ಹೊಸದಿಲ್ಲಿ: ಗಾಜಿಯಾಬಾದ್‌ನಲ್ಲಿ ಯುವ ಜೋಡಿಯ ಜೀವನ ದುರಂತ ಅಂತ್ಯ (Couple Death) ಕಂಡಿದೆ. ಮೂರು ತಿಂಗಳ ಹಿಂದೆ ಮದುವೆಯಾದ ಈ ಜೋಡಿ (New Married couple) ಕೇವಲ 24 ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ.
ಅಭಿಷೇಕ್ ಮತ್ತು ಅಂಜಲಿ, ಕಳೆದ ನವೆಂಬರ್ 30ರಂದು ವಿವಾಹವಾಗಿದ್ದರು. ನಿನ್ನೆ ಮುಂಜಾನೆ ದಿಲ್ಲಿ ಮೃಗಾಲಯಕ್ಕೆ (Delhi Zoo) ಭೇಟಿ ನೀಡುವ ಮೂಲಕ ಈ ಜೋಡಿ ದಿನವನ್ನು ಆರಂಭಿಸಿತ್ತು. ಆದರೆ 24 ಗಂಟೆಗಳಲ್ಲಿ ಇಬ್ಬರೂ ಜೀವ ತ್ಯಜಿಸಿದ್ದಾರೆ. 25ರ ಹರೆಯದ ಅಭಿಷೇಕ್ ಅಹ್ಲುವಾಲಿಯ ಹೃದಯಾಘಾತದಿಂದ (Heart attack, heart Failure) ಮೃತಪಟ್ಟರೆ, ಅವರ ಪತ್ನಿ ಅಂಜಲಿ ಆಘಾತ ತಡೆದುಕೊಳ್ಳಲಾಗದೆ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದರು. ಕೂಡಲೇ ಅಭಿಷೇಕ್‌ನನ್ನು ಮೊದಲು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಮತ್ತು ನಂತರ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಗುರುತಿಸಲಾಯಿತು.
ಅವರ ಪಾರ್ಥಿವ ಶರೀರವನ್ನು ಗಾಜಿಯಾಬಾದ್‌ನ ವೈಶಾಲಿಯಲ್ಲಿರುವ ಅಹ್ಲ್ಕಾನ್ ಅಪಾರ್ಟ್‌ಮೆಂಟ್‌ನಲ್ಲಿರುವ ನವವಿವಾಹಿತರ ಮನೆಗೆ ರಾತ್ರಿ 9 ಗಂಟೆಗೆ ತರಲಾಯಿತು. ತುಸು ಹೊತ್ತು ಶವದ ಬಳಿ ಸುಮ್ಮನೆ ಕುಳಿತಿದ್ದ ಅಂಜಲಿ, ನಂತರ ಓಡಿ ಹೋಗಿ ಏಳನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಆಕೆ ಕೊನೆಯುಸಿರೆಳೆದಿದ್ದಾರೆ.
ಅಭಿಷೇಕ್ ಅವರ ಸಂಬಂಧಿ ಬಬಿತಾ, “ದೇಹವನ್ನು ಮನೆಗೆ ತಂದ ನಂತರ, ಅವಳು ಅದರ ಪಕ್ಕದಲ್ಲಿ ಕುಳಿತು ಅಳುತ್ತಿದ್ದಳು. ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿ ಕಡೆಗೆ ಓಡಿದಳು. ಅವಳು ಜಿಗಿಯುತ್ತಾಳೆ ಎಂದು ಭಾವಿಸಿ ಅವಳ ಹಿಂದೆ ಓಡಿದೆ. ಆದರೆ ನಾನು ಅವಳನ್ನು ಹಿಡಿಯುವ ಮೊದಲು ಅವಳು ಕೆಳಗೆ ಹಾರಿದ್ದಳು” ಎಂದರು.
25 ವರ್ಷದ ಯುವಕನ ದುರಂತ ಸಾವು, ಹೃದಯಾಘಾತಕ್ಕೆ ಬಲಿಯಾಗುವ ಯುವ ವಯಸ್ಕರ ಸಂಖ್ಯೆಯಲ್ಲಿ ಆಗಿರುವ ಆತಂಕಕಾರಿ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ಗಾರ್ಬಾ ಕಾರ್ಯಕ್ರಮಗಳಿಂದ ಹಿಡಿದು ಜಿಮ್‌ಗಳು ಹಾಗೂ ಮದುವೆಯ ಮೆರವಣಿಗೆಗಳವರೆಗೆ ಯುವಕರು ಕುಸಿದು ಬೀಳುವ ಮತ್ತು ಹೃದಯಾಘಾತದಿಂದ ಸಾಯುವ ಹಲವಾರು ಘಟನೆಗಳು ಕಳೆದ ಎರಡು ವರ್ಷಗಳಿಂದ ವರದಿಯಾಗಿವೆ.
ಇದನ್ನೂ ಓದಿ: Viral News: ಹಲ್ಲಿನ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದವಳ ತುಟಿಯನ್ನೇ ಕತ್ತರಿಸಿದರು!