ಇಡ್ಲಿ ತಿನ್ನುವ, ರಾಗಿ ಮುದ್ದೆ ಮತ್ತಿತರ ತಿಂಡಿಗಳನ್ನು ತಿನ್ನುವ ಸ್ಪರ್ಧೆಗಳೆಲ್ಲ ನಡೆಯುತ್ತಿರುತ್ತವೆ. ಹೋಟೆಲ್, ಉಪಾಹಾರ ಗೃಹಗಳಲ್ಲಿ ಹಣ ಕೊಟ್ಟು ತಿಂಡಿ ತಿನ್ನಬೇಕು, ಆದರೆ ಇಂಥ ಸ್ಪರ್ಧೆಗಳಲ್ಲಿ ತಿಂಡಿಯನ್ನೂ ಹೊಟ್ಟೆ ತುಂಬಿ, ಹೆಚ್ಚಾಗುವಷ್ಟು ತಿನ್ನುವುದಲ್ಲದೇ, ಬಹುಮಾನದ ರೂಪದಲ್ಲಿ ರೂಪಾಯಿಯನ್ನೂ ಪಡೆಯಬಹುದು. ಕೆಲವು ಕಡೆಗಳಲ್ಲಂತೂ ಇನ್ನೂ ಆಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ. ಹೀಗಾಗಿ ತುಸು ರಿಸ್ಕ್ ಎನ್ನಿಸಿದರೂ, ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವರು ಮುಂದೆ ಬರುತ್ತಾರೆ.
ಹೀಗೆ ಸಮೋಸಾ ತಿನ್ನುವ ಸ್ಪರ್ಧೆಯಲ್ಲಿ ರಜನೀಶ್ ಜ್ಞಾನಿ ಎಂಬ ಬ್ಲಾಗರ್ ಗೆದ್ದಿದ್ದಾರೆ ಮತ್ತು ಆ ವಿಡಿಯೋವನ್ನು ತಮ್ಮದೇ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ಇವರು ಸದಾ ಸ್ಟ್ರೀಟ್ ಫುಡ್ಗಳ ಬಗ್ಗೆಯೇ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ಅವರು ದೆಹಲಿಯ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಐದೇ ನಿಮಿಷದಲ್ಲಿ ಮೂರು ಕೆಜಿ ತೂಕದ ಸಮೋಸಾ ತಿಂದಿದ್ದಾರೆ. ಅಷ್ಟೇ ಅಲ್ಲ, ಆ ರೆಸ್ಟೋರೆಂಟ್ ಮಾಲೀಕನಿಂದ 11 ಸಾವಿರ ರೂಪಾಯಿ ಬಹುಮಾನವನ್ನೂ ಪಡೆದಿದ್ದಾರೆ. ಇವರ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, 1 ಮಿಲಿಯನ್ಗಳಷ್ಟು ವೀಕ್ಷಣೆ ಕೂಡ ಪಡೆದಿದೆ.
ಇದು ಸ್ಟ್ರೀಟ್ ಫುಡ್ ಚಾಲೆಂಜ್ ಆಗಿದ್ದು, ದೆಹಲಿಯ ರಸ್ತೆ ಬದಿಯೊಂದರ ಉಪಾಹಾರ ಗೃಹದಲ್ಲಿ ಸ್ಪರ್ಧೆ ನಡೆದಿತ್ತು. ಪ್ರಾರಂಭದಲ್ಲಿ ಆ ಹೋಟೆಲ್ ಮಾಲೀಕ ಮತ್ತು ಬ್ಲಾಗರ್ ಸೇರಿ ಸ್ಪರ್ಧೆಯ ನಿಯಮಗಳನ್ನು ವಿವರಿಸುತ್ತಾರೆ. ನಂತರ ಮೂರು ಕೆಜಿ ಸಮೋಸಾ ತಯಾರಿಸುವುದನ್ನೂ ವಿಡಿಯೋದಲ್ಲಿ ತೋರಿಸಲಾಗುತ್ತದೆ. ಬಳಿಕ ಬ್ಲಾಗರ್ ರಜನೀಶ್ ಜ್ಞಾನಿ, ದೊಡ್ಡ ಗಾತ್ರದ ಸಮೋಸಾವನ್ನು ತಿನ್ನುತ್ತಾರೆ. ಆತ ಬಾಯಿಗೆ ತುಂಬಿಕೊಳ್ಳುವುದನ್ನು ನೋಡಿದರೆ ನಮಗೂ ಒಂದು ಕ್ಷಣ ದಿಗಿಲಾಗುತ್ತದೆ. ಆದರೆ ಅವರು ಅದೆಷ್ಟು ವೇಗವಾಗಿ ತಿಂದಿದ್ದಾರೆ ಎಂದರೆ, ಐದೇ ನಿಮಿಷದಲ್ಲಿ ಪೂರ್ತಿ ಸಮೋಸಾ ಖಾಲಿ ಮಾಡಿದ್ದಾರೆ. ಹಾಗೇ, ಬಹುಮಾನವಾಗಿ ಕೈತುಂಬ ಹಣವನ್ನೂ ಗಳಿಸಿದ್ದಾರೆ.
ಇದನ್ನೂ ಓದಿ: Viral Video | ಸುದ್ದಿ ಓದುತ್ತಿದ್ದ ನಿರೂಪಕಿಗೆ ಪೀಕಲಾಟ; ಗಂಟಲು ಕಟ್ಟಿತು, ಮುಖದ ಭಾವವೇ ಬದಲಾಯಿತು !