Site icon Vistara News

30 ಲಕ್ಷ ರೂ.ಗಾಗಿ ತನ್ನ ಕಿಡ್ನ್ಯಾಪ್‌ ಎಂದು ಅಪ್ಪನಿಗೇ ಸುಳ್ಳು ಹೇಳಿದ ಪುತ್ರಿ; ಮುಂದೇನಾಯ್ತು?

Kota Girl

Man Gets Daughter's Pics With Rs 30 Lakh Ransom Demand, She Had Faked It

ಜೈಪುರ: ಶಾಲೆ ಅಥವಾ ಕಾಲೇಜುಗಳಲ್ಲಿ ಓದುವಾಗ ಖರ್ಚಿಗೆ ದುಡ್ಡು ಬೇಕು ಎಂದರೆ ಕೊಡುವುದಿಲ್ಲ ಎಂದು, ಪುಸ್ತಕ ಖರೀದಿಸಬೇಕು ಎಂದೋ, ನೋಟ್ಸ್‌ ಜೆರಾಕ್ಸ್‌ ಮಾಡಿಸಬೇಕು ಎಂದೋ ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ನೂರಿನ್ನೂರು ರೂಪಾಯಿ ಪಡೆದುಕೊಂಡು ಹೋಗಿ ಬಹುತೇಕ ಜನ ಮಜಾ ಮಾಡಿರುತ್ತಾರೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಓದುತ್ತಿರುವ ಯುವತಿಯೊಬ್ಬಳು 30 ಲಕ್ಷ ರೂಪಾಯಿಗಾಗಿ ತನ್ನನ್ನು ಕಿಡ್ನ್ಯಾಪ್‌ (Kidnap) ಮಾಡಿದ್ದಾರೆ ಎಂದು ಅಪ್ಪನಿಗೇ ಸುಳ್ಳು ಹೇಳಿದ ಚಾಲಾಕಿತನ ಈಗ ಬಯಲಾಗಿದೆ.

ಹೌದು, ಕಾವ್ಯಾ ಧಾಕಡ್‌ ಎಂಬ 21 ವರ್ಷದ ಯುವತಿಯು ವಿದೇಶ ಪ್ರವಾಸಕ್ಕೆ ತೆರಳಬೇಕು ಎಂದು ತಂದೆಗೇ ಕಿಡ್ನ್ಯಾಪ್‌ ಕತೆ ಕಟ್ಟಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಯುವತಿಯು ಕೈಕಾಲು ಕಟ್ಟಿದ ಫೊಟೊಗಳನ್ನು ತನ್ನ ತಂದೆ ಕಳುಹಿಸಿದ್ದಾಳೆ. ನನ್ನನ್ನು ಯಾರೋ ಅಪಹರಿಸಿದ್ದಾರೆ. ಬಿಡುಗಡೆ ಮಾಡಬೇಕು ಎಂದರೆ 30 ಲಕ್ಷ ರೂಪಾಯಿ ಕೇಳುತ್ತಿದ್ದಾರೆ. ದಯಮಾಡಿ ದುಡ್ಡು ಕೊಟ್ಟು, ನನ್ನನ್ನು ಬಿಡಿಸಿಕೊಂಡು ಹೋಗಿ ಅಪ್ಪಾ ಎಂದು ಹೇಳಿದ್ದಾಳೆ. ಇದನ್ನು ನಂಬಿದ ಆಕೆಯ ತಂದೆಯು ಮಾರ್ಚ್‌ 18ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿಯ ಕಳ್ಳಾಟ ಬಯಲಾಗಿದ್ದು ಹೇಗೆ?

ನೀಟ್‌ ಅಭ್ಯರ್ಥಿಯಾಗಿರುವ ಯುವತಿಯನ್ನು 2023ರ ಆಗಸ್ಟ್‌ನಲ್ಲಿ ಆಕೆಯ ತಂದೆಯು ರಾಜಸ್ಥಾನದ ಕೋಟಾ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ ಸೇರಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲೂ ಅವರು ನನ್ನ ಮಗಳು ಕೋಟಾದ ಕೋಚಿಂಗ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಕಾವ್ಯಾ ಇಂದೋರ್‌ನಲ್ಲಿ ಇರುವುದು ಲೊಕೇಷನ್‌ ಟ್ರೇಸ್‌ ಮೂಲಕ ಪತ್ತೆಯಾಗಿದೆ. ಕೋಟಾ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, ದುಡ್ಡಿಗಾಗಿ ಮಗಳು ನಾಟಕವಾಡಿರುವುದು ಬಯಲಾಗಿದೆ.

ಇದನ್ನೂ ಓದಿ: Sadguru Jaggi Vasudev: ಆಸ್ಪತ್ರೆ ಬೆಡ್‌ನಲ್ಲೂ ಸದ್ಗುರು ಜಗ್ಗಿ ವಾಸುದೇವ್‌ ತಮಾಷೆ! ವೈರಲ್‌ ಆಯ್ತು ವಿಡಿಯೋ

ಕೋಚಿಂಗ್‌ ಸೆಂಟರ್‌ನಲ್ಲಿದ್ದಿದ್ದು ಎರಡನೇ ದಿನ

2023ರ ಆಗಸ್ಟ್‌ 3ರಂದು ಕಾವ್ಯಾ ಕೋಟಾದಲ್ಲಿರುವ ಕೋಚಿಂಗ್‌ ಸೆಂಟರ್‌ ಪ್ರವೇಶಿಸಿದ್ದಾಳೆ. ಆಗಸ್ಟ್‌ 5ರವರೆಗೆ ಮಾತ್ರ ಆಕೆ ಕೋಚಿಂಗ್‌ ಸೆಂಟರ್‌ನಲ್ಲಿದ್ದು, ಇದಾದ ಬಳಿಕ ಆಕೆ ಇಂದೋರ್‌ನಲ್ಲಿ ಫ್ರೆಂಡ್ಸ್‌ ಜತೆ ನೆಲೆಸಿದ್ದಾಳೆ. ಆದರೆ, ಆಕೆಯ ತಂದೆಯು ಮಗಳು ಕೋಟಾದಲ್ಲಿಯೇ ಅಧ್ಯಯನ ಮಾಡುತ್ತಿದ್ದಾಳೆ ಎಂದು ತಿಳಿದು ಪ್ರತಿ ತಿಂಗಳು ದುಡ್ಡು ಕಳುಹಿಸಿದ್ದಾರೆ. ಇನ್ನು ಕಾವ್ಯಾಳಿಗೆ ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂಬ ಆಸೆ ಇದ್ದು, ಇದಕ್ಕಾಗಿ ಆಕೆ ಕಿಡ್ನ್ಯಾಪ್‌ ಕತೆ ಕಟ್ಟಿದ್ದಾಳೆ ಎಂಬುದನ್ನು ಪೊಲೀಸರ ವಿಚಾರಣೆ ವೇಳೆ ಆಕೆಯೇ ಒಪ್ಪಿಕೊಂಡಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version