ನವದೆಹಲಿ: ಈಗಿನ ಕಾಲದಲ್ಲಿ ಮಕ್ಕಳನ್ನು ಸಂಭಾಳಿಸುವುದು ಬಹುಕಷ್ಟದ ಕೆಲಸ ಎಂದು ಹೆಚ್ಚಿನ ಮಹಿಳೆಯರು ಹೇಳುತ್ತಿರುತ್ತಾರೆ. ಅದರಲ್ಲೂ, ತಾಯಿಯು ಕೆಲಸಕ್ಕೆ ಹೋಗುವವರಾದರೆ ಮಕ್ಕಳನ್ನು ಸಂಭಾಳಿಸುವುದು, ಪೋಷಣೆ ಮಾಡುವುದು ಇನ್ನೂ ಕಷ್ಟ. ಇನ್ನು ಬೇಸಿಗೆ ವೇಳೆ ಶಾಲೆಗೆ ರಜೆ ಘೋಷಿಸಿದರಂತೂ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದೇ ತಾಯಂದಿರಿಗೆ ಕೆಲಸವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಪುಟ್ಟ ಮಗುವೊಂದು ಐಎಎಸ್ ಅಧಿಕಾರಿ ಕೆಲಸ ಮಾಡುವ ಡೆಸ್ಕ್ ಮೇಲೆಯೇ ಕುಣಿದು ಕುಪ್ಪಳಿಸಿದೆ. ಐಎಎಸ್ ಅಧಿಕಾರಿಯೇ (IAS Officer) ತಮ್ಮ ಮಗನ ಸಾಹಸದ ವಿಡಿಯೊವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.
ಹೌದು, ಜಿಲ್ಲಾಧಿಕಾರಿಯಾಗಿರುವ ಪಮೇಲಾ ಸತ್ಪತಿ ಅವರು ತಮ್ಮ ಮನೆಯಲ್ಲಿಯೇ ಕಚೇರಿಯೊಂದನ್ನು ಮಾಡಿಕೊಂಡಿದ್ದಾರೆ. “ನೀವೊಬ್ಬ ಗಂಡು ಮಗುವಿನ ತಾಯಿಯಾಗಿದ್ದರೆ, ಬೇಸಿಗೆ ರಜೆಯಲ್ಲಿ ಆತನನ್ನು ಹಿಡಿದಿಡುವ ಕೆಲಸವೇ ಭಯಾನಕವಾಗಿರುತ್ತದೆ” ಎಂಬುದಾಗಿ ಪಮೇಲಾ ಸತ್ಪತಿ ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ವಿಡಿಯೊ ವೈರಲ್ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ. ಐಎಎಸ್ ಅಧಿಕಾರಿಯು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ನೀಲಿ ಬಣ್ಣದ ಟಿ-ಶರ್ಟ್ ಧರಿಸಿದ ಪುಟ್ಟ ಬಾಲಕನು ಡೆಸ್ಕ್ ಮೇಲೆ ಕುಣಿದಾಡಿದ್ದಾನೆ. ಬಾಲಕನ ತುಂಟಾಟವನ್ನು ಕಂಡ ತಾಯಿಯು ತಮ್ಮ ಪಾಡಿಗೆ ತಾವು ಕೆಲಸ ಮಾಡಿದ್ದಾರೆ.
The most awaited time of the year has now become the most dreaded time of the year.
— Pamela Satpathy (@PamelaSatpathy) April 11, 2024
SUMMER VACATION 🤕🤒
POV: You are a Boy Mum🥹#parenting #vacations pic.twitter.com/Fi8UIcimKN
“ಕೆಲಸ ಮಾಡುತ್ತಲೇ ಮಗುವನ್ನು ಸಾಕುವುದು ಕಷ್ಟದ ಕೆಲಸ. ಅದರಲ್ಲೂ, ಮಹಿಳೆಯು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು, ವೈಯಕ್ತಿಕ ಹಾಗೂ ವೃತ್ತಿಜೀವನದ ಸಮತೋಲನ ಕಾಪಾಡುವುದು ಇನ್ನೂ ಕಷ್ಟ. ಇಂತಹದ್ದರಲ್ಲಿ ಕೆಲಸದ ಜತೆಗೆ ಮಗನಿಗೂ ಸಮಯ ಕೊಡುತ್ತಿರುವ ನಿಮ್ಮ ಕೆಲಸ ಶ್ಲಾಘನೀಯ” ಎಂದು ಒಬ್ಬರು ಬರೆದುಕೊಂಡಿದ್ದಾರೆ. “ಮೇಡಂ, ಈಗಿನ ಕಾಲದಲ್ಲಿ ಮಕ್ಕಳು ತಂದೆ-ತಾಯಿ ಜತೆ ಕಾಲ ಕಳೆಯುವುದೇ ಅತ್ಯುತ್ತಮ ಕ್ಷಣವಾಗಿದೆ. ನೀವು ಇದನ್ನು ಮಿಸ್ ಮಾಡಿಕೊಳ್ಳದಿರಿ. ಏಕೆಂದರೆ, ಸಮಯ ಮರಳಿ ಬರುವುದಿಲ್ಲ” ಎಂಬುದಾಗಿ ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, “ಮಹಿಳಾ ಉದ್ಯೋಗಿಗಳು ಮಕ್ಕಳ ಬೇಸಿಗೆ ಸಮಯದಲ್ಲಿ ಕಡ್ಡಾಯ ರಜೆ ಪಡೆಯುವುದು ಒಳಿತು” ಎಂದಿದ್ದಾರೆ. ಇನ್ನು ಮತ್ತೊಂದಿಷ್ಟು ಜನ, ಕೆಲಸ ಮಾಡುವ ಕಚೇರಿಯಲ್ಲಿ ಮಕ್ಕಳನ್ನು ಆಡಲು ಬಿಟ್ಟರೆ ಸರ್ಕಾರದ ಕೆಲಸ ಆದ ಹಾಗೆಯೇ ಎಂದು ನಕಾರಾತ್ಮಕವಾಗಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಐಎಎಸ್ ಅಧಿಕಾರಿ ಇರಲಿ, ಮುಖ್ಯಮಂತ್ರಿಯೇ ಇರಲಿ, ತಾಯಿ ಯಾವಾಗಲೂ ತಾಯಿಯೇ. ಮಕ್ಕಳ ಖುಷಿಯೇ ಆಕೆಗೆ ಮುಖ್ಯವಾಗಿರುತ್ತದೆ. ಮಕ್ಕಳ ಖುಷಿಯ ಜತೆಗೆ ವೃತ್ತಿಜೀವನವನ್ನೂ ಬ್ಯಾಲೆನ್ಸ್ ಮಾಡುವ ತಾಯಂದಿರಿಗೆ ಇವರು ಅತ್ಯುತ್ತಮ ನಿದರ್ಶನ ಎನಿಸಿದ್ದಾರೆ.
ಇದನ್ನೂ ಓದಿ: IPL 2024: ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಪರಾಗ್; ವಿಡಿಯೊ ವೈರಲ್