ಇದು ಅಂತಿಂಥ ಕತೆಯಲ್ಲ. ತನ್ನ ಪ್ರೀತಿಗಾಗಿ ಭಾರತದಿಂದ ಯುರೋಪ್‌ವರೆಗೆ ಸೈಕಲ್ ತುಳಿದು ಪಯಣಿಸಿದ ಪ್ರೇಮಿಯ (Love Story) ಕತೆ. ಇಂಥ ಅಪರೂಪದ ಘಟನೆ ನಡೆದುದು ಈಗಲ್ಲ, 1977ರಲ್ಲಿ. ಕೆಲಕಾಲದ ಹಿಂದೆ, ಬಿಬಿಸಿ ಈ ಕತೆಯನ್ನು ವರದಿ ಮಾಡುವ ಮೂಲಕ ಬೆಳಕಿಗೆ ಬಂದಿದ್ದು, ಇದೀಗ ಮತ್ತೆ ಸಾಮಾಜಿಕ ಜಾಲತಾಣದ ಮೂಲಕ ವೈರಲ್ (Viral story) ಆಗಿದೆ. ಪ್ರೀತಿಗಾಗಿ ಈ ಭಾರತೀಯ ಕಲಾವಿದ ಮಾಡಿದ ಬೃಹತ್ ಯಾತ್ರೆ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಹೀಗೆ ಭಾರತದಿಂದ ಸ್ವೀಡನ್ನಿಗೆ ಪಯಣ ಬೆಳೆಸಿದ ಪ್ರೇಮಿಯ ಹೆಸರು ಡಾ ಪ್ರದ್ಯುಮ್ನ ಕುಮಾರ್ ಮಹಾನಂದಿಯಾ. 1975ರಲ್ಲಿ ಮಹಾನಂದಿಯಾ ದೆಹಲಿಯ ಕಲಾ ಶಾಲೆಯೊಂದರಲ್ಲಿ ಕಲಾಭ್ಯಾಸ ಮಾಡುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಶೆಡ್‌ವಿನ್ ಎಂಬ 19ರ ಹುಡುಗಿ ಭಾರತಕ್ಕೆ ಬಂದಿದ್ದರು. ಕಲಾಭ್ಯಾಸ ಮಾಡುತ್ತಿದ್ದ ಮಹಾನಂದಿಯಾರನ್ನು ಅಕಸ್ಮಾತಾಗಿ ಭೇಟಿಯಾದ ಈಕೆಗೆ ತನ್ನ ಚಿತ್ರವನ್ನು ಆತನಿಂದ ಮಾಡಿಸಿಕೊಳ್ಳಲು ತೀರ್ಮಾನಿಸಿದರಂತೆ. ಮಹಾನಂದಿಯಾ ಕಲೆಯನ್ನು ನೋಡಿ ಮನಸೋತ ಶೆಡ್‌ವಿನ್ ತನ್ನ ಚಿತ್ರ ಬಿಡಿಸಿಕೊಂಡದ್ದು ಮಾತ್ರವಲ್ಲ, ಪ್ರೀತಿಯಲ್ಲೂ ಬೀಳುತ್ತಾಳೆ. ಮಹಾನಂದಿಯಾ ಶೆಡ್‌ವಿನ್‌ಳ ಸೌಂದರ್ಯಕ್ಕೆ ಮನಸೋತರೆ, ಶೆಡ್‌ವಿನ್ ಮಹಾನಂದಿಯಾರ ಸರಳತೆಗೆ ಮಾರುಹೋದಳಂತೆ. ಆ ಕಾಲದಲ್ಲಿ, ಆಕೆ ಭಾರತದಿಂದ ವಾಪಾಸ್ ತನ್ನೂರಿಗೆ ಮರಳಬೇಕಾಗಿ ಬಂದಾಗ ಇಬ್ಬರೂ ಗಾಢಪ್ರೀತಿಯಲ್ಲಿ ಬಿದ್ದಾಗಿತ್ತು. ಏನು ಮಾಡಬೇಕೆಂದು ತಿಳಿಯದ ಅವರಿಬ್ಬರೂ ಈ ಪ್ರೀತಿಗೆ ಅಧಿಕೃತ ಮುದ್ರೆಯೊತ್ತಲು ತೀರ್ಮಾನಿಸಿ ಮದುವೆಯೂ ಆದರಂತೆ.
ಮೊದಲ ಬಾರಿ ಮಹಾನಂದಿಯಾರ ತಂದೆಯನ್ನು ಭೇಟಿಯಾಗಲು ಬಂದಿದ್ದ ಆಕೆ ಸೀರೆಯುಟ್ಟಿದ್ದರಂತೆ. ಆಕೆ ಸೀರೆ ಉಟ್ಟಳೆಂಬುದು ಸ್ವತಃ ಮಹಾನಂದಿಯಾಗೂ ಗೊತ್ತಿರಲಿಲ್ಲ. ಇಬ್ಬರೂ ಭಾರತದಲ್ಲಿ ಮಹಾನಂದಿಯಾ ಹೆತ್ತವರಿಂದ ಆಶೀರ್ವಾದ ಪಡೆದೇ ಸಾಂಪ್ರದಾಯಿಕ ಶೈಲಿಯಲ್ಲಿ ಸರಳವಾಗಿ ಮದುವೆಯಾದರಂತೆ.
ಇಷ್ಟೆಲ್ಲ ನಡೆದು, ಆದಕೆ ಆಕೆಯ ದೇಶಕ್ಕೆ ಮರಳಬೇಕಾಗಿ ಬಂದಾಗ, ಮಹಾನಂದಿಯಾಗೆ ತನಗೆ ಆಕೆಯ ಜೊತೆ ಹೋಗಲು ಸಾಧ್ಯವಿಲ್ಲ ಎಂಬುದು ಅರಿವಾಯಿತಂತೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ತನ್ನ ಓದು ಮುಗಿಸುವುದು ಅತ್ಯಂತ ಅಗತ್ಯ ಎಂಬುದು ಮಹಾನಂದಿಯಾಗೆ ತಿಳಿದಿತ್ತು. ಹಾಗಾಗಿ, ಓದು ಮುಗಿಸಿದ ತಕ್ಷಣ ತಾನು ಸ್ವೀಡನ್‌ಗೆ ಬರುವುದಾಗಿ ಹೇಳಿದ ಮಹಾನಂದಿಯಾ ಭಾರತದಲ್ಲೇ ಉಳಿದುಕೊಂಡು ಓದು ಮುಗಿಸಿದರಂತೆ. ಆಕೆ ತನ್ನ ಊರು ಸ್ವೀಡನ್‌ನ ಬೋರಾಸ್‌ಗೆ ಮರಳಿದರಂತೆ.
ಆ ಕಾಲದಲ್ಲಿ ಪತ್ರದಲ್ಲೇ ಮಾತನಾಡಿಕೊಳ್ಳುತ್ತಿದ್ದ ಇಬ್ಬರ ಪ್ರೀತಿ ದೂರದಲ್ಲಿದ್ದಾಗ ಇನ್ನೂ ಗಾಢವಾಯಿತು. ಓದು ಮುಗಿಸಿದ ಮೇಲೆ ಸ್ವೀಡನ್‌ಗೆ ಬಂದೇ ಬರುತ್ತೇನೆ ಎಂದು ಹೇಳಿದ್ದ ಮಹಾನಂದಿಯಾಗೆ ಈಗ ಇನ್ನೊಂದು ಸಮಸ್ಯೆಯೂ ಎದುರಾಯಿತಂತೆ. ಸ್ವೀಡನ್‌ಗೆ ಹೋಗುವಷ್ಟು ತನ್ನಲ್ಲಿ ದುಡ್ಡಿಲ್ಲ ಎಂಬುದು ಮಹಾನಂದಿಯಾಗೆ ಎದುರಾದ ದೊಡ್ಡ ತೊಡಕು. ಆದರೆ ತನ್ನ ಪ್ರೀತಿಯನ್ನು, ಪ್ರೀತಿಯ ಹೆಂಡತಿಯನ್ನು ಯಾವ ಕಾರಣಕ್ಕೂ ಬಿಡಲು ಮನಸ್ಸಿಲ್ಲದ ಮಹಾನಂದಿಯಾ ಸೈಕಲ್‌ನಲ್ಲೇ ಸ್ವೀಡನ್ ಪಯಣಿಸಲು ತೀರ್ಮಾನಿಸಿದರಂತೆ.
1977ರ ಜನವರಿ 22ರಂದು ತನ್ನ ಪಯಣ ಸೈಕಲ್‌ನಲ್ಲಿ ಆರಂಭಿಸಿದ ಮಹಾನಂದಿಯಾ ನಿತ್ಯವೂ 70 ಕಿಮೀಗಳಷ್ಟು ಸೈಕಲ್ ತುಳಿಯುತ್ತಿದ್ದರಂತೆ. ಭಾರತದಿಂದ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಟರ್ಕಿಗಳ ಮೂಲಕ ಪಯಣಿಸಿ ಸ್ವೀಡನ್ ತಲುಪಿದರಂತೆ. ಈ ಪಯಣದಲ್ಲಿ ಹಲವು ದಿನಗಳು ಊಟವಿಲಲದೆ ಕಳೆದಿದ್ದೂ ಇದೆಯಂತೆ. ಹಣವಿಲ್ಲದೆ ಇದ್ದುದರಿಂದ ಊಟ, ವಸತಿ ಇತ್ಯಾದಿಗಳಿಗೆ ಸಾಕಷ್ಟು ತೊಂದರೆಯಾದರೂ, ಕಲಾವಿದನಾಗಿದ್ದರಿಂದ ಅದರ ಮೂಲಕ ಹೊಟ್ಟೆ ಹೊರೆದೆ, ಬಹಳಷ್ಟು ಜಾಗಗಳಲ್ಲಿ ಹಲವರ ಚಿತ್ರ ಬಿಡಿಸಿ ಬಂದ ದುಡ್ಡು ಸಾಕಷ್ಟು ಸಹಾಯ ಮಾಡಿತು. ಹಲವರು ಚಿತ್ರ ಬಿಡಿಸಿದ್ದಕ್ಕೆ ಉಚಿತ ವಸತಿ ಕೊಟ್ಟರು ಎಂದು ಮಹಾನಂದಿಯಾ ಬಿಬಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬಹುದೊಡ್ಡ ಪಯಣದ ನಂತರ ಮಹಾನಂದಿಯಾ ಕೊನೆಗೂ 1977ರ ಮೇ 28ರಂದು ಇಸ್ತಾನ್‌ಬುಲ್, ವಿಯೆನ್ನಾ ಮೂಲಕ ಯುರೋಪ್ ತಲುಪಿದರಂತೆ. ನಂತರ ಗೋತೆನ್‌ಬರ್ಗ್‌ಗೆ ರೈಲಿನಲ್ಲಿ ಪಯಣಿಸಿ ತನ್ನ ಹೆಂಡತಿಯನ್ನು ಸೇರಿಕೊಂಡು ನಂತರ ಇಬ್ಬರೂ ಮತ್ತೆ ಅಧಿಕೃತವಾಗಿ ಸ್ವೀಡನ್‌ನಲ್ಲಿ ಮದುವೆಯಾದರಂತೆ.
ಮಹಾನಂದಿಯಾ ಹೇಳುವಂತೆ, ಈ ಪಯಣ ಮಾಡುವ ಮೊದಲು, ಯುರೋಪಿಯನ್ ಸಂಸ್ಕೃತಿ ಬಗೆಗೆ ತನಗೆ ಕೊಂಚವೂ ಮಾಹಿತಿ ಇರಲಿಲ್ಲ. ಆದರೆ, ಪ್ರೀತಿಯಷ್ಟೇ ಅಲ್ಲಿಗೆ ನನ್ನನ್ನು ಕೊಂಡೊಯ್ದಿತು. ಈಗಲೂ 1975ರಲ್ಲಿ ಪ್ರೀತಿಸುವಂತೆ ಆಕೆಯನ್ನು ಪ್ರೀತಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಹಾನಂದಿಯಾ ಈಗಲೂ ಸ್ವೀಡನ್‌ನಲ್ಲಿ ಕಲಾವಿದರಾಗಿ ವೃತ್ತಿ ಮುಂದುವರಿಸಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!