲವ್ ಸಿಂಬಾಲ್ (ಹೃದಯದ ಚಿತ್ರ) ಬಿಡಿಸಿಕೊಂಡು, ನೋಡನೋಡುತ್ತಿದ್ದಂತೆ ತನ್ನ ಪತ್ನಿಯ ಚಿತ್ರ ಬಿಡಿಸಿದ್ದ. ವರುಣ್ ಕ್ಯಾನ್ವಾಸ್ ಮೇಲೆ ತಲೆಕೆಳಗಾಗಿ ಬಿಡಿಸಿ, ನಂತರ ಅದನ್ನು ಸೀದಾ ಮಾಡಿದ್ದ. ಪತಿಯ ಕೈಯಲ್ಲಿ ಅರಳಿದ ತನ್ನ ಭಾವಚಿತ್ರವನ್ನು ನೋಡಿ ಪತ್ನಿ ಸಖತ್ ಖುಷಿಯಾಗಿದ್ದಳು.
ಈ ವಿಡಿಯೊ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಒಬ್ಬ ಪತಿ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ‘ಅಬ್ಬಾ ಇದೆಷ್ಟು ಭಾವನಾತ್ಮಕ ಕ್ಷಣ’ ಎಂದೂ ಹಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video | ʻಆಪ್ ಕಾ ಆನಾ ದಿಲ್ ಧಡ್ಕಾನಾʼ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಪುಟ್ಟ ಹುಡುಗಿ! ವಿಡಿಯೊ ಇಲ್ಲಿದೆ