ಕಸದಿಂದ ರಸ ತಯಾರಿಸುವಲ್ಲಿ ನಾವು ಭಾರತೀಯರು ನಿಸ್ಸೀಮರು. ಹಳೇ ಯಾವುದೋ ವಸ್ತುವನ್ನು ಮಾರ್ಪಡಿಸಿ, ಬೇರೆ ಯಾವುದೋ ಕೆಲಸಕ್ಕೆ ಬಳಸಿಕೊಳ್ಳುವುದೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ನೀವು ನಿಮ್ಮ ಮನೆಯಲ್ಲಿ ಇಂಥ ಪ್ರಯೋಗಗಳನ್ನೆಲ್ಲ ಮಾಡಿರಬಹುದಲ್ಲ..!
ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ. ಈ ಆಟೋ ಚಾಲಕ ತನ್ನ ಆಟೋವನ್ನು ರೋಲ್ಸ್-ರಾಯ್ಸ್ ಕಾರಿನಂತೆ ಮಾಡಿದ್ದಾನೆ. ಇಡೀ ಆಟೋಕ್ಕೆ ಗುಲಾಬಿ ಬಣ್ಣದ ಪೇಂಟಿಂಗ್ ಮಾಡಿರುವ ಆತ ಐಷಾರಾಮಿ ಸೀಟುಗಳನ್ನು ಹಾಕಿದ್ದಾನೆ. ಅದೂ ಕೂಡ ಬಿಳಿ-ಗುಲಾಬಿ ಮಿಶ್ರಿತ ಸೀಟ್. ನೋಡಲು ಸಿಕ್ಕಾಪಟೆ ಚೆಂದವಾಗಿದೆ. ಅದೆಲ್ಲದರ ಜತೆ ಆಟೋದ ಬಗ್ಗೆ ವಿಶೇಷವಾಗಿ ಗಮನಸೆಳೆಯುವುದು ಅದರ ಮೇಲ್ಭಾಗ. ನೀವು ರೋಲ್ಸ್ ರಾಯ್ಸ್ ಕಾರನ್ನು ನೋಡಿದ್ದೀರಲ್ಲ. ಅದರಲ್ಲಿ ಮೇಲ್ಮುಚ್ಚು ಇಲ್ಲದಿರುವ ಕಾರುಗಳೂ ಇವೆ. ಇನ್ನು ಕೆಲವು ಆಧುನಿಕ ಕಾರುಗಳಿಗೆ ಒಂದು ಬಟನ್ ಒತ್ತಿದರೆ ಸಾಕು, ಕಾರಿನ ರೂಫ್ ತೆರೆದುಕೊಳ್ಳುವ ಆಯ್ಕೆ ಇರುತ್ತದೆ. ಈಗ ಈ ಚಾಲಕ ತನ್ನ ಆಟೋವನ್ನೂ ಹೀಗೆ ಮಾರ್ಪಾಡು ಮಾಡಿದ್ದಾನೆ. ಆಟೋದ ಸ್ಟೀರಿಂಗ್ ಬಳಿ ಇರುವ ಬಟನ್ ಒತ್ತಿದರೆ, ಆ ಆಟೋದ ಮೇಲ್ಭಾಗ ತೆರೆದುಕೊಳ್ಳುವುದನ್ನು ವಿಡಿಯೊದಲ್ಲಿ ನೋಡಬಹುದು.
ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್ ಆಗಿದ್ದು autorikshaw_kerala ಎಂಬ ಇನ್ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್ಗಳಷ್ಟು ವೀವ್ಸ್ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಇದನ್ನು ರೋಲ್ಸ್ ರಾಯ್ಸ್ ಆಫ್ ಆಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇದು ನಿಜಕ್ಕೂ ಜೋಕ್ ಎನ್ನುತ್ತಿದ್ದಾರೆ. ಹಾಗೇ, ಕಾರಿನ ಸೌಂದರ್ಯಕ್ಕೆ ಹಲವರು ಮಾರುಹೋಗಿದ್ದಾರೆ.
ಇದನ್ನೂ ಓದಿ: Viral Video : ಒಡೆದ ಮೊಟ್ಟೆಯಲ್ಲೇ ಮರಿ ಮಾಡಿಸಿದ ವ್ಯಕ್ತಿ! ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ ನೋಡಿ
ಹೀಗೆ ಮಾರ್ಪಾಡಿತ ಆಟೋ ರಿಕ್ಷಾಗಳ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಉದ್ಯಮಿ ಹರ್ಷ ಗೋಯೆಂಕಾ ಅವರು, ಐಷಾರಾಮಿ ಕಾರಿನ ಮಾದರಿಯಲ್ಲೇ ರೂಪಿಸಲಾಗಿದ್ದ ಆಟೋ ರಿಕ್ಷಾವೊಂದರ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಹಾಗೇ, ಕಳೆದ ವರ್ಷ ದೆಹಲಿಯಲ್ಲಿ ಒಬ್ಬ ಚಾಲಕ ತಮ್ಮ ಆಟೋದ ಮೇಲ್ಭಾಗದಲ್ಲಿ ಸಣ್ಣ ಉದ್ಯಾನವನವನ್ನೇ ಸೃಷ್ಟಿಸಿಕೊಂಡಿದ್ದು ಸುದ್ದಿಯಾಗಿತ್ತು. ಸೆಖೆಯಿಂದ ಪಾರಾಗಲು ಅವರು ಹೀಗೆ ಮಾಡಿದ್ದರು.