Site icon Vistara News

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

K Annamalai

K Annamalai

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಜತೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ ಕಾರ್ಯಕರ್ತರು ಮೇಕೆಯ ತಲೆಗೆ ಅಣ್ಣಾಮಲೆ ಅವರ ಫೋಟೊ ತೂಗು ಹಾಕಿ ಬಳಿಕ ಅದರ ತಲೆ ಕಡಿಯುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನೆತ್ತರು ಚೆಲ್ಲಿದ್ದು, ವಿಕೃತಿ ಮೆರೆದ ಡಿಎಂಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅದೊಂದು ಜನನಿಬಿಡ ರಸ್ತೆ. ಅಲ್ಲಿ ಡಿಎಂಕೆ ಕಾರ್ಯಕರ್ತರೆಲ್ಲ ಗುಂಪುಗೂಡಿದ್ದಾರೆ. ಇವರ ಮಧ್ಯೆ ಮೇಕೆಯೊಂದಿದೆ. ಮೇಕೆಯ ಕುತ್ತಿಗೆಗೆ ಅಣ್ಣಾಮಲೈ ಅವರ ಫೋಟೊವನ್ನು ತೂಗು ಹಾಕಲಾಗಿದೆ. ಬಳಿಕ ಓರ್ವ ಮೇಕೆಯ ಹಿಂದಿನ ಕಾಲನ್ನು ಹಿಡಿದುಕೊಳ್ಳುತ್ತಾನೆ. ಲುಂಗಿ ಸುತ್ತಿಕೊಂಡಿದ್ದ ಓರ್ವ ಕತ್ತಿ ಹಿಡಿದು ಬಳಿಗೆ ಬಂದು ಮೇಕೆಯ ಕತ್ತು ಕಡಿಯುತ್ತಾನೆ. ರಕ್ತ ರಸ್ತೆಯ ಮೇಲೆ ಚೆಲ್ಲುತ್ತದೆ. ಇಷ್ಟಕ್ಕೇ ಸುಮ್ಮನಾಗದ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಅವರ ಫೋಟೊವನ್ನು ರಕ್ತದಲ್ಲಿ ಅದ್ದುತ್ತಾರೆ. ಜತೆಗೆ ʼʼಅಣ್ಣಾಮಲೈ ಮೇಕೆ ಬಲಿ” ಎಂದು ಘೋಷಣೆ ಕೂಗುತ್ತಾರೆ.

ಐಎಸ್‌ಐಎಸ್‌ ರೀತಿಯ ಶೈಲಿ

ಸದ್ಯ ಈ ವಿಡಿಯೊ ದೇಶಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಈ ವಿಡಿಯೊ ಹಂಚಿಕೊಂಡು ʼಐಸಿಸ್ ಶೈಲಿಯ ದ್ವೇಷʼ ಎಂದು ಕರೆದಿದ್ದಾರೆ. ʼʼಇದು ಐಸಿಸ್ ಮಾದರಿಯ ದ್ವೇಷ ಸಾಧನೆ. ಕೊಯಮತ್ತೂರಿನಲ್ಲಿ ತಮ್ಮ ವಿಜಯವನ್ನು ಆಚರಿಸಲು ಡಿಎಂಕೆ ಕಾರ್ಯಕರ್ತರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಣ್ಣಾಮಲೈ ಅವರ ಫೋಟೊ ಇರುವ ಮೇಕೆಯನ್ನು ಕೊಂದು ವಿಕೃತಿ ಮೆರೆದಿದ್ದಾರೆ. ಅಣ್ಣಾಮಲೈ ಒಬ್ಬ ರೈತನ ಮಗ ಮತ್ತು ಅವರ ಕುಟುಂಬವು ಮೇಕೆಗಳನ್ನು ಸಾಕುತ್ತದೆ. ಈ ಹಿಂದೆ ಮೇಕೆ ಸಾಕಣೆಯ ಬಗ್ಗೆ ಅಣ್ಣಾಮಲೈ ಅವರನ್ನು ಡಿಎಂಕೆ ಅಪಹಾಸ್ಯ ಮಾಡಿತ್ತು. ಇದೀಗ ಸಂವಿಧಾನ ಉಳಿಸಿ ಎಂದು ಕೂಗುವ ಗುಂಪು ನಿಶ್ಯಬ್ದವಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಸನಾತನ ಧರ್ಮ ವಿರೋಧಿ ಇಂಡಿ ಮೈತ್ರಿಕೂಟವು ಎಂದಾದರೂ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಈ ರೀತಿ ಹತ್ಯೆ ಮಾಡುತ್ತದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿದ ಆಘಾತದಿಂದ ಇನ್ನೂ ಹಲವರು ಹೊರ ಬಂದಿಲ್ಲ. ʼʼಈ ರೀತಿಯ ವರ್ತನೆಯನ್ನು ನೀವು ಸಮರ್ಥಿಸುತ್ತೀರಾ?ʼʼ ಎಂದು ಒಬ್ಬರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ತಮಿಳುನಾಡು ಪೊಲೀಸರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಾರೆ. ʼʼರೋಗಗ್ರಸ್ಥ ರಾಜ್ಯʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Exit mobile version