Site icon Vistara News

Pre Wedding Shoot: ಯುನಿಫಾರ್ಮ್‌ನಲ್ಲೇ ಪೊಲೀಸ್‌ ಅಧಿಕಾರಿಗಳ ಪ್ರಿ ವೆಡ್ಡಿಂಗ್‌ ಶೂಟ್‌; ಸಿನಿಮಾ ಸ್ಟೈಲ್‌ ವಿಡಿಯೊ ಇಲ್ಲಿದೆ

Viral Video

Pre Wedding Shoot Of Police Officers Goes Viral

ಹೈದರಾಬಾದ್‌: ಕಾಲ ಬದಲಾದಂತೆ ನಮ್ಮ ಜೀವನ ಶೈಲಿಯೂ ಬದಲಾಗಿದೆ. ಇದೀಗ ಪ್ರಿ ವೆಡ್ಡಿಂಗ್‌ ಶೂಟ್‌(pre wedding shoot) ಎನ್ನುವುದು ಜೀವನದ ಭಾಗವೇ ಆಗಿದೆ. ಪ್ರತಿ ಮದುವೆಯ ಮುನ್ನ ಇದು ಅತ್ಯಗತ್ಯ ಎನ್ನುವಷ್ಟರ ಮಟ್ಟಿಗೆ ಇದು ಆವರಿಸಿಕೊಂಡಿದೆ. ಇದೀಗ ಹೈದರಾಬಾದ್‌ ಮೂಲದ ಪೊಲೀಸ್‌ (police) ಜೋಡಿಯೊಂದು ತಮ್ಮ ಪ್ರಿ ವೆಡ್ಡಿಂಗ್‌ ಶೂಟ್‌ ಅನ್ನು ವಿಭಿನ್ನವಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (social media) ಜನಪ್ರಿಯವಾಗಿದೆ.

ಸದ್ಯ ಈ ಪೊಲೀಸ್‌ ಜೋಡಿಯ ಈ ಪ್ರಿ ವೆಡ್ಡಿಂಗ್‌ ಶೂಟ್‌ ವೈರಲ್‌ ಆಗಿದ್ದು, ನೆಟ್ಟಿಗರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. 2 ನಿಮಿಷದ ಈ ವಿಡಿಯೊವನ್ನು ಸಿನಿಮಾದ ಹಾಡಿನ ರೀತಿಯಲ್ಲೇ ಚಿತ್ರೀಕರಿಸಿದ್ದು ವಿಶೇಷ. ಅದರಲ್ಲೂ ವಿಡಿಯೊದ ಆರಂಭದಲ್ಲಿ ಇಬ್ಬರೂ ಪೊಲೀಸ್‌ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

ವಿಡಿಯೊದಲ್ಲೇನಿದೆ?

ಮೊದಲು ಲೇಡಿ ಪೊಲೀಸ್‌ ಯುನಿಫಾರ್ಮ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಿಂದ ಹೊರ ಬರುತ್ತಾರೆ. ವ್ಯಕ್ತಿಯೊಬ್ಬನ ಜೊತೆ ಅವರು ಸಂಭಾಷಣೆಯಲ್ಲಿ ನಿರತರಾಗಿರುವಾಗ ಆಗಮಿಸುವ ಇನ್ನೊಬ್ಬ ಪೊಲೀಸ್‌ ಅಧಿಕಾರಿ (ಆಕೆ ಮದುವೆಯಾಗಲಿರುವ ವ್ಯಕ್ತಿ) ಆಕೆಯನ್ನು ನೋಡಿ ಕನಸಿಗೆ ಜಾರುತ್ತಾರೆ. ಬಳಿಕ ಸಿನಿಮಾಗಳಲ್ಲಿ ಕಾಣುವಂತೆ ಅವರು ಚಾರ್ ಮಿನಾರ್‌, ಲಾಡ್‌ ಬಜಾರ್‌ ಮತ್ತಿತರೆಡೆಗಳಲ್ಲಿ ಹೆಜ್ಜೆ ಹಾಕುತ್ತಾರೆ. ಹಿನ್ನೆಲೆಯಲ್ಲಿ ಸಂಗೀತ ಕೇಳಿ ಬರುತ್ತದೆ.

ನೆಟ್ಟಿಗರು ಏನಂತಾರೆ?

ಸದ್ಯ ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಈ ಜೋಡಿಯ ನಡೆಯನ್ನು ಟೀಕಿಸಿದರೆ ಇನು ಕೆಲವರು ಬೆಂಬಲ ಸೂಚಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅವರು ಸಾರ್ವಜನಿಕ ಹಣ, ಸಾರ್ವಜನಿಕ ಸೊತ್ತು, ಪೊಲೀಸ್‌ ಸಮವಸ್ತ್ರ ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಕಮೆಂಟ್‌ ಮಾಡಿ, ʼʼಈ ಜೋಡಿ ತಮ್ಮ ವೈಯಕ್ತಿಕ ಕಾರಣಕ್ಕೆ ಸಾರ್ವಜನಿಕ ವಸ್ತುಗಳನ್ನು ಉಪಯೋಗಿಸಿದ್ದು ಸರಿಯಲ್ಲʼʼ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ʼʼಇದು ಉತ್ತಮ ನಡೆಯಲ್ಲ. ಸರ್ಕಾರಿ ನೌಕರರ ಇಂತಹ ನಡೆಯನ್ನು ಖಂಡಿಸಬೇಕುʼʼ ಎಂದು ಬರೆದಿದ್ದಾರೆ.

ಈ ಜೋಡಿಗೆ ಬೆಂಬಲ ವ್ಯಕ್ತಪಡಿಸಿದವರೂ ಇದ್ದಾರೆ. ʼʼನನಗೆ ಇದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ. ಅವರ ಸೃಜನಶೀಲತೆಯನ್ನು ನಾವು ಗುರುತಿಸಬೇಕು. ತಮ್ಮ ದೈನಂದಿನ ಕೆಲಸದ ಪ್ರಕ್ರಿಯನ್ನು ತಿಳಿಸಿದ್ದಾರೆ. ಇದನ್ನೇ ಚಲನಚಿತ್ರಗಳಲ್ಲಿ ತೋರಿಸುತ್ತಾರೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುತಾತ್ಮ ತಂದೆಗೆ ಸೇನೆ ಬಟ್ಟೆ ಧರಿಸಿ ಸೆಲ್ಯೂಟ್‌ ಹೊಡೆದ 6 ವರ್ಷದ ಮಗ; ಕರುಳು ಕಿವುಚುವ ವಿಡಿಯೊ ವೈರಲ್‌

ಹಿರಿಯ ಅಧಿಕಾರಿ ಹೇಳಿದ್ದೇನು?

ಈ ವಿಡಿಯೊ ವೀಕ್ಷಿಸಿದ ಹಿರಿಯ ಐಪಿಎಸ್‌ ಅಧಿಕಾರಿ ಸಿ.ವಿ.ಆನಂದ್‌ ಈ ಬಗ್ಗೆ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʼʼಈ ವಿಡಿಯೊಗೆ ಲಭಿಸಿರುವ ಮಿಶ್ರ ಪ್ರತಿಕ್ರಿಯೆಯನ್ನು ಗಮನಿಸಿದ್ದೇನೆ. ನಿಜವಾಗಿಯೂ ಅವರು ತುಂಬಾ ಎಕ್ಸೈಟ್‌ ಆಗಿದ್ದರು. ಪೊಲೀಸ್‌ ಎನ್ನುವುದು ಬಹಳ ಕಠಿಣವಾದ ಕೆಲಸ. ಅದರಲ್ಲೂ ಮಹಿಳೆಯರಿಗೆ ಇದು ಬಹು ದೊಡ್ಡ ಸವಾಲು. ಇಬ್ಬರು ಪೊಲೀಸ್‌ ಅಧಿಕಾರಿಗಳು ತಮ್ಮ ಸಮವಸ್ತ್ರ ಉಪಯೋಗಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮೊದಲೇ ತಿಳಿಸಿದ್ದರೆ ನಾವೇ ಖುದ್ದಾಗಿ ಎಲ್ಲ ವ್ಯವಸ್ಥೆ ಮಾಡುತ್ತಿದ್ದೆವುʼʼ ಎಂದು ಬರೆದುಕೊಂಡಿದ್ದಾರೆ. ಇನ್ನು ಮುಂದೆ ಯಾರೂ ಅನುಮತಿ ಪಡೆಯದೇ ಹೀಗೆ ಮಾಡಬೇಡಿ ಎಂದೂ ಮನವಿ ಮಾಡಿದ್ದಾರೆ.

Exit mobile version