ಪಟನಾ: ಲೋಕಸಭಾ ಚುನಾವಣೆಯ (Lok Sabha Election 2024) 4 ಹಂತಗಳ ಮತದಾನ ಈಗಾಗಲೇ ಪೂರ್ಣಗೊಂಡಿದೆ. ಇನ್ನುಳಿದ 3 ಹಂತಗಳಿಗೆ ಭರದ ಸಿದ್ದತೆ ನಡೆಯುತ್ತಿದೆ. ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ, ಪ್ರಚಾರದ ಭರಾಟೆಯಲ್ಲಿ ನಿರತರಾಗಿದ್ದಾರೆ. ಕೆಲವು ಕ್ಷೇತ್ರಗಳು ಘಟಾನುಘಟಿ ಸ್ಪರ್ಧಿಗಳ ಕಾರಣದಿಂದ ದೇಶದ ಗಮನ ಸೆಳೆದರೆ, ಇನ್ನು ಹಲವೆಡೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿಭಿನ್ನ ಕಸರತ್ತು ನಡೆಸಿ ಸುದ್ದಿಯಾಗುತ್ತಿದ್ದಾರೆ. ಇದೇ ರೀತಿ ಇಲ್ಲಿಯೊಬ್ಬರು ಸ್ಪರ್ಧಿ ತಮ್ಮ ವಿಶಿಷ್ಟ ಪ್ರಚಾರದಿಂದ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕತ್ತೆ ಮೇಲೆ ತೆರಳುವ ಮೂಲಕ ಬಿಹಾರದ ಸ್ವತಂತ್ರ ಅಭ್ಯರ್ಥಿಯೊಬ್ಬರು ಇಡೀ ದೇಶವೇ ತಮ್ಮ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video).
ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಸತ್ಯೇಂದ್ರ ಬೈಥಾ ಈ ರೀತಿ ಗಮನ ಸೆಳೆದವರು. ಗೋಪಾಲ್‌ಗಂಜ್ ಶ್ಯಾಮ್‌ಪುರ ನಿವಾಸಿಯಾದ ಅವರು ಚುನಾವಣಾ ಪ್ರಚಾರ ಮಾತ್ರವಲ್ಲ ನಾಮಪತ್ರ ಸಲ್ಲಿಕೆಗೂ ಕತ್ತೆ ಮೇಲೆಯೇ ತೆರಳಿದ್ದರು. ಸದ್ಯ ಅವರು ನಾಮಪತ್ರ ಸಲ್ಲಿಕೆಗೆ ಕತ್ತೆ ಮೇಲೆ ಮೆರವಣಿಗೆ ಮೂಲಕ ಸಾಗುತ್ತಿರುವ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
Bihar: Independent candidate Satyendra Baitha reaches Gopalganj sitting on a 'Donkey' to file his nomination. pic.twitter.com/BL12VZbOv2
— IANS (@ians_india) May 3, 2024
ಸತ್ಯೇಂದ್ರ ಬೈಥಾ ಹೇಳೋದೇನು?
ಹೊಸ ರೀತಿಯ ಪ್ರಚಾರ ಶೈಲಿಯ ಬಗ್ಗೆ ಮಾತನಾಡುವ ಸತ್ಯೇಂದ್ರ ಬೈಥಾ, ʼʼದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ. ಹೀಗಾಗಿ ದುಬಾರಿ ಹಣ ಪಾವತಿಸಿ ನನ್ನಂತಹ ಅದೆಷ್ಟೋ ಜನರಿಗೆ ವಾಹನದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಕತ್ತೆ ಮೇಲೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ನಿರ್ಧರಿಸಿದ್ದೇನೆ ನಾಮಪತ್ರ ಸಲ್ಲಿಕೆಗೂ ನಾನು ಕತ್ತೆ ಮೇಲೆಯೇ ತೆರಳಿದ್ದೆʼʼ ಎಂದು ಅವರು ವಿವರಿಸಿದ್ದಾರೆ. ಸತ್ಯೇಂದ್ರ ಬೈಥಾ ಆಗಮಿಸುತ್ತಿದ್ದಂತೆ ಅನೇಕರು ಮನೆಯಿಂದ ಹೊರಗೆ ಬಂದು ಅವರ ಜತೆ ಫೋಟೊ ಕ್ಲಿಕ್ಕಿಸುತ್ತಿದ್ದಾರೆ.
ಭರವಸೆ
ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಜನರಿಗಾಗಿ ಯಾವೆಲ್ಲ ಕೆಲಸಗಳನ್ನು ಮಾಡ ಬಯಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʼʼಜಿಲ್ಲೆಯಲ್ಲಿ ಸಕ್ಕರೆ ಖಾರ್ಖಾನೆ ಮತ್ತು ವಿಶ್ವ ವಿದ್ಯಾನಿಲಯ ತೆರೆಯಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುತ್ತೇನೆ. ಶುಚಿತ್ವಕ್ಕೂ ನಾನು ಒತ್ತು ಕೊಡುತ್ತೇನೆ. ಈ ಹಿಂದೆ ಅನೇಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೆಹಲಿ ಅಥವಾ ಪಾಟನಾದಲ್ಲಿ ವಾಸಿಸುತ್ತಿದ್ದರು. ಆದರೆ ನಾನು ಹಾಗಲ್ಲ. ನಾನು ಸ್ಥಳೀಯ ನಿವಾಸಿಯಾಗಿದ್ದು, ಸಾರ್ವಜನಿಕರಿಗೆ ದಿನದ 24 ಗಂಟೆಯೂ ಲಭ್ಯವಿರಲಿದ್ದೇನೆʼʼ ಎಂದು ಭರವಸೆ ನೀಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಇನ್ನು ಕತ್ತೆ ಸವಾರಿಗೆ ನೆಟ್ಟಿಗರು ವಿದ ವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ʼʼಇದು ಬಹಳ ಮಜವಾಗಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಪಾಪದ ಪ್ರಾಣಿಗೆ ಈ ರೀತಿಯ ಹಿಂಸೆ ನೀಡುತ್ತಿರುವುದು ಎಷ್ಟು ಸರಿ?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ʼʼಈ ರೀತಿ ಪ್ರಾಣಿ ಬಳಕೆಗೆ ಅನುಮತಿ ಇದೆಯೇ?ʼʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದ್ದಂತೂ ಸತ್ಯ.
ಗೋಪಾಲ್‌ಗಂಜ್‌ನಲ್ಲಿ ಮೇ 25ರಂದು 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಅಲೋಕ್ ಕುಮಾರ್ ಸುಮನ್ ಮತ್ತು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟದಿಂದ ಚಂಚಲ್ ಕುಮಾರ್ ಪಾಸ್ವಾನ್ ಸ್ಪರ್ಧಿಸುತ್ತಿದ್ದಾರೆ.