Site icon Vistara News

ಮರ್ಲಿನ್‌ ಮನ್ರೋ | ನಟಿಗೆ ಸೇರಿದ ಖಾಸಗಿ ಪತ್ರ ಹರಾಜಿಗೆ! ಬೆಲೆ ಎಷ್ಟು ಗೊತ್ತೆ?

Marilyn Monroe letter

ತನ್ನ ಮಾದಕ ಸೌಂದರ್ಯದಿಂದ ಜನಮಾನಸದಲ್ಲಿ ಶಾಶ್ವತ ನೆಲೆ ಗಿಟ್ಟಿಸಿ ದಂತಕತೆಯಾಗಿ ಹೋದ ಹಾಲಿವುಡ್‌ ತಾರೆ ಮಲ್ರಿನ್‌ ಮನ್ರೋಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದಾದ ಸಮಯವೀಗ ಬಂದಿದೆ. ಮನ್ರೋ ಬಳಸಿದ ವಸ್ತುಗಳು ಹರಾಜಿಗೆ ಬರುವ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಮೂಡಿಸುವ ಮೂಲಕ ಆಕೆ ಮತ್ತೆ ಸುದ್ದಿಯಲ್ಲಿದ್ದಾರೆ.

ಎಲ್ಲ ವಸ್ತುಗಳೂ ಬಳಸಿದ ಮೇಲೆ ತನ್ನ ಬೆಲೆಯನ್ನು ಕಳೆದುಕೊಂಡರೆ, ಸೆಲೆಬ್ರಿಟಿಗಳ ಕೈಗೆ ಸಿಗುವ ವಸ್ತುಗಳು ಮಾತ್ರ ಇದಕ್ಕೆ ವೈರುಧ್ಯವೆನಿಸುತ್ತವೆ. ಯಾಕೆಂದರೆ, ಸೆಲೆಬ್ರಿಟಿಗಳೆಂದರೆ ಸುಮ್ನೇನಾ, ಅವರೇನು ಬಳಸಿದರೂ ಆ ವಸ್ತು ತನ್ನ ಬೆಲೆಯನ್ನು ಏರಿಸಿಕೊಂಡುಬಿಡುತ್ತದೆ. ಈ ಬಾರಿ, ಈ ಸರದಿ ಮನ್ರೋಳದ್ದು. ಮನ್ರೋ ತೀರಿಕೊಂಡು ೬೦ ವರ್ಷಗಳೇ ಕಳೆದರೂ, ಆಕೆ ಬಳಸಿದ ವಸ್ತುಗಳ್ಯಾವುವೂ ತನ್ನ ಬೆಲೆ ಕಳೆದುಕೊಂಡಿಲ್ಲ. ಬದಲಾಗಿ ಹೆಚ್ಚಿಸಿಕೊಂಡು, ಬೇಡಿಕೆಯನ್ನೂ ಕುದುರಿಸಿಕೊಂಡು ಈಗ ಇದೇ ಡಿಸೆಂಬರ್‌ ತಿಂಗಳಲ್ಲಿ ಹರಾಜಾಗಲಿವೆ.

ದಿ ನ್ಯೂಯಾರ್ಕ್‌ ಪೋಸ್ಟ್‌ ಪ್ರಕಾರ, ಮನ್ರೋ ಬಳಸಿದ ಸುಮಾರು ೧೭೫ಕ್ಕೂ ಹೆಚ್ಚು ವಸ್ತುಗಳು ಹರಾಜಿಗೆ ಲಭ್ಯವಿದ್ದು, ಇದರಲ್ಲಿ ಆಕೆಗೆ ಸಂಬಂಧಿದ ಸಾಕಷ್ಟು ಖಾಸಗಿ ವಸ್ತುಗಳಿವೆ. ಆಕೆಯ ಅಪ್ಪ ಚಾರ್ಲ್ಸ್‌ ಸ್ಟ್ಯಾನ್ಲಿ ಜಿಫೋರ್ಡ್‌ ಆಕೆಗೆ ಬರೆದ ಪತ್ರವೂ ಇದ್ದು, ಈ ಪತ್ರದ ಜೊತೆಗೆ ಆತನ ಕೈಬರಹವಿರುವ ಗ್ರೀಟಿಂಗ್‌ ಕಾರ್ಡ್‌ ಕೂಡಾ ಇದೆ. ಈ ಪತ್ರವೊಂದೇ ಸುಮಾರು ೨೦೦೦ದಿಂದ ೩೦೦೦ ಡಾಲರ್‌ಗಳಿಗೆ ಬಿಕರಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಗಿಫೋರ್ಡ್‌ ಹಾಗೂ ಮಗಳು ಮನ್ರೋ ನಡುವಿನ ಬಾಂಧವ್ಯಕ್ಕೆ ಸಂಬಂಧಿಸಿ ದೊರೆತ ಒಂದೇ ಒಂದು ವಸ್ತು ಇದಾಗಿದೆ. ಯಾಕೆಂದರೆ, ಮನ್ರೋ ತಂದೆ ಈತನೆಂಬ ಸತ್ಯ ಇತ್ತೀಚೆಗಷ್ಟೇ ಡಿಎನ್‌ಎ ಪರೀಕ್ಷೆಗಳ ಮೂಲಕ ಬಯಲಾಗಿತ್ತು. ಹಾಗಾಗಿ ಈ ಪತ್ರವೊಂದೇ ಆಕೆ ಹಾಗೂ ಆಕೆಯ ನಿಜವಾದ ತಂದೆಯ ನಡುವಿನ ಬಾಂಧವ್ಯಕ್ಕೆ ಕುರುಹಾಗಿದೆ ಎಂಬ ಕಾರಣಕ್ಕೆ ಇದು ಮಹತ್ವ ಪಡೆದುಕೊಂಡಿದೆ. ಈ ಪತ್ರ ಮನ್ರೋ ಆಸ್ಪತ್ರೆಯಲ್ಲಿದ್ದಾಗ ಕಳುಹಿಸಿದ್ದಾಗಿದ್ದು, ಇದರಲ್ಲಿ ದಿನಾಂಕ ಸರಿಯಾಗಿ ನಮೂದಾಗಿಲ್ಲ ಎಂದು ಹೇಳಲಾಗಿದೆ. ಆದರೂ, ಆಕೆಗೆ ಸೇರಿದ ವಸ್ತುಗಳ ಪೈಕಿ ಈ ಪತ್ರ ಭಾರೀ ಸುದ್ದಿಯಲ್ಲಿದೆ.

ಹರಾಜು ನಡೆಸಲಿರುವ ಜೂಲಿಯನ್ಸ್‌ ಆಕ್ಷನ್ಸ್‌ ಸಂಸ್ಥೆಯ ಪ್ರಕಾರ, ಈ ಗ್ರೀಟಿಂಗ್‌ ಕಾರ್ಡನ್ನು ಖುದ್ದು ಆಕೆಯ ಅಪ್ಪನೇ ಆಕೆಗೆ ಕೊಟ್ಟು ಹೋಗಿರವುದರಿಂದ ಇದು ಆಕೆಯ ಜೀವನ ಚರಿತ್ರೆಯ ಮುಖ್ಯ ಭಾಗವಾಗಿದೆ. ಬೇಗ ಗುಣಮುಖಳಾಗು ಎಂದು ಹೇಳುವ ಪುಟಾಣಿ ಕಾರ್ಡು, ಆಕೆಯ ಬಗೆಗೆ ಅಪ್ಪನಿಗಿದ್ದ ಕಾಳಜಿ ಪ್ರೀತಿಯನ್ನು ಹೇಳುತ್ತದೆ. ಹಾಗಾಗಿ ಇದು ಆಕೆಯ ಜೀವನ ಚರಿತ್ರೆಯ ಬಹುಮುಖ್ಯವಾದ ಅಧ್ಯಾಯ ಎಂದು ಅದು ಹೇಳಿದೆ.

ಇದನ್ನೂ ಓದಿ | Britain Royal Family | ಬ್ರಿಟನ್ ರಾಯಲ್ ಫ್ಯಾಮಿಲಿಯ ಸ್ಟೋರಿಗಳು ಸಖತ್ ಇಂಟರೆಸ್ಟಿಂಗ್‌!

ಮನ್ರೋ ವಸ್ತುಗಳು ಹರಾಜಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಮೊದಲೂ ನಡೆದಿದ್ದು, ಹರಾಜು ಸಂಸ್ಥೆಗಳು ಈಕೆಯ ವಸ್ತುಗಳನ್ನಿಟ್ಟುಕೊಂಡು ಭಾರೀ ಲಾಭ ಮಾಡಿಕೊಂಡಿವೆ. ಆಕೆ ೧೯೫೬ರಲ್ಲಿ ಧರಿಸಿದ ಕಪ್ಪು ಬಣ್ಣದ ಸ್ಯಾಟಿನ್‌ ಬ್ಲೌಸ್‌ ನೆಕ್‌ಟೈ ಜೊತೆಗೆ ೪೩,೭೫೦ ಡಾಲರ್‌ಗಳಿಗೆ ಅಂದರೆ ೩೧.೪೦ ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು ಎಂದರೆ ಊಹಿಸಿ. ಇನ್ನು, ೧೯೬೧ರಲ್ಲಿ ಮನ್ರೋಗೆ ದಕ್ಕಿದ ಪ್ರತಿಷ್ಟಿತ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ೨೫೦,೦೦೦ ಡಾಲರ್‌ಗೆ ಅಂದರೆ ಅಂದಾಜು ೧.೭೫ ಕೋಟಿ ರೂಪಾಯಿಗಳಿಗೆ ೨೦೧೮ರಲ್ಲಿ ಮಾರಾಟವಾಗಿತ್ತು. ಆಕೆಯ ೧೯೫೬ರ ರೇವನ್‌ ಬ್ಲ್ಯಾಕ್‌ ಫೋರ್ಡ್‌ ಥಂಡರ್ಬರ್ಡ್‌ ೪೯೦,೦೦೦ ಡಾಲರ್‌ಗಳಿಗೆ ಅಂದರೆ ೩.೫೧ ಕೋಟಿ ರೂಪಾಯಿಗಳಿಗೆ ಮಾರಾಟ ಕಂಡಿತ್ತು.

ಮನ್ರೋ ೧೯೬೨ರಲ್ಲಿ ಮರಣ ಹೊಂದಿದ್ದು, ಆಕೆಯ ಸಿನಿಮಾಗಳು ೨೦೦ ಮಿಲಿಯನ್‌ ಡಾಲರ್‌ಗಳಷ್ಟು ದುಡ್ಡನ್ನು ಕೊಳ್ಳೆಹೊಡೆದಿವೆ. ಅಂದಿನ ಕಾಲದ ಅತ್ಯಂತ ಹೆಚ್ಚು ಸಂಬಾವನೆ ಪಡೆಯುತ್ತಿದ್ದ ನಾಯಕಿ ನಟಿ ಈಕೆಯಾಗಿದ್ದು, ಜಗತ್ತಿನಾದ್ಯಂತ ಮನೆಮಾತಾದ ನಟಿ. ೧೯೯೯ರ ಹಾಲಿವುಡ್‌ ಗೋಲ್ಡನ್‌ ಏಜ್‌ ಪಟ್ಟಿಯಲ್ಲಿ ದಂತಕತೆಯಾದ ನಾಯಕಿಯರ ಪಟ್ಟಿಯಲ್ಲಿ ಮನ್ರೋ ಅಗ್ರಗಣ್ಯೆ.

ಇದನ್ನೂ ಓದಿ | Star Winter Fashion | ಪರಿಸರ ಸ್ನೇಹಿ ಕ್ಯಾಲೆಂಡರ್‌ ಡ್ರೆಸ್‌ನಲ್ಲಿ ನಟಿ ಸೋನಂ ಕಪೂರ್‌

Exit mobile version