ನ್ಯೂಯಾರ್ಕ್: ನಮ್ಮ ದೇಶದ ಹಾಡುಗಳೇ ಚಂದ. ಅದರಲ್ಲೂ ಆ ಹಾಡುಗಳನ್ನು ವಿದೇಶಿ ನೆಲದಲ್ಲಿ ಕೇಳುವುದೆಂದರೆ ಅದೊಂದು ಅದ್ಭುತವಿದ್ದಂತೇ ಸರಿ. ಹಾಗೆಯೇ ಬಾಲಿವುಡ್‌ನ ಮಾಂತ್ರಿಕ ಗಾಯಕ ಕಿಶೋರ್ ಕುಮಾರ್ ಅವರ ಹಾಡೊಂದು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನ ನಗರದ ಸಾರ್ವಜನಿಕ ಸ್ಥಳದಲ್ಲಿ ಕೇಳಿಬಂದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್ ಪಾರ್ಕ್ ಬಳಿ ರೆಜ್ಜಿ ಹೆಸರಿನ ಗಿಟಾರ್ ಕಲಾವಿದ ಗಿಟಾರ್ ನುಡಿಸುತ್ತಿರುತ್ತಾರೆ. ʼಸಿಂಗ್ ವಿತ್ ಮಿ ಫಾರ್ ಫ್ರೀʼ ಎನ್ನುವ ವಿಶೇಷ ಪ್ರಯತ್ನವನ್ನು ಅವರು ಮಾಡುತ್ತಿರುತ್ತಾರೆ. ಅಲ್ಲಿರುವ ಜನರನ್ನು ಕರೆಸಿಕೊಂಡು, ಅವರಿಂದಲೇ ಹಾಡು ಹಾಡಿಸಿ, ಅದಕ್ಕೆ ಗಿಟಾರ್ ನುಡಿಸುವ ಪ್ರಯತ್ನ ಅದಾಗಿರುತ್ತದೆ.
ಇದನ್ನೂ ಓದಿ: Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!
ಹೀಗೆ ಕಾರ್ಯಕ್ರಮ ನಡೆಯುತ್ತಿರುವಾಗ ಅಲ್ಲಿ ಭಾರತದ ದೆಹಲಿಯವರಾದ ಲಕ್ಷ್ ಹೋಗುತ್ತಾರೆ. ಅವರನ್ನು ಕಂಡೊಡನೆ ರೆಜ್ಜಿ ಅವರನ್ನು ಕರೆದು, ಹಾಡು ಹೇಳಿ ಎಂದು ಹೇಳುತ್ತಾರೆ. ಲಕ್ಷ್ ಮೊದಲಿಗೆ ಸ್ವಲ್ಪ ಗಾಬರಿಯಾಗುತ್ತಾರಾದರೂ ರೆಜ್ಜಿ ತನಗೆ ಹಿಂದಿ ಹಾಡುಗಳು ಗೊತ್ತು ಎಂದು ಹೇಳಿದಾಗ ಹಾಡು ಹೇಳುವ ಧೈರ್ಯ ಮಾಡುತ್ತಾರೆ. ಹಾಗೆಯೇ ಬಾಲಿವುಡ್‌ನ ನೀಲಿ ನೀಲಿ ಅಂಬರ್ ಹಾಡನ್ನು ಹಾಡಲು ಮುಂದಾಗುತ್ತಾರೆ.
ಕಿಶೋರ್ ಕುಮಾರ್ ಅವರ ಹಾಡು ಎಂದು ತಿಳಿದ ತಕ್ಷಣ ರೆಜ್ಜಿ ಕಿಶೋರ್ ಕುಮಾರ್ ಬಗ್ಗೆ ತನಗೆ ಗೊತ್ತು ಎಂದು ಹೇಳುತ್ತಾರೆ. ಅವರು ಬಾಲಿವುಡ್‌ನ ಲೆಜೆಂಡ್ ಎಂದು ಬಣ್ಣಿಸುತ್ತಾರೆ. ನಂತರ ಇಬ್ಬರೂ ಸೇರಿಕೊಂಡು ಹಾಡು ಹಾಡಿ, ಅದಕ್ಕೆ ಗಿಟಾರ್ ನುಡಿಸುತ್ತಾರೆ.
ಇದನ್ನೂ ಓದಿ: Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!
ಈ ಸುಂದರ ದೃಶ್ಯವಿರುವ ವಿಡಿಯೊವನ್ನು ರೆಜ್ಜಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ತಿಂಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ವಿಡಿಯೊ ಭಾರೀ ವೈರಲ್ ಆಗಿದೆ. ಇಂದಿಗೂ ಅನೇಕ ಜನರು ವಿಡಿಯೊಗೆ ಲೈಕ್, ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. “ಇಬ್ಬರು ಅದ್ಭುತ ಪ್ರತಿಭೆಗಳು ಒಟ್ಟಾಗಿ ಹಾಡು ಹಾಡಿವೆ” ಎಂದು ಕಾಮೆಂಟ್‌ಗಳು ಬಂದಿವೆ. ಹಾಡನ್ನು ಹಾಡಿರುವ ಲಕ್ಷ್ ಕೂಡ ವಿಡಿಯೊಗೆ ಕಾಮೆಂಟ್ ಮಾಡಿದ್ದು, ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ರೆಜ್ಜಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಅದನ್ನು ವಿಡಿಯೊ ಮಾಡಿ ಅದ್ಭುತ ಅನುಭವವನ್ನು ನೆನಪಿನಲ್ಲಿಟ್ಟಿಕೊಳ್ಳುವಂತೆ ಮಾಡಿದ್ದಕ್ಕೂ ಕೃತಜ್ಞತೆ ತಿಳಿಸಿದ್ದಾರೆ.