ನಾನು ನನ್ನ ಹುಡುಗಿಗಾಗಿ ಎಷ್ಟೆಲ್ಲ ಖರ್ಚು ಮಾಡಿದೆ, ಏನೆಲ್ಲ ಮಾಡಿದೆ. ಆದರೆ ಕೊನೆಗೂ ಅವಳು ನನ್ನನ್ನು ಬಿಟ್ಟು ಹೋದಳು, ದುಡ್ಡೂ ಹೋಯ್ತು, ಅವಳೂ ಹೋದ್ಳು ಎಂದು ಪರಿತಪಿಸುವ ಅನೇಕ ಯುವಕರನ್ನು ನಾವು ನೋಡಿದ್ದೇವೆ. ಆದರೆ ಅಪರೂಪವೆಂಬಂತೆ ಇಲ್ಲೊಬ್ಬ ಯುವಕ, ‘ನನಗೆ ನನ್ನ ಗರ್ಲ್ಫ್ರೆಂಡ್ ಮೋಸ ಮಾಡಿ ಹೋದಳು, ಆದರೆ ಆಕೆ ಹೋಗುತ್ತಿದ್ದಂತೆ 25 ಸಾವಿರ ರೂಪಾಯಿ ಹಣ ಬಂತು’. ಇದು ಸಾಧ್ಯವಾಗಿದ್ದು ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್ (Heartbreak Insurance Fund) ನಿಂದಾಗಿ ಎಂದು ಹೇಳಿಕೊಂಡಿದ್ದಾನೆ ಮತ್ತು ಅದು ಹೇಗೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾನೆ.
ಆತನ ಹೆಸರು ಪ್ರತೀಕ್ ಆರ್ಯನ್. ತಾನು 25 ಸಾವಿರ ಪಡೆದ ಬಗ್ಗೆ ಮಾತನಾಡಿದ ಆತ ‘ನಾನು ಮತ್ತು ನನ್ನ ಪ್ರೇಯಸಿ ಸೇರಿ ಜಂಟಿ ಖಾತೆ ತೆರೆದಿದ್ದೆವು. ನಾವು ಅದರಲ್ಲಿ ತಿಂಗಳಿಗೆ 500 ರೂಪಾಯಿ (ತಲಾ) ಠೇವಣಿ ಇಡುತ್ತ ಬಂದೆವು. ಜಂಟಿ ಖಾತೆ ತೆರೆಯುವಾಗ ನಮ್ಮ ಮಧ್ಯೆ ಒಂದು ಒಪ್ಪಂದವೂ ಆಯಿತು. ಇಬ್ಬರಲ್ಲಿ ಯಾರೇ ಮೋಸ ಮಾಡಿದರೂ, ಹೀಗೆ ಡಿಪೋಸಿಟ್ ಹಣ ಇನ್ನೊಬ್ಬರಿಗೆ ಸಂದಾಯವಾಗುತ್ತದೆ. ಸಂಬಂಧವನ್ನು ಮೊದಲು ಮುರಿದುಕೊಳ್ಳುವವರಿಗೆ ಒಂದು ರೂಪಾಯಿಯೂ ಸಿಗುವುದಿಲ್ಲ ಎಂಬುದು ಒಪ್ಪಂದವಾಗಿತ್ತು. ಅದರಂತೆ ನನ್ನ ಪ್ರೇಯಸಿ ಮೊದಲು ಮೋಸ ಮಾಡಿ ಹೋದಳು. ಹೀಗಾಗಿ ಖಾತೆಯಲ್ಲಿದ್ದ 25 ಸಾವಿರ ರೂಪಾಯಿ ಹಣ ನನಗೇ ಸೇರಿತು’ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಪ್ರತೀಕ್ ಮತ್ತು ಆತನ ಪ್ರೇಯಸಿ ಜಂಟಿ ಖಾತೆ ತೆರೆಯುವಾಗ ಅದಕ್ಕೆ ‘ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್’ ಎಂದೇ ಹೆಸರಿಟ್ಟುಬಿಟ್ಟಿದ್ದರು. ನಿಜಕ್ಕೂ ಒಂದಾಗಿದ್ದ ಇಬ್ಬರ ಹೃದಯಗಳ ಮಧ್ಯೆ ಬ್ರೇಕ್ ಆಗಿ, ಈಗ ಹುಡುಗನಿಗೆ ಹಣ ಸಿಕ್ಕಿದೆ.
ಇದನ್ನೂ ಓದಿ: Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಪ್ರತೀಕ್ ಅವರ ಈ ಟ್ವೀಟ್ ಭರ್ಜರಿ ವೈರಲ್ ಆಗುತ್ತಿದೆ. ‘ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಫಂಡ್’ ಎನ್ನುವ ಹೆಸರೇ ನೆಟ್ಟಿಗರನ್ನು ಭರ್ಜರಿ ಆಕರ್ಷಿಸುತ್ತಿದೆ. ಹಲವರು ಕಮೆಂಟ್ ಮಾಡುತ್ತಿದ್ದಾರೆ. ‘ನಾನೂ ಕೂಡ ಹೂಡಿಕೆಗೆ ಆಯ್ಕೆಗಳನ್ನು ಹುಡುಕುತ್ತಿದ್ದೇನೆ. ನೀವು ಹೇಳಿದ್ದನ್ನು ಕೇಳಿದ ಮೇಲೆ ಇದು ಅತ್ಯಂತ ಲಾಭದಾಯಕ ಹೂಡಿಕೆ ಎನ್ನಿಸುತ್ತಿದೆ. ಯಾರಾದರೂ ನನ್ನೊಂದಿಗೆ ಜಂಟಿ ಖಾತೆಗೆ ಬರುವವರು ಇದ್ದೀರಾ?’ ಎಂದು ಒಬ್ಬರು ತಮಾಷೆಯುಕ್ತವಾಗಿ ಪ್ರಶ್ನಿಸಿದ್ದಾರೆ. ‘ಈ ಹಾರ್ಟ್ಬ್ರೇಕ್ ಇನ್ಶೂರೆನ್ಸ್ ಎಂಬುದು ಸ್ವಲ್ಪ ರಿಸ್ಕ್ ಅನ್ನಿಸುತ್ತದೆ, ಈ ಹೂಡಿಕೆ ಮಾಡುವವರು, ಮತ್ತೊಬ್ಬರನ್ನು ಬಿಟ್ಟು ಹೋಗುವ ಮುನ್ನ ಯೋಚಿಸಿ’ ಎಂದಿದ್ದಾರೆ.