ಬೆಂಗಳೂರು: ರಾಜಧಾನಿ ಮೂಲದ ಖ್ಯಾತ ಬಿಟಿ ಕಂಪನಿ ಬಯೋಕಾನ್ (Biocon) ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಮಂಗಳವಾರ ಬೆಂಗಳೂರಿನ ರಸ್ತೆಗಳ (Bengaluru Roads) ಪಕ್ಕದ ಕಸದ ರಾಶಿಗಳ (garbage) ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿಗೆ (BBMP) ಮುಜುಗರ ಸೃಷ್ಟಿಸಿದ್ದಾರೆ. ಈ ವಿಡಿಯೋ ಈಗ ವೈರಲ್ (Viral video) ಆಗಿದೆ.
ಈ ಕಸದ ರಾಶಿಯನ್ನು ತ್ವರಿತವಾಗಿ ಕ್ಲೀನ್ ಮಾಡಿಸುವಂತೆ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರೆ ನೀಡಿದ್ದಾರೆ. ಅವರು ಮಾಡಿದ ಪೋಸ್ಟ್‌ನಲ್ಲಿ ಕಸದ ರಾಶಿಯಿಂದ ತುಂಬಿದ ಹೊರ ವರ್ತುಲ ರಸ್ತೆಯ ವಿಡಿಯೋ ಕಂಡುಬಂದಿದೆ. ಈ ದೃಶ್ಯವನ್ನು “ಅಸಹ್ಯಕರ” ಎಂದು ಕರೆದಿರುವ ಬಯೋಕಾನ್ ಮುಖ್ಯಸ್ಥೆ, “ಕೊಳಕು ಅವ್ಯವಸ್ಥೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ” ಬಿಬಿಎಂಪಿಗೆ ಕೋರಿದ್ದಾರೆ.
Fresh this morning in Bangalore …14th May. Right on outer ring toad @TVMohandasPai @kiranshaw @ndtv @TimesNow. Total collapse of governance@BBMPCOMM dengue outbreak guaranteed & govt / bbmp responsible pic.twitter.com/31Eni199lj
— Vishwanath Nagaraja (@Vishwa0507) May 14, 2024
“ಅಸಹ್ಯಕರ ನೋಟ. @BBMPSWMSplComm ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಅವರು ಮೂಲ ವೀಡಿಯೊವನ್ನು ಟ್ವೀಟ್ ಮಾಡಿ Xನಲ್ಲಿ ಬರೆದಿದ್ದಾರೆ. ಕಿರಣ್ ಶಾ ಅವರ ಪೋಸ್ಟ್‌ಗೆ ತೀಕ್ಷ್ಣವಾದ ಕಾಮೆಂಟ್‌ಗಳು ಎಕ್ಸ್‌ನಲ್ಲಿ ಬಳಕೆದಾರರಿಂದ ಬಂದಿವೆ. ವೀಡಿಯೊ ಈಗ ವೈರಲ್ ಆಗುತ್ತಿದೆ. ಅನೇಕ X ಬಳಕೆದಾರರು ತಕ್ಷಣದ ಕ್ರಮಕ್ಕಾಗಿ ಕರೆ ನೀಡಿದ್ದಾರೆ.
ಹಲವಾರು ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೃಶ್ಯವು ಇತರ ನಗರಗಳಲ್ಲಿಯೂ ದುರದೃಷ್ಟವಶಾತ್ ಸಾಮಾನ್ಯವಾಗಿದೆ ಎಂದಿದ್ದಾರೆ ಕೆಲವರು. ಆದಾಗ್ಯೂ, ನಾಗರಿಕರು ಮೂಲಭೂತ ನಾಗರಿಕ ಪ್ರಜ್ಞೆಯನ್ನು ಹೊಂದಿರಬೇಕು ಮತ್ತು ಬೀದಿಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದು ಕೆಲವರು ಹೇಳಿದ್ದಾರೆ.
“ಇನ್ನೂ ನಾಚಿಕೆಗೇಡಿನ ಸಂಗತಿಯೆಂದರೆ ಹೆಚ್ಚಿನ ಅನಿವಾಸಿಗಳು, ಕಾನ್ಸುಲೇಟ್‌ಗಳು, ಮಂತ್ರಿಗಳು, ಬಿಬಿಎಂಪಿಯ ಉನ್ನತ ಅಧಿಕಾರಿಗಳು ಸಹ ಈ ಪ್ರದೇಶದಲ್ಲಿಯೇ ಇರುತ್ತಾರೆ ಮತ್ತು ಅವರು ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ! ಇಂತಹ ಕೊಳಕು ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ನಾವು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನೂ ಸಹ ಹತಾಶಗೊಳಿಸುತ್ತಿದ್ದೇವೆ” ಎಂದಿದ್ದಾರೆ ಬಳಕೆದಾರರೊಬ್ಬರು.
ಮತ್ತೊಬ್ಬರು, “ಪ್ರತಿಯೊಂದು ಮೊದಲ ಹಂತದ ಹಾಗೂ ಎರಡನೇ ಹಂತದ ನಗರಗಳಲ್ಲಿ ಇದು ಇಂದು ಕಾಣಬರುವ ದುರಂತ ಸನ್ನಿವೇಶ. ಸಾರ್ವಜನಿಕ ಕಸದ ತೊಟ್ಟಿಗಳಿಲ್ಲ. ಆದ್ದರಿಂದ ಜನರು ತಮಗಿಷ್ಟ ಬಂದ ಕಡೆ ಕಸ ಎಸೆಯುತ್ತಾರೆ. ನಾಗರಿಕ ಸಂಸ್ಥೆಗಳು ಸಾರ್ವಜನಿಕ ಕಸದ ಬುಟ್ಟಿಗಳನ್ನು ಸ್ಥಾಪಿಸಲು, ಬಳಸಲು ಮತ್ತು ನಿರ್ವಹಿಸಲು ಮುಂದಾಗದ ಹೊರತು ಇದು ಮುಂದುವರಿಯುತ್ತದೆ” ಎಂದಿದ್ದಾರೆ.
“ಬೆಂಗಳೂರಿನ ಪ್ರತಿಯೊಂದು ಪ್ರದೇಶವೂ ಈ ರೀತಿಯ ರಸ್ತೆಗಳನ್ನು ಹೊಂದಿದೆ. ಮೊದಲು ಜನರಿಗೆ ಶಿಕ್ಷಣ ನೀಡಬೇಕು ಮತ್ತು ಶಿಕ್ಷೆ ನೀಡಬೇಕು” ಎಂದಿದ್ದಾರೆ ಮತ್ತೊಬ್ಬರು. “ಮೆಟ್ರೋ ನಿಲ್ದಾಣಗಳು, ಡಿವೈಡರ್‌ಗಳ ಬಳಿ ಜನರು ತ್ಯಾಜ್ಯವನ್ನು ಎಸೆಯುವುದನ್ನು ನಾನು ಗಮನಿಸಿದ್ದೇನೆ. ಇದು ರಾತ್ರಿ ಸಮಯದಲ್ಲಿ ನಡೆಯುತ್ತದೆ. ಈ ಸ್ಥಳಗಳಲ್ಲಿ ಪದೇ ಪದೆ ಕಸ ಸುರಿಯುವವರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ಅಪರಾಧಿಗಳಿಗೆ ಭಾರಿ ದಂಡ ವಿಧಿಸಬೇಕಾಗಿದೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ