ಬೆಂಗಳೂರು: ಕಾಳಿಂಗ ಸರ್ಪ ಬಹಳ ಅಪರೂಪವಾಗಿ ಕಂಡುಬರುವಂತಹ ಹಾವು. ಇದು ಬಹಳ ಅಪಾಯಕಾರಿ ಕೂಡ. ಇವು ಹೆಚ್ಚಾಗಿ ದಟ್ಟ ಕಾಡಿನ ಪೊದೆಗಳಲ್ಲಿ ಕಂಡು ಬರುತ್ತದೆ. ಆಗುಂಬೆಯ ಸಮೀಪ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ(King Cobra Rescue)ವೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಅದನ್ನು ರಕ್ಷಣೆ ಮಾಡಿರುವ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಗುಂಬೆಯಲ್ಲಿ 12 ಅಡಿ ಉದ್ದದ ಈ ಬೃಹತ್ ಕಾಳಿಂಗ ಸರ್ಪವನ್ನು ವನ್ಯಜೀವಿ ಅಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಆಗುಂಬೆ ರೈನ್ ಫಾರೆಸ್ಟ್ ಸಂಶೋಧನಾ ಕೇಂದ್ರದ (ಎಆರ್‌ಆರ್‌ಎಸ್) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಅದರ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ.
ಕಾಳಿಂಗ ಸರ್ಪ ರಸ್ತೆ ದಾಟುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದರು. ಆದರೆ ನಂತರ ಅದು ಮನೆಯೊಂದರ ಕಾಂಪೌಂಡ್‍ನಲ್ಲಿರುವ ಪೊದೆಯಲ್ಲಿ ವಾಸವಾಗಿದ್ದು, ಇದನ್ನು ನೋಡಿದ ಮನೆಯ ಮಾಲೀಕರು ಕೂಡಲೇ ಅರಣ್ಯ ಇಲಾಖೆ ಮತ್ತು ಎಆರ್‌ಆರ್‌ಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಿರ್ದೇಶಕ ಅಜಯ್ ಗಿರಿ ಅವರು ಸರ್ಪದ ಬಳಿ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಗಿರಿ ಮತ್ತು ಅವರ ತಂಡ ಸ್ಥಳಕ್ಕೆ ಬಂದು ರಾಡ್ ಸಹಾಯದಿಂದ ಮರವೇರಿದ ಸರ್ಪವನ್ನು ಕೆಳಗಿಳಿಸಿದರು. ನಂತರ, ಅದನ್ನು ಚೀಲದಲ್ಲಿ ಹಾಕಿ ಶೀಘ್ರದಲ್ಲೇ ಕಾಡಿಗೆ ಬಿಡಲಾಯಿತು.
ಘಟನೆಯನ್ನು ವಿವರಿಸಿದ ಗಿರಿ ತಮ್ಮ ಪೋಸ್ಟ್ ನಲ್ಲಿ, “ಪರಿಸ್ಥಿತಿಯ ಬಗ್ಗೆ ಎಆರ್‌ಆರ್‌ಎಸ್‍ಗೆ ಮಾಹಿತಿ ನೀಡಲಾಯಿತು. ಕರೆ ಮಾಡಿದಾಗ ನಾವು ಸ್ಥಳೀಯರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಸೂಚನೆ ನೀಡಿದೆವು. ನಂತರ ಸ್ಥಳಕ್ಕೆ ಧಾವಿಸಿದ್ದೇವೆ. ತಪಾಸಣೆಯ ನಂತರ ನಾವು ಹಾವನ್ನು ಚೀಲದೊಳಗೆ ಹಾಕಿ ರಕ್ಷಿಸಿದೆವು. ನಾವು ಸ್ಥಳೀಯರಿಗೆ ಸರ್ಪದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದೆವು. ಸರ್ಪವನ್ನು ಹಿಡಿಯಲು ಅದಕ್ಕೆ ಬೇಕಾದ ಸಾಮಗ್ರಿಗಳನ್ನೂ ಕೊಟ್ಟಿದ್ದೇವೆ. ನಂತರ ಸ್ಥಳೀಯರು ಮತ್ತು ಉಸ್ತುವಾರಿ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!
ಇನ್ಸ್ಟಾಗ್ರಾಂನಲ್ಲಿ ಸುಮಾರು 13,000 ಫಾಲೋವರ್ಸ್‌ಗಳನ್ನು ಹೊಂದಿರುವ ಅಜಯ್ ಗಿರಿ, ಆಗಾಗ ಹಾವುಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಕಾಳಿಂಗ ಸರ್ಪದ ಈ ವಿಡಿಯೊಗೆ ಸಂಬಂಧಿಸಿದಂತೆ, ಸುಸಂತ ನಂದ ಅವರು ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಜಯ್ ಗಿರಿ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.